ರಾಜ್ಯದಲ್ಲಿ ಮತ್ತೆಲ್ಲೂ ಇಂಥ ಆಚರಣೆ ಇಲ್ಲ: ಹೇಗಿರುತ್ತೆ ನೋಡಿ ಬೇಡರ ವೇಷ

ಈ ವಿಶಿಷ್ಟ ಆಚರಣೆ ನಡೆಸೋದು ಇಡೀ ರಾಜ್ಯದಲ್ಲಿ ಶಿರಸಿಯಲ್ಲಿ ಮಾತ್ರ ಅನ್ನೋದು ವಿಶೇಷ. ಶಿರಸಿ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ.

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದಾದ್ಯಂತ ಬೇಡರ ವೇಷದ ಸಡಗರ. ನಗರದ ಪ್ರಮುಖ ವೃತ್ತಗಳಲ್ಲಿ ಬೇಡನ ಅಬ್ಬರ ನಡೆದಿದೆ. ನಗರದಾದ್ಯಂತ ತಮಟೆಯ ಸದ್ದಿನ ಜೊತೆಗೆ ಬೇಡನ ಹೂಂಕಾರ, ಬೇಡರ ವೇಷವೆಂಬ ಸಂಪ್ರದಾಯದ ಕುಣಿತ ಜೋರಾಗಿದೆ.

ಹೋಳಿ ಹಬ್ಬದ ಪೂರ್ವದಲ್ಲಿ ಈ ವಿಶಿಷ್ಟ ಆಚರಣೆ ನಡೆಸೋದು ಇಡೀ ರಾಜ್ಯದಲ್ಲಿ ಶಿರಸಿಯಲ್ಲಿ ಮಾತ್ರ ಅನ್ನೋದು ವಿಶೇಷ. ಎರಡು ವರ್ಷಗಳಿಗೊಮ್ಮೆ ನಡೆಯುವ ಬೇಡರ ವೇಷದಲ್ಲಿ ವೇಷಧಾರಿಗಳ ಜೊತೆ ಹುಡುಗಿಯರು ಹೆಜ್ಜೆ ಹಾಕಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ.

ಶಿರಸಿ, ಸುತ್ತಲಿನ ಕೆಲ ಕಡೆಗಳಲ್ಲಿ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಶಿರಸಿ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ.

20-22 ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗುತ್ತೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸರ್ವೇ ಸಾಮಾನ್ಯವಾಗಿರುತ್ತದೆ. ಬೇಡರ ವೇಷ ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ 15-20 ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಕಾಣಸಿಗಬಹುದಾದ ಬೇಡರ ವೇಷ ಸಾಂಪ್ರದಾಯಿಕ ಕಲೆಗೆ ನಾಲ್ಕಾರು ಶತಮಾನಗಳ ಇತಿಹಾಸವಿದೆ. ಶಿರಸಿ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಸೋದೆಯ ಅರಸರ ಕಾಲದಿಂದ ಬೇಡರ ವೇಷವೆಂಬುದು ಚಾಲ್ತಿಗೆ ಬಂದಿದೆಯಂತೆ. ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆ ಬೆಳೆದು ಬಂದ ಕುರಿತು ಹಲವಾರು ಕಥೆಗಳೂ ಚಾಲ್ತಿಯಲ್ಲಿವೆ.

