ಅಂಕೋಲಾ ಜುಲೈ 5: ತಾಲೂಕಿನಲ್ಲಿ ಸೋಮವಾರ 6 ಹೊಸ ಕೊವಿಡ್ ಪಾಸಿಟಿವ್ ಕೇಸುಗಳು ದಾಖಲಾಗಿದ್ದು ಒಟ್ಟೂ 16 ಸೋಂಕು ಪ್ರಕರಣಗಳು ಸಕ್ರಿಯವಾಗಿದೆ. ಗುಣಮುಖರಾದ 5 ಜನರನ್ನು ಬಿಡುಗಡೆಗೊಳಿಸಲಾಗಿದೆ.
ತಾಲೂಕಿನ 5 ಪಾಸಿಟಿವ್ ಕೇಸಿಗೆ ಸಂಬಂಧಿಸಿದಂತೆ ಅಂಕೋಲಾ ತಾಲೂಕಾಸ್ಪತ್ರೆಯಲ್ಲಿ (3), ಮತ್ತು ಕಾರವಾರ ಕ್ರಿಮ್ಸ್ ನಲ್ಲಿ( 1) ಸಿರ್ಸಿ ಆಸ್ಪತ್ರೆಯಲ್ಲಿ (1) ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣವುಳ್ಳ ಇತರೆ 11ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.
ಕೆಲ ದಿನಗಳಿಂದೀಚೆಗೆ ಲಸಿಕೆ ಪೂರೈಕೆ ಕೊರತೆಯಿಂದ ನಿರೀಕ್ಷಿತ ಮಟ್ಟದ ಲಸಿಕಾಕರಣ ನಡೆಯುತ್ತಿರಲಿಲ್ಲ. ಮಧ್ಯೆ ಮಧ್ಯೆ ವ್ಯಾಕ್ಸಿನೇಶನ್ ಗೆ ತಾತ್ಕಾಲಿಕ ಬ್ರೇಕ್ ಬಿದ್ದು ಲಸಿಕೆಗೆ ಕಾದಿರುವ ಕೆಲವರಿಗೆ ನಿರಾಶೆಯಾಗಿದ್ದೂ ಇದೆ.
ಸೋಮವಾರ ತಾಲೂಕು ವ್ಯಾಪ್ತಿಯ ಹಾರವಾಡಾ ( 62), ನದಿ ಭಾಗ( 97), ಭಾವಿಕೇರಿ (79), ಕೆ ಎಲ್ ಈ ಕಾಲೇಜ್ (267), ಸ.ಪ್ರ.ದ.ಕಾಲೇಜ್ ಪೂಜಗೇರಿ ( 665) ಸೇರಿ ಒಟ್ಟೂ 1170 ಡೋಸ್ ಲಸಿಕೆ ನೀಡಲಾಗಿದೆ.
ಥಟ್ಟನೆ ಪರೀಕ್ಷೆ ನಡೆಸುವ (RAT) ಪರೀಕ್ಷಾ ಫಲಿತಾಂಶದ ನಿಖರತೆ ಬಗ್ಗೆ ಮತ್ತು ಅದನ್ನು ನಡೆಸುವ ಆರೋಗ್ಯ ಇಲಾಖೆ ಕ್ರಮದ ಬಗ್ಗೆ ಈ ಹಿಂದಿನಿಂದಲೂ ಅಲ್ಲಲ್ಲಿ ಕೆಲವೆಡೆ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದೂ ಇದೆ.
ಆದರೆ ಅವೆಲ್ಲ ಸಾಮಾನ್ಯ ಪ್ರಕರಣಗಳ ಪರೀಕ್ಷೆ ವೇಳೆ ನಡೆದಿರಬಹುದಾಗಿದ್ದು, ಸೋಂಕಿತ ಯಾದಿಯಲ್ಲಿರುವ ಕೆಲವರಿಗೆ ಮಾನಸಿಕ ಒತ್ತಡಕ್ಕೆ ಕಾರಣವಾಗಿರಬಹುದೇ ಹೊರತು ಇತರೇ ಅಡ್ಡ ಪರಿಣಾಮ ಬೀರಿರಲಿಕ್ಕಿಲ್ಲ.
