ಖ್ಯಾತ ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ವಿಧಿವಶ: ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ” ಎನ್ನುತ್ತಲೇ ಲೀನವಾದೆಯಾ ಕವಿಯೇ…
ಲೇಖನ: ಉಮೇಶ ಮುಂಡಳ್ಳಿ ಭಟ್ಕಳ : 9945840552
ಕೆ ಎಸ್ ನರಸಿಂಹ ಸ್ವಾಮಿಗಳ ನಂತರ ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆ ಕವಿಯೆಂದೆ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದ ಎದೆಯೆದೆಗೂ ಪ್ರೀತಿಯ ಮಳೆ ಸುರಿಸಿದ ಸಹೃದಯಿ ಕವಿ ಡಾ.ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಇಂದು ಇಹಲೋಕ ತ್ಯಜಿಸಿದ್ದಾರೆ.ಎನ್ ಎಸ್ ಎಲ್ ಎಂದೇ ಮನೆಮಾತಾಗಿರುವ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ’ರು, ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರು. ಬಾಲ್ಯದಿಂದಲೇ ಅವರ ಅದೆಷ್ಟೊ ಭಾವಗೀತೆಗಳನ್ನು ಹಾಡುತ್ತಲೇ ಬಂದ ನಾನು ಈಗಲೂ ಅವರ ಅದೆಷ್ಟೋ ಗೀತೆಗಳನ್ನು ವೇದಿಕೆಗಳಲ್ಲಿ ಹಾಡುತ್ತ ಬರುತ್ತಿದ್ದೇನೆ. ಅವರ ‘ಬನ್ನಿ ಭಾವಗಳೆ ಬನ್ನಿ ನನ್ನೆಡೆಗೆ ಕರೆಯುವೆ ಕೈ ಬೀಸಿಬತ್ತಿದೆದೆಯಲಿ ಬೆಳೆಯಿರಿ ಹಸಿರನುಪ್ರೀತಿಯ ಮಳೆ ಸುರಿಸಿ’ಹಾಡುವಾಗಲೆಲ್ಲ ಕಣ್ಣು ತೇವವಾಗದೇ ಇರದು.ಅಂತಹ ಎದೆ ತುಂಬುವ ಸಾಹಿತ್ಯ ಅವರದು. “ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿಈಗ ಯಾಕೆ ಜ್ವಲಿಸುತ್ತಿದೆ ಏನೊ ಶಂಕೆ ಭೀತಿ”ಅದೆಷ್ಟು ಬಾರಿ ಹಾಡಿದೆನೊ ನಾ ತಿಳಿಯೆ. ಮತ್ತೆ ಮತ್ತೆ ಹಾಡಬೇಕೆನ್ನುವ ಆಪ್ತವಾಗುವ ಅದೆಷ್ಟೊ ಭಾವಗೀತೆಗಳು ಅವರದು.ಭಟ್ಟರು ’ಭಾವಗೀತೆ, ಗಳ ಜೊತೆಗೆ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳು, ಮುಂತಾದ ಹಲವರು ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದಾರೆ. ಇಂತಹ ಜನರೆದೆಯ ಕವಿ ಇಂದು ನಮ್ಮನ್ನಗಲಿದ ನೋವಲ್ಲೂ ಅವರ ಬಗ್ಗೆ ಒಂದಿಷ್ಟು ತಿಳಿಯೋಣ ಎನ್ನುವ ಹಂಬಲದೊಂದಿಗೆ ಈ ನನ್ನ ಪ್ರಯತ್ನ.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಶಿವಮೊಗ್ಗದಲ್ಲಿ ‘ಇಂಟರ್ ಮೀಡಿಯೆಟ್ ಮುಗಿಸಿ’, ಕನ್ನಡ ’ಎಂ.ಎ. ಆನರ್ಸ್ ಪದವಿ’ ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಬುದ್ದಿವಂತರಾದ ಭಟ್ಟರು ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದಂತವರು. ತುಂಬಾ ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ ಅವರದು.ಹಿರಿಯ ಕವಿ ’ತೀನಂಶ್ರೀ’ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡಿದ್ದರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿಕೊಂಡರು. ’ಅಧ್ಯಾಪಕ’, ’ರೀಡರ್’, ’ಪ್ರಾಧ್ಯಾಪಕ’, ’ನಿರ್ದೇಶಕರೂ ಆದರು. ’ಆಧುನಿಕ ಕನ್ನಡ ಕಾವ್ಯ’ ಕುರಿತು ಪ್ರಬಂಧ ಮಂಡಿಸಿ ಮೈಸೂರು ವಿವಿಯಿಂದ ಪಿಎಚ್ ಡಿ ಪಡೆದುಕೊಂಡರು.
