Important

ಕೇಣಿಯಲ್ಲಿ ವಿಜೃಂಭಿಸುತ್ತಿರುವ ನವರಾತ್ರಿ, ದಸರಾ ಉತ್ಸವ : ದೇವಿ ಮಹಾತ್ಮೆ ನೋಡಲು ಖುದ್ದು ಕೇಣಿಗೆ ಬರುತ್ತಿದ್ದಾರೆ ಕಿರುತೆರೆಯ ದೇವಿ ಪಾತ್ರಧಾರಿ

ಅಂಕೋಲಾ :ತಾಲೂಕಿನ ಕೇಣಿಯ ಸಾರ್ವಜನಿಕ ನವರಾತ್ರಿ ಉತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ ದೇವಿ ಮೂರ್ತಿ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ವರ್ಷಂಪ್ರತಿಯಂತೆ ಶ್ರೀ ದುರ್ಗಾ ಮಾತೆಯನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜೆ, ಹೋಮ, ಹವನ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ವಿಜೃಂಭಣೆಯಿಂದ ಮುನ್ನಡೆದಿದೆ ಖಾಸಗಿ ಟಿ.ವಿ ( ವಾಹಿನಿಯಲ್ಲಿ) ಪ್ರಸಾರವಾಗುವ ಶ್ರೀ ದೇವಿ ಮಾಹಾತ್ಮೆ ಧಾರಾವಾಹಿಯಲ್ಲಿ ದೇವಿ ಪಾತ್ರದ ಮೂಲಕ ಜನ ಮೆಚ್ಚುಗೆ ಪಡೆದ ಜೀವಿತಾ ವಸಿಷ್ಠ ಅವರ ಅಭಿನಯ ಮೆಚ್ಚಿದ ಕೇಣಿಯ ಸಾರ್ವಜನಿಕ ನವರಾತ್ರಿ ಉತ್ಸವ ಸಮಿತಿಯವರು, ಅವಳ ಪಾತ್ರದ ರೂಪದಲ್ಲಿಯೇ ತಮ್ಮ ಉತ್ಸವ ಮೂರ್ತಿ ಮಾಡಿ ಕೊಡುವಂತೆ ಮೂರ್ತಿ ಕಲಾಕಾರಲ್ಲಿ ಕೇಳಿಕೊಂಡಾಗ, ಮೂರ್ತಿ ತಯಾರಿಕೆಯಲ್ಲಿ ನಿಪುಣರಾದ ಅಂಕೋಲಾ ತಾಲ್ಲೂಕಿನ ಅವರ್ಸಾದ ಮೂರ್ತಿ ಕಲಾಕಾರಾದ ದಿನೇಶ ಮೇತ್ರಿ ಅವರು, ಭಕ್ತಾದಿಗಳ ಕಣ್ಮನ ಸೆಳೆಯುವಂತೆ, ದೇವಿ ಮೂರ್ತಿ ಮಾಡಿ ಕೊಟ್ಟಿದ್ದಾರೆ .

ಆಗಮಿಸಲಿದ್ದಾರೆ ಕಿರುತೆರೆ ನಟಿ

ಉತ್ಸವದ ಅಂಗವಾಗಿ, ಕೇಣಿಯಲ್ಲಿ ಸೆ 30 ರಂದು ಅನ್ನ ಸಂತರ್ಪಣೆ, ಅ 1 ರಂದು ಕುಂಕುಮಾರ್ಚನೆ ವಿಶೇಷ ಸೇವೆ ಹಾಗೂ ಮಹಾಪೂಜೆ, ಅ 2ರಂದು ಸಂಜೆ ಶ್ರೀ ದೇವಿಯ ವಿಸರ್ಜನಾ ಮೆರವಣಿಗೆ ನಡೆಯಲಿದ್ದು ,ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿ ಪ್ರಸಾದ ಸ್ವೀಕರಿಸಿ, ತನು ಮನ ಧನ ಸಹಾಯ ಸಹಕಾರ ನೀಡಿ ತಾಯಿ ಕೃಪೆಗೆ ಪಾತ್ರರಾಗುವಂತೆ, ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿ ಕೇಣಿ ಹಾಗೂ ಊರ ನಾಗರಿಕರು ವಿನಂತಿಸಿದ್ದಾರೆ.

ದೇವಿ ಮಹಾತ್ಮೆ ಧಾರವಾಹಿಯಲ್ಲಿ ದೇವಿ ಪಾತ್ರದ ಮೂಲಕ ತನ್ನ ಅಭಿನಯದಿಂದ ಕೊಟ್ಯಾಂತರ ಜನರ ಮನಗೆದ್ದ ಹೆಸರಾಂತ ಕಿರುತೆರೆ ನಟಿ ಜೀವಿತಾ ವಸಿಷ್ಠ ಅವರು , ಕೇಣಿ ಭಾಗದಲ್ಲಿ ಪ್ರತಿಷ್ಠಾಪಿಸಿದ ದೇವಿ ಮೂರ್ತಿ ದರ್ಶನ ಭಾಗ್ಯ ಪಡೆದುಕೊಳ್ಳಲು ಮತ್ತು ಇಲ್ಲಿನ ಅಭಿಮಾನಿಗಳಿಗೆ ಕೃತಜ್ಞತೆ ಸೂಚಿಸಲು ಸೆ 29 ರ ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಕೇಣಿ ಗ್ರಾಮಕ್ಕೆ ಆಗಮಿಸಲಿದ್ದು ಸ್ಥಳೀಯರೂ ಸ್ವಾಗತಕ್ಕೆ ಸಜ್ಜಾಗಿ ನಿಂತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button