ಭಟ್ಕಳ:ತೌಕ್ತೆ ಚಂಡಮಾರುತ ಪರಿಣಾಮ ಉತ್ತರಕನ್ನಡ
ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಶನಿವಾರ ಬೆಳಗ್ಗೆ ಯಿಂದಲೇ ತಾಲೂಕಿನಾದ್ಯಂತ ಬಾರಿ ಗಾಳಿ ಮಳೆ ಸುರಿಯುತ್ತಿದೆ.
ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿ ಸಮುದ್ರ ತೀರವನ್ನು ‘ಡೆಂಜರ್ ಝೋನ್’ ಎಂದು ಘೋಷಿಸಲಾಗಿದೆ. ಅಲ್ಲಿನ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನೆಗದ್ದೆ, ಹೆರ್ತಾರ್‍ಗಳಲ್ಲಿ ನೆಲ ಕೊಚ್ಚಿ ಹೋಗುತ್ತಿದ್ದು, ತಟದಲ್ಲಿ ಬೆಳೆದು ನಿಂತಿರುವ ತೆಂಗಿನ ಮರಗಳಿಗೆ ಆಪತ್ತು ಬಂದೊದಗಿದೆ. ರಸ್ತೆಯೂ ಕಡಲ ಅಬ್ಬರಕ್ಕೆ ಕುಸಿಯುತ್ತಿದೆ.ತಾಲೂಕಿನ ಬಂದರು,ತಲಗೋಡ,ಕರಿಕಲ್,ಜಾಲಿ,ರ್ಗೊಟೆ,ಬೆಳಕೆ,ಹಾಗೂ ಇತರೆ ಭಾಗಗಳಲ್ಲಿ ಸಮುದ್ರ ಕೊರೆತ ಅಲ್ಲಿಯ ಜನರಿಗೆ ಸಂಕಟವನ್ನು ತಂದಿಟ್ಟಿದೆ. ನೀರು ಒಂದೇ ಸವನೆ ತಡೆಗೋಡೆಯನ್ನು ದಾಟಿ ಮೇಲಕ್ಕೆ ಹರಿಯಲಾರಂಭಿಸಿದೆ.
ಅರಬ್ಬಿ ಸಮುದ್ರದ ತೀರದಲ್ಲಿ ನಿನ್ನೆಯಿಂದಲೇ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ.ತೌಕ್ತೆ ಚಂಡಮಾರುತದ ಪರಿಣಾಮ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿರುವವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರ ತೀರಕ್ಕೆ ಮರಳಿ ಹೋಗುವಂತೆ ಸೂಚಿಸಿದ್ದರು.ಈ ಹಿನ್ನಲೆಯಲ್ಲಿ ಭಟ್ಕಳ ವ್ಯಾಪ್ತಿಯ ಎಲ್ಲಾ ಸಮುದ್ರ ತೀರಗಳಿಗೆ ಕಂದಾಯ ಅಧಿಕಾರಿಗಳು, ಜಾಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರಳಿ ತೀರದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಭಟ್ಕಳದ ಬಂದರು, ಮಾವಿನಕುರ್ವಾ, ಜಾಲಿಕೋಡಿ, ತೆಂಗಿನಗುಂಡಿ, ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಎಲ್ಲೆಡೆಯೂ ಕಡಲಕೊರೆತ ಉಂಟಾಗಿದೆ.
ತಡರಾತ್ರಿ ಸುರಿದ ಭಾರಿ ಗಾಳಿಸಹಿತ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇಲ್ಲಿನ ಬಂದರ ಸಮುದ್ರ ತೀರದಲ್ಲಿ ವಿದ್ಯುತ್ ಕಂಬಗಳು ಸಾಲು ಸಾಲಾಗಿ ದರೆಗುರುಳಿದೆ ಕಡಲತೀರಗಳ ಮನೆಗಳಿಗೆ ನೀರು ನುಗ್ಗಿ ಜನಜೀವನಕ್ಕೆ ಸಮಸ್ಯೆಯಾಗಿದೆ.
ಇನ್ನು, ಕೆಲ ಕಡಲತೀರದ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಿನಲ್ಲಿ ಆಳೆತ್ತರದ ಅಲೆಗಳನ್ನು ಕಂಡು ಮೀನುಗಾರರು ಸಹ ಕಂಗಾಲಾಗಿದ್ದು, ಸದ್ಯ ಬೋಟ್ ಬಲೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಮುರುಡೇಶ್ವರದ ಸಮುದ್ರ ತೀರದಲ್ಲಿ ಆಳೆತ್ತರದ ಅಲೆಗಳು ಕಂಡು ಮೀನುಗಾರರು ಭಯ ಭೀತರಾಗಿದ್ದರೆ
ಅಲ್ಲದೆ, ಭಟ್ಕಳದಲ್ಲಿ ಅಲೆಗಳ ಅಬ್ಬರಕ್ಕೆ ತಡೆಗೋಡೆ ಸಹ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಸದ್ಯ ಮೋಡ ಕವಿದ ವಾತಾವರಣ ಜೊತೆ ಮಳೆಯಾಗುತ್ತಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