Follow Us On

WhatsApp Group
Important
Trending

ಚಂಡಮಾರುತ ರೌದ್ರಾವತಾರ: ಹಲವಡೆ ವಸತಿಕೇಂದ್ರ ಆರಂಭ: ಮುಂದುವರಿದ ಭಾರೀ ಗಾಳಿ ಮಳೆ: ಮನೆಗಳಿಗೆ ನುಗ್ಗಿದ‌ ನೀರು

ಕಾರವಾರ: ರಾಜ್ಯದ ಕರಾವಳಿಯಲ್ಲಿ ಭಾನುವಾರವೂ ತೌಕ್ತೆ ಚಂಡಮಾರುತದ ಪ್ರಭಾವ ಜೋರಾಗಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರ ನಡುವೆ ಸಮುದ್ರದಂಚಿನಲ್ಲಿ ಕಡಲ್ಕೊರೆತಗಳು ಉಂಟಾಗಿದ್ದು, ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ.

ಕೆಲವೆಡೆ ಗದ್ದೆಗಳಲ್ಲೆಲ್ಲ ನೀರು ನಿಂತು ನಷ್ಟವುಂಟಾಗಿದೆ. ಇನ್ನು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಗಾಳಿ ರಭಸದಿಂದ ಬೀಸುತ್ತಿರುವ ಕಾರಣ ಅಲೆಗಳು ಕೂಡ ರೌದ್ರಾವತಾರ ತಾಳಿದೆ. ಕಡಲಂಚಿನ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಂಚಿನ ಗ್ರಾಮಗಳ ಮನೆಗಳ ನಿವಾಸಿಗಳು ಸಾಮಾನು, ಸರಂಜಾಮು ಉಳಿಸಿಕೊಳ್ಳಲು, ಮನೆಯಿಂದ ನೀರು ಹೊರ ಹಾಕಲು ಶ್ರಮಪಡುತ್ತಿದ್ದ ದೃಶ್ಯಗಳು ಕಂಡುಬಂದಿವೆ.

ಕುಮಟಾಕ್ಕೆ ಆಗಮಿಸಿದ ಬೆಳಗಾಂ SDRF ತಂಡ ಆಗಮಿಸಿದ್ದು, ವಿಪತ್ತು ನಿರ್ವಹಣೆಗೆ ಸಿದ್ಧವಾಗಿದೆ. ಪ್ರವಾಹ ಸಂದರ್ಭ ದಲ್ಲಿ ಜನರ ರಕ್ಷಣೆ ಮಾಡಲಿದೆ ಈ ವಿಶೇಷ ತಂಡ. ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು,‌ಬಹುತೇಕ ಕಡೆ ವಿದ್ಯುತ್ ಇಲ್ಲವಾಗಿದೆ..ಕಲಭಾಗ್ ಹಾಗೂ ಶಶಿ ಹಿತ್ತಲ್ ಗಳಲ್ಲಿ ವಸತಿ ಕೇಂದ್ರ ಆರಂಭ ಆರಂಭಿಸಲಾಗಿದೆ.

ಹೊನ್ನಾವರ ಕರ್ಕಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನೀರು. ಕರ್ಕಿಯ ತೊಪ್ಪಲಕೇರಿ, ಪಾವಿನಕುರ್ವಾ, ಹೆಗಡೆಹಿತ್ಲು ಇತರೆ ಭಾಗದಲ್ಲಿ ಸಮುದ್ರ ಅಲೆಗಳ ರೌದ್ರಾವತಾರ ತಾಳಿದ್ದು, ಪಾವಿನಕುರ್ವಾ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆಮ
ಜನರ ಸುರಕ್ಷತಾ ದೃಷ್ಟಿಯಿಂದ 51 ಜನರನ್ನು ಸ್ಥಳಾಂತರಿಸಿದೆ ತಾಲೂಕಾಡಳಿತ.

ಭಟ್ಕಳ ತಾಲೂಕಿನಿ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು ಡೇಂಜರ್ ಝೋನ್ ಎಂದು ಘೋಷಿಸಲಾಗಿದ್ದು, ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇನ್ನುಳಿದಂತೆ ಬಂದರ್, ಬೆಳಕೆ, ಸೇರಿದಂತೆ ಇತರೆಡೆ ಕಡಲಿನ ಅಬ್ಬರ ಜೋರಾಗಿದ್ದು, ಸಮುದ್ರ ಕೊರೆತ ಉಂಟಾಗಿದೆ. ಕರಿಕಲ್ ಭಾಗದಲ್ಲಿ ರಕ್ಕಸ ಗಾತ್ರದ ಅಲೆಗಳು ಗ್ರಾಮದೊಳಕ್ಕೆ ನುಗ್ಗಿವೆ. ಮುರುಡೇಶ್ವರ ಕಡಲತೀರದಲ್ಲಿ ಇಟ್ಟಿದ್ದ ಗೂಡಂಗಡಿಗಳಿಗೆ ಸಮುದ್ರದಲೆಗಳು ಅಪ್ಪಳಿಸಿವೆ.

