ಪ್ರತಿದಿನ ಹಾಳಾಗುತ್ತಿದೆ ಸರಾಸರಿ 1 ಲಕ್ಷ 10ಸಾವಿರ ಮೊಳ ಮಲ್ಲಿಗೆ ಹೂವು’
ಭಟ್ಕಳದ ಮಲ್ಲಿಗೆಗಿಲ್ಲ ಮಾರುಕಟ್ಟೆ
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮಲ್ಲಿಗೆ ದೇಶ-ವಿದೇಶದಲ್ಲಿ ತುಂಬಾನೇ ಫೇಮಸ್… ತನ್ನ ವಿಶೇಷ ಪರಿಮಳದಿಂದಾಗಿ ಭಟ್ಕಳ ಮಲ್ಲಿಗೆ ಖ್ಯಾತಿಯನ್ನು ಪಡೆದಿದೆ. ಭಟ್ಕಳದಲ್ಲಿ ಪ್ರತಿದಿನ ಸರಾಸರಿ 1 ಲಕ್ಷ 10 ಸಾವಿರ ಮೊಳ ಹೂವು ಉತ್ಪಾದನೆಯಾಗುತ್ತದೆ. ಇದಕ್ಕೆ ಮಂಗಳೂರು ಮುಖ್ಯ ಮಾರುಕಟ್ಟೆಯಾದರೆ ರಾಜ್ಯದ ವಿವಿದೆಡೆಯೂ ಭಟ್ಕಳ ಮಲ್ಲಿಗೆಗೆ ಬೇಡಿಕೆ ಇದೆ.
ಇಲ್ಲಿನ ಮಲ್ಲಿಗೆಗೆ ಈ ಫೆಬ್ರವರಿ, ಮಾರ್ಚ, ಏಪ್ರಿಲ್, ಮೇ ತಿಂಗಳಲ್ಲಿ ಭಾರಿ ಬೇಡಿಕೆಯಿದ್ದು, ಆದರೆ ಈ ಕೋರೋನಾದಿಂದ ಎಲ್ಲವೂ ಹಾಳಾಗಿದಂತಾಗಿದೆ. ಅತ್ತ ಕಡೆ ಮಲ್ಲಿಗೆ ಗಿಡದಲ್ಲಿ ಮಲ್ಲಿಗೆ ಮಾರಾಟವಿಲ್ಲ ಎಂದು ಸುಮ್ಮನಿದ್ದರೆ ಕೀಟ, ಹುಳ, ಹುಪಡಿಯಿಂದ ಮಲ್ಲಿಗೆ ಗಿಡವು ನಾಶವಾಗಲಿವೆ. ಇನ್ನು ಗಿಡದಲ್ಲಿನ ಮಲ್ಲಿಗೆ ಮೊಗ್ಗು ತೆಗೆದರೆ ಅದನ್ನು ಖರೀದಿಸುವವರಿಲ್ಲ. ಇದರಿಂದಾಗಿ ಬೆಳೆಗಾರರು ಅಕ್ಕಪಕ್ಕದ ಮನೆಯವರಿಗೆ ಮುಡಿಯಲು ದೇವರಿಗೆ ಪೂಜೆಗೆ ನೀಡುತ್ತಾ ಸಮಾಧಾನಪಡುತ್ತಿದ್ದಾರೆ.
ಭಟ್ಕಳದಲ್ಲಿ ಸುಮಾರು 90 ಹೇಕ್ಟರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳಸಲಾಗುತ್ತಿದೆ. ಕೃಷಿಯಲ್ಲಿ ಮಲ್ಲಿಗೆ ಒಂದು ಪ್ರಮುಖ ಪಾತ್ರ ಪಡೆದಿದ್ದು ಭಟ್ಕಳ ವೊಂದರಲ್ಲೆ 8ರಿಂದ 10 ಸಾವಿರ ಕುಟುಂಬಗಳು ಇದನ್ನೆ ಆಶ್ರಯಿಸಿ ಬದುಕು ಸಾಗಿಸುತ್ತಿದೆ. ಆದ್ರೆ, ಈಗ ಈ ಕುಟುಂಬಗಳು ಸಂಕಷ್ಟದಲ್ಲಿವೆ.. . ದೇಶ ವಿದೇಶದಲ್ಲಿ ಭಾರಿ ಬೇಡಿಕೆ ಹಾಗೂ ವಿಶೇಷ ಸ್ಥಾನವನ್ನು ಪಡೆದ ಭಟ್ಕಳದಲ್ಲಿ ಬೆಳೆಯುವ ಮಲ್ಲಿಗೆ, ಉಡುಪಿ, ಮಂಗಳುರು ತಲುಪಿ ಅಲ್ಲಿಂದ ಬೇರೆ ರಾಜ್ಯ, ವಿದೇಶಗಳಿಗೆ ಹೋಗುತ್ತಿದ್ದವು.
