ಕುಮಟಾ: ಹಿಂದೂ ಧರ್ಮದಲ್ಲಿ ಪೂಜನೀಯವೆಂದು ಕರೆಯಲ್ಪಡುವ ಪ್ರಮುಖ ವೃಕ್ಷವೆಂದರೆ ಅಶ್ವತ್ಥ ಮರ. ಜೈನ ಧರ್ಮಿಯರು ಹಾಗೂ ಬೌಧ್ಧ ಅನುಯಾಯಿಗಳಿಗೂ ಇದು ಪವಿತ್ರ ವೃಕ್ಷ. ಔಷಧಿಯುಕ್ತ ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವದರ ಜೋತೆಗೆ ಆಧ್ಯಾತ್ಮಿಕ ಪ್ರಗತಿಯಲ್ಲಿಯೂ ಸಹ ಅಶ್ವಥ ಮರದ ಪಾತ್ರ ಪ್ರಮುಖವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದೇವತೆ ಶ್ರೀ ಶಾಂತಿಕಾಂಬಾ ದೇವಸ್ಥಾನದ ಎದುರು ನಿಂತು ಸುತ್ತಲು ವೀಕ್ಷಿಸಿದರೆ ದೃಷ್ಟಿಯುದ್ದಕ್ಕೂ ಸುಂದರವಾದ ಅತ್ಯಂತ ಪುರಾತನ ಅಶ್ವತ್ಥ ಕಟ್ಟೆಗಳೇ ರಾರಾಜಿಸುತ್ತವೆ. ಒಂದಕ್ಕಿಂತ ಒಂದು ಕಟ್ಟೆ ತನ್ನ ಶೋಭೆಯಿಂದ ನೋಡುಗರನ್ನು ವಿಸ್ಮಯಗೊಳಿಸುತ್ತವೆ.
100ಕ್ಕಿಂತಲೂ ಹೆಚ್ಚು ಅಶ್ವತ್ಥ ಕಟ್ಟೆಗಳನ್ನು ಹೊಂದಿರುವ ಗ್ರಾಮ ಹೆಗಡೆ, ಹಾಗಾಗಿ ಇದಕ್ಕೆ ಅಶ್ವಥ ಗ್ರಾಮ, ಕಟ್ಟೆಪುರ ಎಂದು ಸಹ ಕರೆಯುತ್ತಿದ್ದರು. ಉತ್ತರಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಶ್ವಥ ಕಟ್ಟೆಗಳನ್ನು ಹೊಂದಿರುವ ಗ್ರಾಮ ಇದಾಗಿದೆ. ಇಂದು ಹಲವು ಕಟ್ಟೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಯುವ ಪೀಳಿಗೆ ಇದರ ಅಭಿವೃಧ್ಧಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಇಲ್ಲಿರುವ ಒಂದೊಂದು ಕಟ್ಟೆಗೂ ಸಹ ಒಂದೊಂದು ಹೆಸರು ಹಾಗೂ ವಿಶೇತೆಗಳಿಗೆ, ಗೌಡ್ರ ಕಟ್ಟೆ, 8 ಮೂಲೆ ಕಟ್ಟೆ, ದೇವರುಕುಳ್ಳೊಕಟ್ಟೆ, ಮುಂಜಿಕಟ್ಟೆ, ಕುಂಭದಗೋಳಿಕಟ್ಟೆ, ಸುಗ್ಗಿಕಟ್ಟೆ, ದೇವರುಹೆಗಡೆ ಕಟ್ಟೆ, ಕಾಶಿನಾಥ ಪಟೇಲರ ಕಟ್ಟೆ, ಕೌರಾದಿಕಟ್ಟೆ, ತುರ್ಕಜ್ಜನ ಕಟ್ಟೆ, ಹೀಗೆ ಹತ್ತು ಹಲವಾರು ಕಟ್ಟೆಗಳು ಈ ಊರಿನಲ್ಲಿ ಕಾಣಲು ಸಿಗುತ್ತವೆ.
ಮದುವೆ ಸಮಾರಂಭದ ಆರಂಭದಲ್ಲಿ ಜನರು ಈ ಕಟ್ಟೆಗೆ ಬಂದು ಶಾಸ್ತ್ರೋಕ್ತವಾಗಿ ಕುಂಬಾರರಿಂದ ಕುಂಭವನ್ನು ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಇಂದಿಗೂ ಈ ಕಟ್ಟೆಯನ್ನು ಕುಂಭದಗೋಳಿ ಕಟ್ಟೆ ಎಂದು ಕರೆಯುತ್ತಾರೆ. ಅನಾದಿಕಾಲದಿಂದಲೂ ಜನರು ಈ ಕಟ್ಟೆಯ ಬಳಿಯೇ ತಮ್ಮ ಮಕ್ಕಳ ಮುಂಜಿ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ಇಂದಿಗೂ ಈ ಕಟ್ಟೆ ಮುಂಜಿಕಟ್ಟೆ ಎಂದು ಪ್ರಸಿದ್ಧಿಯಾಗಿದೆ. ಹೆಗಡೆ ಗ್ರಾಮದೇವಿಯ ಜಾತ್ರೆಯ ಸಮಯದಲ್ಲಿ ದೇವರು ಈ ಕಟ್ಟೆಯ ಮೇಲೆ ಕುಳಿತು ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಜಾತ್ರೆಗೆ ಚಾಲನೆ ದೊರೆಯತ್ತದೆ, ಈ ಸಂಪ್ರದಾಯ ಇಂದಿಗೂ ನಡೆಯುತ್ತಾ ಬಂದಿದೆ. ಅದಕ್ಕಾಗಿ ಇದನ್ನು ದೇವರುಕುಳ್ಳೋ ಕಟ್ಟೆ ಎಂದು ಕರೆಯುತ್ತಾರೆ. ಸುಗ್ಗಿಯ ಸಮಯದಲ್ಲಿ ಸುಗ್ಗಿಯ ತಂಡದವರು ಈ ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿಯನ್ನು ಪಡೆದು ಮುಂದಿನ ಊರಿಗೆ ಹೋಗುತ್ತಾರೆ. ಹಾಗಾಗಿ ಜನರು ಈ ಕಟ್ಟೆಗೆ ಸುಗ್ಗಿ ಕಟ್ಟೆ ಎಂದು ಕರೆಯುತ್ತಾರೆ.