ಇವರು’ತೀನಂಶ್ರೀ’, ‘ಸಿಡಿಎನ್’, ‘ಡಿಎಲ್ಎನ್’, ‘ಶ್ರೀಕಂಠ ಶಾಸ್ತ್ರಿ’ ಮೊದಲಾದ ಶ್ರೇಷ್ಟ ಮಟ್ಟದ ಆಚಾರ್ಯರ ಚಿಂತನ ಧಾರೆಯಿಂದ ಪ್ರಭಾವಿತರಾಗಿದ್ದರು ಎಂದೇ ಹೇಳಲಾಗುತ್ತದೆ.
ಲಕ್ಷ್ಮೀ ನಾರಾಯಣ ಭಟ್ಟರು ಅನೇಕ ಇಂಗ್ಷೀಷ್ ಕವಿತೆಗಳನ್ನು ಸಾನೆಟ್ ಗಳನ್ನು ಸಮರ್ಥವಾಗಿ ಕನ್ನಡಕ್ಕೆ ತಂದರು. ಶೇಕ್ಸಪಿಯರನ ಐವತ್ತು ಸಾನೆಟ್ಟುಗಳ ಸುನೀತ, ಯೇಟ್ಸ ಕವಿಯ ಐವತ್ತು ಕವನಗಳ ‘ಚಿನ್ನದ ಹಕ್ಕಿ’ ’ಭಾರತೀಯ ಗ್ರಂಥ ಸಂಪಾದನಾ ಪರಿಚಯ’,’ವೆಂಬ ಅನುವಾದ ಗ್ರಂಥ ಇಂದಿಗೂ ಗ್ರಂಥ ಪಾಠ ಶೋಧನೆಯಲ್ಲಿ ನಿರತರಾದ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾದ ಹೊತ್ತಿಗೆಯಾಗಿಯೇ ಉಳಿದಿದೆ. ಭಟ್ಟರ ಅತ್ಯಂತ ಸಮರ್ಥ ಅನುವಾದಗಳಲ್ಲಿ, ’ಯೇಟ್ಸ್’, ’ಶೇಕ್ಸ್ ಪಿಯರ್’, ’ಎಲಿಯಟ್’ ಕವಿಗಳ ಕೃತಿಗಳ ಕುರಿತು ತಮ್ಮ ಅನುವಾದ ಕೃತಿಗಳಿಗಾಗಿ ಮೂರುಬಾರಿ ಕರ್ನಾಟಕ ’ಸಾಹಿತ್ಯ ಅಕಾಡೆಮಿಯ ಬಹುಮಾನ’ಗಳನ್ನು ಪಡೆದುಕೊಂಡಿದ್ದರು. ೧೯೯೦ ರಲ್ಲಿ ತಮ್ಮ ಸಮಗ್ರ ಸಾಹಿತ್ಯ ಸೇವೆಗೆ ’ಶಿವರಾಮಕಾರಂತ ಪ್ರಶಸ್ತಿ’ಯನ್ನು ಪಡೆದಿದ್ದರು. ಪ್ರಶಸ್ತಿಗಾಗಿ ಬೆನ್ನುಹತ್ತದ ಅವರನ್ನು ’ರಾಜ್ಯೋತ್ಸವ ಪ್ರಶಸ್ತಿ’, ’ಮಾಸ್ತಿಪ್ರಶಸ್ತಿ’, ವರ್ಧಮಾನ ಪ್ರಶಸ್ತಿ’ಗಳಂತ ಹತ್ತು ಹಲವಾರು ಪ್ರಶಸ್ತಿಗಳು ಅರಸಿ ಬಂದಿದ್ದವು.