ಹೌದು, ಪ್ರಮುಖ ತೋಟಗಾರಿಕೆ ಬೆಳೆಯಾದ, ದೇಶ ವಿದೇಶದೆಲ್ಲೆಡೆ ಪ್ರಖ್ಯಾತಿ ಪಡೆದ ಮಲ್ಲಿಗೆಯ ಮೇಲೆಯೂ ಕೋರೋನಾ ಕರಿನೆರಳು ಬಿದ್ದಿದೆ. ಗಿಡದಲ್ಲಿ ಮಲ್ಲಿಗೆ ಬೆಳೆ ಹಾಗೆ ಬಿಟ್ಟರು ಕಷ್ಟ. ಇನ್ನು ಮಲ್ಲಿಗೆ ಮೊಗ್ಗು ತೆಗೆದು ಕಟ್ಟಿದರು ಅದನ್ನು ಖರೀದಿಸಲು ಯಾರು ಇಲ್ಲ. ಇದು ಮಲ್ಲಿಗೆ ಬೆಳೆಗಾರರನ್ನು ಕಂಗೆಡಿಸಿದೆ. ಏಪ್ರಿಲ್ 14ರಂದು ಲಾಕ್‍ಡೌನ್ ಮುಗಿಯದಿದ್ದಲ್ಲಿ ಮಲ್ಲಿಗೆಯನ್ನು ಆಶ್ರಯಿಸಿದ ಕುಟುಂಬ, ಕಷ್ಟದ ದಿನ ಎದುರಿಸುವ ಆತಂಕದಲ್ಲಿದ್ದು, ಈ ಸಂಕಷ್ಟ ನಿರ್ಮೂಲನೆಗೆ ಸರಕಾರ, ಇಲಾಖೆಗಳು ಸೂಕ್ತ ಪರಿಹಾರ ನೀಡಬೇಕಿದೆ.
ಭಟ್ಕಳ ತಾಲೂಕಿನ ಮುಠ್ಠಳ್ಳಿ, ಮಣ್ಕುಳಿ, ತಲಾಂದ, ಮುಂಡಳ್ಳಿ, ಶಿರಾಲಿ, ಬೆಂಗ್ರೆ, ಮಾವಳ್ಳಿ, ಬೈಲೂರು ಪಂಚಾಯತ ವ್ಯಾಪ್ತಿಯಲ್ಲಿ ಮಲ್ಲಿಗೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ.. ಆದರೆ ದೇಶದಲ್ಲಿ ಕೋರೊನಾ ಕಂಟಕ ಎದುರಾಗಿದ್ದು ಲಾಕ್‍ಡೌನ್‍ನ ಸಂಕಟದಲ್ಲಿ ದೇಶವಿದೆ. ಇದರಿಂದ ಹೂವಿನ ಮಾರುಕಟ್ಟೆ ಸಂಪೂರ್ಣ ಸ್ತಬ್ದವಾಗಿದ್ದು ಇದನ್ನೆ ಆಶ್ರಯಿಸಿದ ಬೆಳೆಗಾರರು ಕಂಗಾಲಾಗಿದ್ದಾರೆ. 15 ದಿನ ಹೇಗಾದರೂ ತಡೆದುಕೊಂಡರೂ ಇದು ಮುಂದುವರೆಸುವದು ಸಾಧ್ಯವೆ ಇಲ್ಲ ಎನ್ನುತ್ತಾರೆ ಮಲ್ಲಿಗೆ ಕೃಷಿಕರು.
ಕೊರೊನಾ ಮಹಾಮಾರಿಯ ವಿಷಯದಲ್ಲಿ ಭಟ್ಕಳ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿರುವದು ರೈತರ ನೆಮ್ಮದಿ ಮತ್ತಷ್ಟು ಹಾಳು ಮಾಡಿದೆ. ಉಳಿದಂತೆ ಪಟ್ಟಣದಲ್ಲೂ ಮಲ್ಲಿಗೆ ಹಾಟ್‍ಫೇವರೇಟ್. ಹೀಗಿರುವಾಗ ಪ್ರತಿದಿನ ಇಷ್ಟು ಪ್ರಮಾಣದ ಹೂವು ಹಾಳಾಗುತ್ತಿರುವದು ಬೆಳೆಗಾರರ ಚಿಂತೆಗೆ ಕಾರಣವಾಗಿದ್ದು ಸರ್ಕಾರ ತಮ್ಮ ನೆರೆವಿಗೆ ಬರಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.
‘ತಾಲೂಕಿನಲ್ಲಿ ಮಲ್ಲಿಗೆ ಬೆಳೆಗೆ ಅದರದೇ ಆದ ಮಾರುಕಟ್ಟೆ ಇದೆ. ಪ್ರತಿದಿನ 1ಲಕ್ಷ 10ಸಾವಿರ ಮೊಳ ಹೂವು ಹಾಳಾಗುತ್ತಿರುವ ಕುರಿತು ಕಾರವಾರದ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರಿಗೂ ಬೆಂಬಲ ಬೆಲೆ ನೀಡುವ ಕುರಿತು ಉಪನಿರ್ದೇಶಕರು ರಾಜ್ಯಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ನಲ್ಲಿ ದೇಶ-ವಿದೇಶದಲ್ಲಿ ತನ್ನ ಪರಿಮಳವನ್ನು ಇಂಪನ್ನು ಬೀರಿದ ಭಟ್ಕಳ ಮಲ್ಲಿಗೆ ಬೆಳಗಾರರ ನೆರವಿಗೆ ಸರ್ಕಾರ ಧಾವಿಸಬೇಕಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