Follow Us On

WhatsApp Group
Big News
Trending

ಮನೆಯಲ್ಲೇ ಶುದ್ಧ ಕುಂಕುಮ ತಯಾರಿಸುವುದು ಹೇಗೆ?ಕಲಬೆರಕೆ ಕುಂಕುಮ ಕಂಡುಹಿಡಿಯುವ ಉಪಾಯವೇನು?

ಉತ್ತಮ ಕುಂಕುಮಕ್ಕೆ ಬಳಸುವ ಎಲ್ಲ ವಸ್ತುಗಳ ಅಂದಾಜು ಬೆಲೆ 300 ರೂ ಇರುತ್ತದೆ. ಆದರೆ ಅತಿ ಕಡಿಮೆ ಬೆಲೆಗೆ ಮಾರುವ ಕುಂಕಮ ತಯಾರಿಕೆಯಲ್ಲಿ ಸುಣ್ಣದ ನೀರು, ರಂಗೋಲಿ ಪುಡಿ, ಅಕ್ಕಿಹಿಟ್ಟು ಬಳಕೆಯಾಗುತ್ತದೆ.

ಕುಮಟಾ: ಫಾಲ್ಗುಣ ಶುಕ್ಲಪಕ್ಷದ ಏಕಾದಶಿ ಕುಂಕುಮ ತಯಾರಿಕೆಯ ಶಾಸ್ತ್ರೀಯ ದಿನ. ಆದರೆ ಅನುಕೂಲದ ದೃಷ್ಟಿಯಿಂದ ಏಳು ದಿನಗಳ ಕುಂಕುಮ ಸಪ್ತಾಹ ಆಚರಿಸಲಾಗುತ್ತಿದೆ. ಈ ವರ್ಷ ಮಾ 25 ರಿಂದ 31 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧೆಡೆ ಶುದ್ಧಕುಂಕುಮ ಪ್ರಾತ್ಯಕ್ಷಿಕೆ, ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಸಾವಿರಾರು ಮಹಿಳೆಯರು ಮನೆಯಲ್ಲೇ ಶುದ್ಧಕುಂಕುಮ ತಯಾರಿಸುತ್ತಾರೆ.

ಭಾರತದ ಸಮಗ್ರತೆಯನ್ನು, ಅಖಂಡತೆಯನ್ನು ಎತ್ತಿಹಿಡಿಯುವ ಸ್ವದೇಶಿ, ಮಂಗಳಪ್ರದ ವಸ್ತುಗಳಲ್ಲಿ ಕುಂಕುಮವೇ ಪ್ರಥಮ ಸ್ಥಾನವನ್ನು ಅಲಂಕರಿಸುತ್ತದೆ. ಜಾತಿ, ಮತ, ಪಂಥ, ಭಾಷೆಗಳನ್ನು ಮೀರಿ ಭಾರತದಲ್ಲಿ ಸಾಂಸ್ಕೃತಿಕ ಏಕತೆ ಇದೆ ಎಂಬುದಕ್ಕೆ ಕುಂಕುಮವೇ ಸಾಕ್ಷಿ. ಪೂಜೆ, ಹೋಮಾದಿಗಳಲ್ಲಿ ಅರಿಷಿಣ-ಕುಂಕುಮಗಳ ಪಾತ್ರ ಬಹು ಮುಖ್ಯ.

