Follow Us On

WhatsApp Group
Important
Trending

ಅಪಾಯಕಾರಿ ತಿರುವಿನಲ್ಲಿ ಮೀನು ತುಂಬಿದ ಲಾರಿ ಪಲ್ಟಿ: ಲಕ್ಷಾಂತರ ರೂಪಾಯಿ ನಷ್ಟ: ಪ್ರಾಣಾಪಾಯದಿಂದ ಚಾಲಕ ಪಾರು

ಹೊನ್ನಾವರ: ತಾಲೂಕಿನ ಮುಗ್ವಾ ಬಾಳೆಗದ್ದೆ ತಿರುವಿನಲ್ಲಿ ಮಂಗಳವಾರ ಬೆಳಗಿನಜಾವ ಮೀನು ತುಂಬಿದ ಲಾರಿ ಪಲ್ಟಿಯಾಗಿ ಅಪಾರ ಪ್ರಮಾಣದ ಮೀನುಗಳು ಮಣ್ಣುಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಲಾರಿಯ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆಂದು ತಿಳಿದುಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳವಾಗಿ ಬಾಳೆಗದ್ದೆ ಮತ್ತು ಹುಲಿಯಪ್ಪನ ಕಟ್ಟೆ ನಡುವಿನ ತಿರುವು ಗುರುತಿಸಲ್ಪಟ್ಟಿದೆ. ಹೆಚ್ಚಾಗಿ ಗೇರಸೊಪ್ಪಾ ಮಾರ್ಗವಾಗಿ ಹೊನ್ನಾವರ ಕಡೆಗೆ ವಾಹನಗಳೇ ಅಪಘಾತಕ್ಕೀಡಾಗುತ್ತಿರುವುದು ವಿಶೇಷ. ಹೆದ್ದಾರಿ ಪ್ರಾಧಿಕಾರದವರು ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಅದರ ಬಗ್ಗೆ ಲಕ್ಷ್ಯ ವಹಿಸದ ಚಾಲಕರು ಅತೀ ವೇಗವಾಗಿ ಬಂದು ತಿರುವಿನಲ್ಲಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೇ ಧರೆಗೆ ಗುದ್ದುತ್ತಾರೆ ಇಲ್ಲವೇ ಪಲ್ಟಿ ಕೆಡುವುತ್ತಾರೆ..

ವರ್ಷದಲ್ಲಿ ಕನಿಷ್ಠವೆಂದರೂ 8-10 ಅಪಘಾತಗಳು ಒಂದೇ ಸ್ಥಳದಲ್ಲಿ ಸಂಭವಿಸುತ್ತಿದೆ. ಮಲೆನಾಡು ಹಾಗೂ ಬಯಲು ಸೀಮೆಗಳಿಂದ ತರಕಾರಿ ತುಂಬಿಕೊoಡುಬರುವ ವಾಹನಗಳು ಹಾಗೂ ಸಮಯದ ಮಿತಿಯಲ್ಲಿ ಉದ್ದೇಶಿತ ದೂರವನ್ನು ತಲುಪಬೇಕಾದ ಅನಿವಾರ್ಯತೆ ಇರುವ ಮೀನು ಲಾರಿಗಳೇ ಅಪಘಾತಕ್ಕೀಡಾಗುತ್ತಿರುವುದನ್ನು ಕಾಣಬಹುದಾಗಿದೆ.

ಇಂಗ್ಲೀಷ್ ವರ್ಣಮಾಲೆಯ ಝಡ್ ಆಕೃತಿಯ ತಿರುವು ಇದಾಗಿದ್ದು ಹೆದ್ದಾರಿ ಪ್ರಾಧಿಕಾರದವರು ಇಲ್ಲಿ ಸಂಭವಿಸುವ ಅಪಘಾತಗಳ ಹಿಂದಿನ ಕಾರಣವನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವ ಒತ್ತಾಯ ಸ್ಥಳಿಯರದಾಗಿದೆ. ಗೇರಸೊಪ್ಪಾ ಘಾಟಿಯಲ್ಲಿ ಸೂಕ್ಷ್ಮ ತಿರುವುಗಳನ್ನೆಲ್ಲಾ ಸಲೀಸಾಗಿ ದಾಟಿ ಬರುವ ಚಾಲಕರು ಬಾಳೆಗದ್ದೆ ತಿರುವಿನಲ್ಲಿ ಎಡವುತ್ತಿರುವ ಹಿಂದೆ ರಸ್ತೆ ನಿರ್ಮಾಣದಲ್ಲಿನ ದೋಷವೂ ಇರಬಹುದು ಎನ್ನುವ ಅಭಿಪ್ರಾಯವಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button