’ಶಿಶುಸಾಹಿತ್ಯ’ ವನ್ನು ಇಷ್ಟ ಪಟ್ಟು ಬರೆದಿರುವ ಭಟ್ಟರು ಜಗನ್ನಾಥ ವಿಜಯ, ಮುದ್ರಾಮಂಜೂಷದಂತಹ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ’ಎನ್.ಸಿ.ಆರ್.ಟಿ’ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, ’ಮೃಚ್ಛಕಟಿಕ’, ’ಇಸ್ಪೀಟ್ ರಾಜ್ಯ’, ’ಟ್ವೆಲ್ಫ್ತ್ ನೈಟ್’, ಮತ್ತು ’ಭಾರತೀಯ ’ಗ್ರಂಥ ಸಂಪಾದನಾ ಪರಿಚಯ’, ’ಕನ್ನಡ ಮಾತು’ ಎನ್ನುವ ಪುಟ್ಟ-ಗ್ರಂಥ.
ಲಕ್ಷ್ಮೀ ನಾರಾಯಣ ಭಟ್ಟರನ್ನು ಜನಮಾನಸದಲ್ಲಿ ನೆಲೆಯಾಗುವಂತೆ ಮಾಡಿದ್ದರಲ್ಲಿ ಭಾವಗೀತೆ ಪಾತ್ರ ಅತಿ ಮುಖ್ಯವಾದದ್ದದ್ದು.ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ, ಭಟ್ಟರು ರಚಿಸಿದ ಗೀತೆಗಳ ಸಂಖ್ಯೆ ಅಪಾರ. ಭಾವಗೀತೆಗಳ ಮಹತ್ವ ಕಡಿಮೆ ಆದೀತೋ ಎನೋ ಎನ್ನುವ ಕಾಲದಲ್ಲಿ ಭಟ್ಟರು ಬರೆದ ಅನೇಕ ’ಭಾವಗೀತೆ’ಗಳು ಮರಳಿ’ ಸಹೃದಯಿ ಸಾಹಿತ್ಯ ಸಂಗೀತ ಪ್ರೇಮಿಗಳ ಬಾಯಿಯಲ್ಲಿ ಗುನುಗುಟ್ಟುವಂತಾಯಿತು.
ಸುಗಮ ಸಂಗೀತ ದಿಗ್ಗಜರುಗಳಾದ ’ಶಿವಮೊಗ್ಗ ಸುಬ್ಬಣ್ಣ’, ’ಸಿ.ಅಶ್ವಥ್’, ’ಮೈಸೂರು ಅನಂತಸ್ವಾಮಿ’, ’ಎಚ್.ಕೆ.ನಾರಾಯಣ’ರತ್ನಮಾಲಾ ಪ್ರಕಾಶ ಮೊದಲಾದ ಅನೇಕ ಸುಗಮ ಸಂಗೀತ ಗಾಯಕರು’, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತು, ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ, ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ ಇಂತಹ ನೂರಾರು ಗೀತೆಗಳನ್ನು ಕೊಟ್ಟ ಡಾ. ಲಕ್ಷ್ಮೀನಾರಾಯಣ ಭಟ್ಟರು, ಆ ಕಾಲದಲ್ಲೇ ಹಲವಾರು ‘ಧ್ವನಿ ಸುರಳಿ’ಗಳನ್ನು ಹೊರತಂದು ಜನಸಾಮಾನ್ಯರ ಎದೆಗೆ ಸಾಹಿತ್ಯ ಸಂಗೀತದ ಗೀಳು ಹಚ್ಚಿಸಿದ್ದರು.ದೀಪಿಕಾ’ ’ಭಾವಸಂಗಮ’ ’ನೀಲಾಂಜನ’ ’ಬಾರೋ ವಸಂತ’ ’ಕವಿತಾ’ ’ಮಾಧುರಿ’ ’ಮಂದಾರ’ ’ಬಂದೆ ಬರತಾವ ಕಾಲ’ ’ಅರುಣ ಗೀತೆ, ’ಊರ ಹೊರಗೆ,’ಪ್ರೀತಿ’ ’ಸವಾರಿ’ ’ಸೀಮಂತಿನಿ’ ’ಮೊದಲಾದ ಸಮರ್ಥ ಕವನ ಸಂಕಲನಗಳನ್ನು ನೀಡಿದ್ದರು.