ಸಂಸ್ಕೃತಿಯ ರಕ್ತದಲ್ಲಿ ಸಾತ್ವಿಕತೆಯೆಂಬ ಶ್ರದ್ಧೆ ಎಷ್ಟು ಹಾಸುಹೊಕ್ಕಾಗಿದೆಯೆಂದರೆ, ಸೌಕರ್ಯಕ್ಕಾಗಿ ಮಹಿಳೆಯರು ಲಾಲಗಂಧ ಹಾಗು ಟಿಕಳಿಯನ್ನು ಬಳಸುತ್ತಿದ್ದರೂ ಅತಿಥಿಗಳಾಗಿ ಬಂದ ಗೃಹಿಣಿಯರಿಗೆ ಕುಂಕುಮವನ್ನೇ ನೀಡುತ್ತಾರೆ ಹೊರತು ಟಿಕಳಿಯನ್ನಲ್ಲ. ಆದರೆ ಅಂಗಡಿಯಿಂದ ಕೊಂಡುಕೊಳ್ಳುವವರಿಗೆ ಈ ಕುಂಕುಮ ಎಷ್ಟು ಶುದ್ಧವಿದೆ? ಎಂಬುದು ಎಷ್ಟೋ ವರ್ಷಗಳ ವರೆಗೆ ಗೊತ್ತೇ ಇರಲಿಲ್ಲ. ಯಾವಾಗ ಕಲಬೆರಿಕೆ ಕುಂಕುಮವನ್ನು ಧರಿಸಿ, ಹಣೆ ಕಪ್ಪಾಯಿತೋ ಆಗ ವೈದ್ಯರ ಸೂಚನೆಯಂತೆ ಶುದ್ಧತೆಯ ಕಡೆಗೆ ಗಮನಹರಿಸಲಾಯಿತು.

ಶುದ್ಧ ಕುಂಕುಮಕ್ಕಿರುವ ಬೆಲೆಗಿಂತ ಅರ್ಧಬೆಲೆಗೆ ವ್ಯಾಪಾರ ಮಳಿಗೆಗಳಲ್ಲಿ ಅದು ಸಿಕ್ಕಿದಾಗ ಗುಣಮಟ್ಟವನ್ನು ವಿಚಾರಿಸದೆ ಜನರು ಉಪಯೋಗಿಸುತ್ತಾರೆ. ಉತ್ತಮ ಕುಂಕುಮಕ್ಕೆ ಬಳಸುವ ಎಲ್ಲ ವಸ್ತುಗಳ ಅಂದಾಜು ಬೆಲೆ 300 ರೂ ಇರುತ್ತದೆ. ಆದರೆ ಅತಿ ಕಡಿಮೆ ಬೆಲೆಗೆ ಮಾರುವ ಕುಂಕಮ ತಯಾರಿಕೆಯಲ್ಲಿ ಸುಣ್ಣದ ನೀರು, ರಂಗೋಲಿ ಪುಡಿ, ಅಕ್ಕಿಹಿಟ್ಟು ಬಳಕೆಯಾಗುತ್ತದೆ.

ರೋಗನಿರೋಧಕ (anti-biotic) ಶಕ್ತಿಯಿರುವ ಸಾವಯವ ಅರಿಷಿಣದಿಂದ ಸಿದ್ಧವಾದ ಕುಂಕುಮವನ್ನು ಮನೆಯಲ್ಲಿ ಅಕಸ್ಮಾತ್ ಮಕ್ಕಳು ಬಾಯಲ್ಲಿ ಹಾಕಿಕೊಂಡರೂ ಹೆದರುವ ಅವಶ್ಯಕತೆ ಇಲ್ಲ. ಕಲಬೆರಿಕೆಯ ಕುಂಕುಮ ಹೊಟ್ಟಗೆ ಹೋದರೆ ತೊಂದರೆಯಾದೀತು. ಇತ್ತೀಚಿನ ದಿನಗಳಲ್ಲಿ ಅನೇಕ ದೇವಸ್ಥಾನಗಳಲ್ಲಿ ರಾಸಾಯನಿಕ ಯುಕ್ತ ಕರ್ಪೂರ, ಕುಂಕುಮ, ಅಗರಬತ್ತಿ ಬಳಸುವುದನ್ನು ನಿಷೇಧಿಸಿ ಫಲಕಗಳನ್ನೂ ಹಾಕಲಾಗಿದೆ. ಶುದ್ಧಕುಂಕುಮ, ಎಣ್ಣೆಬತ್ತಿ, ಧೂಪಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆಯ ವಿಷಯ.