ಶಿರಸಿ ಭಾಗದಲ್ಲಿ 15-16ನೇ ಶತಮಾನದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರ ಬೇಡನ ಕಥೆಯೇ ಇದಕ್ಕೆ ಸ್ಪೂರ್ತಿ. ಜನರನ್ನು ಕಾಡುತ್ತಿದ್ದ ಕಾನನ ವಾಸಿ ಬೇಡನನ್ನು ಹಿಡಿಯಲು ಸೋದೆಯ ಅರಸ ಸೈನಿಕರನ್ನು ಅಟ್ಟಿ, ಹರಸಾಹಸದಿಂದ ಆತನನ್ನು ಬಂಧಿಸಲು ಯಶಸ್ವಿಯಾಗುತ್ತಾನೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಿಂದ ಹೂಂಕರಿಸುತ್ತಾನೆ. ಆತನನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ ಎನ್ನುವುದೊಂದು ಕಥೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಬೇಡರ ವೇಷದ ಜೊತೆಗೆ ಬಂಡಿಚಿತ್ರಗಳು ಗಮನ ಸೆಳೆಯುತ್ತವೆ. ಗಲ್ಲಿಗಲ್ಲಿಗಳಿಂದ ಹೊರಡುವ ಬೇಡರವೇಷ ತಂಡದ ಜೊತೆಗೆ ಒಂದು ಬಂಡಿಚಿತ್ರ, ಜೊತೆಗೆ ನರ್ತನ ಬೇಡರವೇಷ ಕುಣಿತದ ಖುಷಿಯನ್ನ ಕಾಣಬಹುದು. ಇನ್ನು ಈ ಸಾಂಪ್ರಾದಿಕ ಕಲೆಯನ್ನ ಕಣ್ತುಂಬಿಕೊಳ್ಳಲು ಶಿರಸಿ ಮಾತ್ರವಲ್ಲದೆ ಬೇರೆ ಜಿಲ್ಲೆ ಜನರು ಕೂಡ ಆಗಮಿಸೋದು ವಿಶೇಷ.

ಒಟ್ಟಾರೆ ಹೋಳಿ ಹಬ್ಬದ ಪೂರ್ವದಲ್ಲಿ ನಡೆಯೋ ವಿಶೇಷ ಬೇಡರ ವೇಷ ರಾಜ್ಯದಲ್ಲೇ ಹೆಸರು ಗಳಿಸಿರುವಂತಹದ್ದು. ಇಲ್ಲಿನ ಗ್ರಾಮ ದೇವತೆ ಶ್ರೀ ಮಾರಿಕಾಂಬೆ ಜಾತ್ರೆ ಎಷ್ಟು ವಿಜೃಂಭಣೆಯಿಂದ ನಡೆಯತ್ತದೋ ಅಷ್ಟೆ ಅದ್ದೂರಿಯಾಗಿ ನಡೆಯೋ ಒಂದು ಕಲೆ ಅಂದ್ರೆ ಬೇಡರ ವೇಷ. ತಮಟೆ ಸದ್ದಿಗೆ ಕತ್ತಿ ಹಿಡಿದು ನೃತ್ಯ ಮಾಡೋ ಬೇಡನ ಕುಣಿತಕ್ಕೆ ಕೇಕೆ ಹಾಕಿ ಶಿಳ್ಳೆ ಹೊಡೆದು ಹುರಿದುಂಬಿಸೋದು ಜನರಿಗೆ ಮನೋರಂಜನೆ ಜೊತೆಗೆ ಕ್ರೇಜ್ ಹುಟ್ಟಿಸೋದ್ರಲ್ಲಿ ಎರಡು ಮಾತಿಲ್ಲ.

ಹೌದು, ಕಳೆದ ಮೂರು ದಿನಗಳಿಂದ ಶಿರಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಬೇಡರ ವೇಷಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿ ಬೇಡರ ವೇಷದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಶಿರಸಿಯಲಿ ನಡೆಯುತ್ತೀರುವ ಬೇಡರ ವೇಷ ಉತ್ಸವಕ್ಕೆ ಕೊವಿಡ್ 19 ಕಾರಣದಿಂದ ಜಿಲ್ಲಾಡಳಿತ ಹಲವು ನಿಭರ್ಂಧಗಳನ್ನು ವಿಧಿಸಿತ್ತು. ಅವೆಲ್ಲವನ್ನೂ ಪಾಲಿಸಿ ಬಹಳ ವಿಜೃಂಭಣೆಯಿಂದ ಬೇಡರ ವೇಷ ನಡೆದಿದ್ದು, ಎಲ್ಲರ ಗಮನಸೆಳೆದಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version