ಇನ್ನು ಜಾಲಿಕೋಡಿ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಜಾಲಿಕೋಡಿ ನಿವಾಸಿ ಲಕ್ಷ್ಮಣ ನಾಯ್ಕ ಅಲೆ ಅಪ್ಪಳಿಸಿ ಇನ್ನೊಂದು ದೋಣಿ ಬಡಿದು, ಎರಡು ದೋಣಿಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಇನ್ನು ಹೊನ್ನಾವರ ತಾಲೂಕಿನ ಮಂಕಿ ಪಾವಿನಕುರ್ವಾ, ಅಪ್ಸರಕೊಂಡ ಭಾಗದ ನಿವಾಸಿಗಳ ಕಷ್ಟ ಹೇಳತೀರದಾಗಿ. ಸಮೀಪದ ಗ್ರಾಮಗಳಿಗೆ ಕಡಲ ಅಲೆಗಳು ನುಗ್ಗಿದ್ದು, ನಾಳೆ ಏನಾಗುತ್ತವೆಯೇನೋ ಎಂಬ ಆತಂಕ ಜನರಲ್ಲಿ ಎದುರಾಗಿದೆ.

ಕುಮಟಾ ಫಿಶ್ ಮಾರ್ಕೆಟ್, ಚಿತ್ರರಂಜನ್ ಟಾಕೀಸ್, ವನ್ನಳ್ಳಿ, ಹೊಲನಗದ್ದೆ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ. ವನ್ನಳ್ಳಿ ಬೀಚ್ ರಸ್ತೆಯ ಮೇಲೆ ರಕ್ಕಸ ಗಾತ್ರದ ಅಲೆಗಳು ಬಡಿಯುತ್ತಿದ್ದು, ಸಮೀಪದ ನಿವಾಸಿಗಳು ಮನೆಯಿಂದ ಹೊರಬಂದು ಪಟ್ಟಣ ಪ್ರದೇಶದ ಸಂಬಂಧಿಗಳ ಮನೆ ಸೇರಲು ಕೆಲವರು ಮುಂದಾಗಿದ್ದಾರೆ. ಅಲೆಗಳ ಭೀಕರತೆ ಇನ್ನಷ್ಟು ಹೆಚ್ಚಾಗುವ ಕಾರಣ ಕೆಲವರು ಮನೆಗಳ ಸಾಮಾನು, ಸರಂಜಾಮುಗಳ ಕಥೆ ಏನು ಎಂದು ದಿಕ್ಕು ತೋಚದೆ ಕುಳಿತುಕೊಂಡಿದ್ದಾರೆ.

ಗೋಕರ್ಣದ ದುಬ್ಬನಶಶಿ, ಮೇನ್ ಬೀಚ್ ಪ್ರದೇಶಗಳಲ್ಲೂ ಅಲೆಗಳ ಅಬ್ಬರ ಜೋರಾಗಿದೆ. ಅಂಕೋಲಾದ ಹಾರವಾಡದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಸಮೀಪದ ಗಾಳಿ ಮರಗಳು, ಕಲ್ಲುಗಳು ಸಮುದ್ರದ ಪಾಲಾಗುತ್ತಿವೆ. ಕಾರವಾರದ ಟ್ಯಾಗೋರ್ ಕಡಲತೀರದಲ್ಲಂತೂ ಅಲೆಗಳು ಮಕ್ಕಳ ಪಾರ್ಕ್ ವರೆಗೆ ಬಡಿದಿದ್ದು, ಇದರಿಂದಾಗಿ ಇನ್ನಷ್ಟು ಆತಂಕ ಎದುರಾಗಿದೆ. ದೇವಬಾಗದಲ್ಲೂ ಸಮುದ್ರ ಮಟ್ಟ ಹೆಚ್ಚಾಗಿ ದಡಕ್ಕೆ ಅಪ್ಪಳಿಸುತ್ತಿವೆ.

ಒಟ್ಟಾರೆಯಾಗಿ ಕೊರೋನಾ ಆತಂಕದಲ್ಲಿ ದಿನ ಕಳೆಯುತ್ತಿದ್ದ ಜನರಿಗೆ ಇದೀಗ ತೌಕ್ತೆಯ ಆತಂಕ ಭೀತಿ ಹುಟ್ಟಿಸಿದೆ. ಸದ್ಯ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಈ ಭೀತಿ ಇನ್ನಷ್ಟು ಹೆಚ್ಚಾಗಿದ್ದು, ಕರಾವಳಿ ತೀರದ ಜನರು ಜಾಗೃತಿ ವಹಿಸುವ ಅನಿವಾರ್ಯತೆ ಇದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button