ಆದರೆ ಅಂಕೋಲಾ ತಾಲೂಕಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯೋರ್ವರ ಮೂಗು ದ್ರವ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಪರೀಕ್ಷಾ ಫಲಿತಾಂಶದ ಅಸಲಿಯತ್ತನ್ನೇ ಪ್ರಶ್ನಿಸುವಂತಿದೆ?. ಇಷ್ಟಕ್ಕೂ ಪರೀಕ್ಷೆಗೊಳಪಟ್ಟ ವ್ಯಕ್ತಿ ಇತ್ತೀಚಿನ ಅಪರಾಧ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಎನ್ನುವುದು ಗಮನಾರ್ಹ ವಿಷಯವಾಗಿದ್ದು, ನಿಜವಾಗಿ ಆತನಲ್ಲಿ ಪಾಸಿಟಿವ್ ಲಕ್ಷಣಗಳಿವೆಯೇ? ಹಾಗಾದರೆ ಆತನನ್ನು ಅಸ್ಪತ್ರೆ ಅಥವಾ ಇತರೆಡೆ ಪ್ರತ್ಯೇಕವಾಗಿಡಲಾಗಿದೆಯೇ? ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಅಪರಾಧ ಕೃತ್ಯದಲ್ಲಿ ಜೊತೆ ನೀಡಿದ ಉಳಿದ ಆರೋಪಿಯ ಪರೀಕ್ಷೆ ನಡೆಸಲಾಗಿದೆಯೇ?
ಆರೋಪಿತರ ಕುಟುಂಬಸ್ಥರು ಮತ್ತು ಪೊಲೀಸ್ ಸಿಬ್ಬಂದಿಗಳ ಪರೀಕ್ಷೆಯೂ ನಡೆದಿದೇಯೇ ಎಂಬ ಪ್ರಶ್ನೆ ಮೂಡುವಂತಾಗಿದೆ. ಅಥವಾ ಆರೋಪಿತನೇ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿ ಇಲ್ಲವೇ ಸಿಬ್ಬಂದಿಗಳ ಮೇಲೆ ತನಗಿರುವ ಪ್ರಭಾವ ಬೀರಿ ಇಲ್ಲವೇ ಒತ್ತಡ ತಂದು ಪಾಸಿಟಿವ್ ದಾಖಲಿಸುವಂತೆ ಸಂಚು ರೂಪಿಸಿದನೇ? ಇಲ್ಲವೇ ಮಾಯಾ ಗನ್ನಡಿಯಂತಿರುವ ರ್ಯಾಪಿಡ್ ಕಿಟ್ ನಿಂದಲೇ ಪರೀಕ್ಷೆ ಫಲಿತಾಂಶ ಬದಲಾಯಿತೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುವಂತಾಗಿದೆ.?
ಕರೊನಾ ತುರ್ತು ಸೇವೆಯ ಹೆಸರಿನಲ್ಲಿ ಸಂಪೂರ್ಣ ತರಬೇತಿ, ಜ್ಞಾನ ಇಲ್ಲದ ಸಿಬ್ಬಂದಿಗಳಿಗೂ ಯದ್ವಾ ತದ್ವಾ ಡ್ಯುಟಿಗೆ ಹಾಜರಾಗುವಂತೆ ಆದೇಶಿಸಿ, ಬಳಸಿಕೊಂಡಿರಬಹುದಾದ ಸಾಧ್ಯತೆ ಇದ್ದು, ಮೇಲಾಧಿಕಾರಿಗಳ ಯಡವಟ್ಟಿನ ನಿರ್ಧಾರಗಳಿಂದಲೂ ಹೀಗಾಗಿರಲು ಬಹುದು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಅಲ್ಲಲ್ಲಿ ಕೇಳಿ ಬಂದಿದೆ ಎನ್ನಲಾಗಿದ್ದು, ಅದು ನಿಜವೇ ಆಗಿದ್ದರೆ ಈ ಅಚಾತುರ್ಯ ಮತ್ತು ಅದರ ಅಡ್ಡ ಪರಿಣಾಮಗಳಿಗೆ ಹೊಣೆ ಯಾರು ? ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಈ ವಿಷಯನ್ನು ಗಂಭೀರವಾಗಿ ಚರ್ಚಿಸಿ, ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸುವರೇ? ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