ಕುಂಕುಮದ ಪರೀಕ್ಷೆ: ಉತ್ತಮ ಕುಂಕುಮ ಯಾವುದು? ಎಂದು ಪರೀಕ್ಷಿಸಲು ಸುಲಭದ ಉಪಾಯವೊಂದಿದೆ. ಬಿಳೆ ಕಾಗದದಲ್ಲಿ ಕುಂಕುಮ ಹಾಕಿದಾಗ 10 ನಿಮಿಷಗಳಲ್ಲಿ ಕಾಗದದ ಕೆಳಭಾಗ ಹಳದಿ ಬಣ್ಣಯುಕ್ತವಾಗುತ್ತದೆ. ಕಲಬೆರಿಕೆಯ ಕುಂಕುಮಕ್ಕೆ ಆ ಸಾಮಥ್ರ್ಯ ಇರುವುದಿಲ್ಲ. ಅಂದರೆ ಕುಂಕುಮಕ್ಕೆ ಇನ್ನೊಂದು ಪರ್ಯಾಯ ಶಬ್ದವೆಂದರೆ ಕೆಂಪು ಬಣ್ಣದ ಅರಿಷಿಣ ಪುಡಿ.

ಕುಂಕುಮ ಯಾಕೆ, ಎಲ್ಲಿ, ಹೇಗೆ? : ಕುಂಕುಮವನ್ನು ಯಾಕೆ ಧರಿಸಬೇಕೆಂಬ ಪ್ರಶ್ನೆಯನ್ನು ನಾವು ಮಹಿಳೆಯರಲ್ಲಿ ಕೇಳಿದಾಗ ಐದಾರು ಉತ್ತರಗಳು ಸಾಮಾನ್ಯವಾಗಿ ಬರುತ್ತವೆ. ಸೌಂದರ್ಯ ವರ್ಧನೆಗಾಗಿ, ಭಾರತೀಯ ಸಂಸ್ಕೃತಿಯ ದ್ಯೋತಕವಾಗಿ, ಹಿರಿಯರು ಹೇಳಿದ್ದಾರೆಂದು, ಸೌಮಾಂಗಲ್ಯ ವರ್ಧನೆಗಾಗಿ, ಆಜ್ಞಾಚಕ್ರದ ಜಾಗ್ರತೆಗಾಗಿ ಹೀಗೆ ವಿವಿಧ ಕಾರಣಗಳು ಹೇಳಲ್ಪಡುತ್ತವೆ. ಆದರೆ ಇದಾವುದನ್ನೂ ಈಗಿನ ವಿಜ್ಞಾನ ವಿದ್ಯಾರ್ಥಿನಿಯರು ಸುಲಭವಾಗಿ ಒಪ್ಪುವುದಿಲ್ಲ. ಯುಕ್ತಿಯುಕ್ತವಾದ ಕಾರಣ ಕೂಡ ಅದಾಗುವುದಿಲ್ಲ. ಯಾಕೆಂದರೆ ವಿಶ್ವಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವರಾರೂ ಕುಂಕುಮ ಹಚ್ಚಿಕೊಂಡವರಲ್ಲ.

ಕುಂಕುಮ ಹಚ್ಚಿಕೊಂಡವರೆಲ್ಲ ಸುಸಂಸ್ಕೃತರೂ ಅಲ್ಲ. ಹಿರಿಯರು ಹೇಳಿದ್ದಾರೆಂದರೆ ಕೆಲವೊಮ್ಮೆ ಮೂಢನಂಬಿಕೆಯಾಗಬಹುದು. ಸೌಮಂಗಲ್ಯವೆಂದಾದರೆ ಗಂಡಸರೂ ಹಚ್ಚಿಕೊಳ್ಳುತ್ತಾರೆ. ಆಜ್ಞಾಚಕ್ರದ ಜಾಗ್ರತೆ ಎಂದಾದರೆ ಕುಂಕುಮ ಹಚ್ಚಿಕೊಳ್ಳದವರೂ ಯೋಗಸಾಧಕರಾಗಿದ್ದಾರೆ. ಹೀಗೆ ಈ ಉತ್ತರಗಳು ಯಾವುದೇ ತರ್ಕಕ್ಕೆ ಸಿಗದಿರುವುದರಿಂದ ಸತ್ವಗುಣದ ಹೆಚ್ಚಳಕ್ಕಾಗಿ ಕುಂಕುಮ ಧರಿಸಬೇಕೆಂಬ ಕಾರಣ ಮಾತ್ರ ಕೊನೆಯಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ.