ಪೋರ್ಚುಗೀಸರ ಕಾಲದಲ್ಲಿ ಇದೇ ಮಾರ್ಗವಾಗಿ ಅಘನಾಶಿನಿ ನದಿಯ ಜಂಗಲ್ ಮೂಲಕ ಕಾರವಾರ, ಗೋವ, ಮುಂಬೈ ಹಾಗೂ ಇನ್ನಿತರ ಪ್ರಾಂತ್ಯಗಳಿಗೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಆ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ಕಟ್ಟೆಗಳನ್ನು ನಿರ್ಮಿಸಿರಬೇಕು, ಅಲ್ಲದೆ, ಜಾತ್ರಾ ಮಹೋತ್ಸವಗಳಿಗಾಗಿ ಕಟ್ಟೆಗಳನ್ನು ನಿರ್ಮಿಸಲಾಗಿದೆ,, ಜೊತೆಗೆ ಕೆಲವರು ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಹರಕೆ ಹೊತ್ತು ಕಟ್ಟೆಗಳನ್ನು ನಿರ್ಮಿಸಿದ್ದಾರೆ, ಹಲವು ಮನೆತನದವರು ಪುಣ್ಯಕಾರ್ಯವೆಂದು ಕಟ್ಟೆಗಳನ್ನು ಕಟ್ಟಿದ್ದಾರೆ, ಆಧ್ಯಾತ್ಮ ಸಿಧ್ಧಿಗಾಗಿ ಕಟ್ಟೆಗಳನ್ನು ನಿರ್ಮಿಸಿದ್ದಾರೆ ಎಂದು ಹಿರಿಯರಾದ ರಾಮದಾಸ ಬಾಳೇರಿಯವರು ನಮ್ಮ ವಿಸ್ಮಯ ಟಿ.ವಿ.ಗೆ ಮಾಹಿತಿ ನೀಡಿದ್ದಾರೆ.
ಡಾ|| ಶಿವರಾಮ ಕಾರಂತರ “ಅದೇ ಊರು ಅದೇ ಮರ” ಎಂಬ ಕಾದಂಬರಿಯಲ್ಲಿ ಹೆಗಡೆ ಊರಿನ ಅಶ್ವಥ ಕಟ್ಟೆಗಳ ಬಗ್ಗೆ ಉಲ್ಲೇಖವಿದೆ. ಉತ್ತರ ಕನ್ನಡದ ಶಿವಾನಂದ ಕಳವೆ ಹಾಗೂ ಅನೇಕ ಲೇಖಕರು ಸಹ ಹೆಗಡೆ ಗ್ರಾಮದ ಅಶ್ವಥ ಕಟ್ಟೆಗಳ ಮಹತ್ವದ ಬಗ್ಗೆ ಬರೆದಿದ್ದಾರೆ ಎಂದು ಸಾಹಿತಿಗಳು, ಯುವ ಕೃತಿ ಪುರಸ್ಕøತರಾದ ಉದಯ ಮಡಿವಾಳರವರು ತಿಳಿಸಿದ್ದಾರೆ. ಮುಸ್ಸಂಜೆಯ ಸಮಯದಲ್ಲಿ ಜನರು ಈ ಕಟ್ಟೆಗಳ ಮೇಲೆ ಕುಳಿತು ಸುದ್ದಿ ವಿನಿಮಯ ಮಾಡುವುದನ್ನು ನೋಡಿದರೆ ಕಟ್ಟೆ ಪುರಾಣವೆಂದರೆ ಇದೇನಾ ಅಂತ ಉದ್ಘಾರ ಮಾಡುವ ಹಾಗಿರುತ್ತದೆ. ಈ ಗ್ರಾಮದಲ್ಲಿ ಅಶ್ವಥ ಮರಗಳು ಅಧಿಕವಾಗಿರುವುದರಿಂದ ಜನರು ಶ್ವಾಸಕೋಶದಂತಹ ಖಾಯಿಲೆಗೆ ತುತ್ತಾಗುವ ಪ್ರಮಾಣ ಸಹ ತುಂಬಾನೇ ಕಡಿಮೆಯಿದೆ ಎಂದು ಹಿರಿಯರು ಹೇಳುತ್ತಾರೆ. ಆಧ್ಯಾತ್ಮಿಕವಾಗಿಯೂ ವೈಜ್ನಾನಿಕವಾಗಿಯೂ ಹಗಡೆ ಗ್ರಾಮ ಆನಂದದ ತಾಣವಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