ಸಾಹಿತ್ಯ ಸೇವೆಗೆ ಜೊತೆ ಜೊತೆಗೆ ಭಟ್ಟರು ಅನೇಕ ಯುವ ಕವಿ ಗಾಯಕರಿಗೆ ಸ್ವತಃ ಪ್ರೋತ್ಸಾಹ ನೀಡಿ ಬೆಳೆಸಿದ್ದರು.ಇಂದು ಸಾಕಷ್ಟು ಹೆಸರು ಮಾಡಿರುವಂತ ಅನೇಕ ಸಾಹಿತಿಗಳು ಸುಗಮ ಸಂಗೀತ ಗಾಯಕರು ಈ ಬಗ್ಗೆ ಅನೇಕ ಕಡೆ ಹೇಳಿಕೊಂಡಿರುತ್ತಾರೆ. ಭಟ್ಟರ ಈ ಹೃದಯ ಶ್ರೀಮಂತಿಕೆ ಈ ಎಲ್ಲವನ್ನೂ ಮೀರಿದ್ದು ಎನ್ನಬಹುದು.’ಭಟ್ಟರ ಪ್ರತಿಮಾ ನಿರ್ಮಾಣ ಸಾಮರ್ಥ್ಯ’ ’ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಪ್ರಾಮಾಣಿಕ ಪ್ರಯತ್ನ’, ’ಸಾಕಷ್ಟು ಸಾಧನೆ ಮತ್ತು ಎಚ್ಚರದಿಂದ ಮೈಗೂಡಿಸಿಕೊಂಡ ಭಾಷಾ ಪ್ರಯೋಗದ ಹದ’ ಹಾಗೂ ಬಿಗಿ’ ಅವರ ಕಾವ್ಯ ಶಕ್ತಿಯ ಬಗೆಗೆ ಭರವಸೆಯನ್ನು ಹುಟ್ಟಿಸುತ್ತವೆ. ಇವರು ಶಿಶುನಾಳ ಶರೀಫ್ ಸಾಹೇಬ’ರ ತತ್ವಪದಗಳನ್ನು ಕಲೆಹಾಕಿ ಸಮರ್ಥ ಟೀಕೆ-ಟಿಪ್ಪಣಿ ಪ್ರಸ್ತಾವನೆಗಳೊಂದಿಗೆ ಪ್ರಕಟಿಸಿದ್ದು ಇದು ಕರ್ನಾಟಕದಲ್ಲಿ ಅತಿ ಜನಪ್ರಿಯತೆಯನ್ನು ಗಳಿಸಿದೆ.
ಕನ್ನಡ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಸೇವೆ ಸಲ್ಲಿಸಿ ನೂರಾರು ಜನಪ್ರಿಯ ಭಾವಗೀತೆಗಳನ್ನು ಕೊಟ್ಟು ಕರುನಾಡಿನ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಪ್ರತಿ ಮನೆ ಮನದಲ್ಲೂ ತನ್ನ ಗೀತೆಗಳ ಮೂಲಕ ನೆಲೆಯಾಗಿ ಭೌತಿಕವಾಗಿ ಇಂದು ಮರೆಯಾದ ಸಹೃದಯಿ ಸಜ್ಜನ ಕವಿ ಮತ್ತೊಮ್ಮೆ ಈ ನಾಡಿನಲ್ಲಿಯೇ ಹುಟ್ಟಿ ಬರಲಿ ಇನ್ನಷ್ಟು ಕವಿ ಗಾಯಕರಿಗೆ ಅವರು ಪ್ರೇರಣೆಯಾಗಲಿ ಎನ್ನುವ ಬಯಕೆ ಈ ನಾಡಿನ ಸಹೃದಯಿ ಯುವ ಕವಿ ಗಾಯಕರದ್ದಾಗಿದೆ
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888