ಇನ್ನು, ಎಲ್ಲಿ ಧರಿಸಬೇಕೆಂಬ ವಿಷಯದಲ್ಲಿ ವಿಕಲ್ಪಗಳಿವೆ. ಭ್ರೂಮಧ್ಯದಲ್ಲಿ ಅಂದರೆ ಎರಡು ಹುಬ್ಬುಗಳ ನಡುವೆ ಹಚ್ಚಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಕೆಲವರು ಹಣೆಯ ಮಧ್ಯದಲ್ಲೂ ಹಚ್ಚಿಕೊಳ್ಳುವವರಿದ್ದಾರೆ. ಆದರೆ ಭಸ್ಮ ಮುಂತಾದವುಗಳ ಮೇಲೆ ಮತ್ತೆ ಕುಂಕುಮ ಹಚ್ಚಿಕೊಳ್ಳುವುದು ಬೇಡ. ಒಟ್ಟಾರೆ, ನಿಯತವಾಗಿ ಶುದ್ದ ಕುಂಕುಮವನ್ನು ಧರಿಸುವುದು ಮುಖ್ಯವಾಗಿರಬೇಕೇ ಹೊರತು ಎಲ್ಲಿ ಎಂಬುದರ ಕುರಿತು ವಾದ-ವಿವಾದ ಬೇಡ. ಲಾವಣ್ಯದ ಸಂಕೇತವಾದ ಕುಂಕುಮವನ್ನು ವೈವಿಧ್ಯಮಯವಾಗಿ ಧರಿಸುವ ಪದ್ಧತಿಗಳಿವೆ. ಉದ್ದ, ಅರ್ಧಚಂದ್ರಾಕೃತಿ, ವರ್ತುಲ, ಸಪ್ತಾಕೃತಿ, ಕಮಲದಲಾಕೃತಿ ಹೀಗೆ 9 ಪ್ರಕಾರಗಳಿವೆ.

ಅರ್ಧ ಕೆಜಿ ಕುಂಕುಮಕ್ಕಾಗಿ ಅರ್ಧ ಕೆಜಿ ಸಾಂಗ್ಲಿ ಅರಿಷಿಣ ಕಣಗಳು, 350 ಮಿ.ಲಿ ಲಿಂಬೆರಸ, 75 ಗ್ರಾಂ ಬಳಿಗಾರ, 5 ಗ್ರಾಂ ಸ್ಫಟಿಕ, 50 ಗ್ರಾಂ ಆಕಳ ತುಪ್ಪ. ಕುಂಕುಮದಲ್ಲಿ ದಿವ್ಯತೆ ಹಾಗು ಭವ್ಯತೆ ಸಂಪಾದನೆಗಾಗಿ ತಯಾರಿಸುವಾಗ ಲಲಿತಾಸಹಸ್ರನಾಮವೇ ಮುಂತಾದ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ಕುಂಕುಮ ತಯಾರಿಕೆಯು 8 ದಿನಗಳ ಪ್ರಕ್ರಿಯೆಯಾದ್ದರಿಂದ ಫಾಲ್ಗುಣ ಮಾಸದಲ್ಲಿ ಸಿದ್ಧವಾದ ಕುಂಕುಮವನ್ನು ನೂತನ ವರ್ಷದ ಯುಗಾದಿಗೆ ಬಳಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ: ವಿದ್ವಾನ್ ಡಾ. ಕೆ ಗಣಪತಿ ಭಟ್ಟ ಕತಗಾಲ 9448232435, ಸುಕನ್ಯಾ ಮೋಹನ, ಕುಮಟಾ: 9481130939 ಸ್ನೇಹಾ ಮರಾಠೆ ಕೈಗಾ: 9028756167

ವಿಶೇಷ ಲೇಖನ: ಬಹುಭಾಷಾ ವಿದುಷಿ ರೋಹಿಣಿ ಭಟ್ಟ

Back to top button