Follow Us On

WhatsApp Group
Important
Trending

ಜಾತುರ್ಮಾಸ ವೃತದಲ್ಲಿದ್ದ ಶ್ರೀಗಳನ್ನು ಭೇಟಿ ಮಾಡಿ ಹಿಂತಿರುಗುವ ವೇಳೆ ಭೀಕರ‌ದುರಂತ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ರಸ್ತೆ ಮಧ್ಯೆ ವ್ಯಕ್ತಿ ಸಾವು

ಭಟ್ಕಳ: ಜಾತುರ್ಮಾಸ ವೃತದಲ್ಲಿದ್ದ ಉಜಿರಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಊರಿಗೆ ಹಿಂತಿರುಗುವ ವೇಳೆ ಮಾರ್ಗ ಮಧ್ಯದಲ್ಲಿ ನಿಲ್ಲುಸಿದ ವಾಹನದಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಬುಲೆಟ್ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ .

ಮೃತ ವ್ಯಕ್ತಿ  ಮಂಜುನಾಥ ನಾಯ್ಕ (40) ಭಟ್ಕಳ ತಾಲೂಕಿನ ಜಾಲಿಯ ನಿವಾಸಿ ಎಎಂದು ತಿಳಿದು ಬಂದಿದ್ದು, ಇವರು ಭಟ್ಕಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕರು ಕೂಡ ಆಗಿದ್ದರು. ಬೈಕ್ ಸವಾರ ಉಪ್ಪುಂದ ಕರ್ಕಿಕಳಿ ನಿವಾಸಿ ಕಿರಣ್ (21) ಗಂಭೀರ ಗಾಯಗೊಂಡಿದ್ದಾನೆ.

ಟೆಂಪೋ ಟ್ರ್ಯಾಕ್ಸ್ ಮೂಲಕ ಉಜಿರಿ ಹಾಗೂ ಧರ್ಮಸ್ಥಳ ತೆರಳಿ ಊರಿಗೆ ಹಿಂತಿರುಗುತ್ತಿದ್ದ ಭಟ್ಕಳ ಜಾಲಿಯ ತಂಡವೊಂದು ರಾಹುತನಕಟ್ಟೆ ಬಳಿ ವಾಹನ ನಿಲ್ಲಿಸಿದ್ದು, ಅವರಲ್ಲಿ ಮಂಜುನಾಥ್ ನಾಯ್ಕ ಎಂಬುವವರು ರಾಷ್ಟ್ರೀಯ ಹೆದ್ದಾರಿಯ ಎದುರುಬದಿ ಇದ್ದ ಮೀನಿನ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

ಅಫಘಾತದ ರಭಸಕ್ಕೆ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಬದಿಗೆ ಎಸೆಯಲ್ಪಟ್ಟು ಅಲ್ಲಿಯೇ ಮೃತಟ್ಟಿದ್ದಾರೆ. ಬುಲೆಟ್ ಬೈಕ್ ಸವಾರ ಡಿವೈಡರ್ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ.

ಬೈಂದೂರು ಪೊಲೀಸ್ ಪಿಎಸೈ ಪವನ್ ನಾಯಕ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಟ್ರೀಟ್ ಲೈಟ್ ಇಲ್ಲದೆ ಇರುವುದರಿಂದ ಈ ಅಪಘಾತ ಸಂಭವಿಸಿತಾ?

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜನವಸತಿ ಪ್ರದೇಶವಿದ್ದರೇ ವಿದ್ಯುತ್ ದೀಪಗಳನ್ನು ಅಳವಡಿಸಬೇಕೆಂಬ ನಿಯಮವಿದ್ದರೂ ಐಆರ್‌ಬಿ ಕಂಪೆನಿ ಎಲ್ಲವನ್ನೂ ಗಾಳಿಗೆ ತೂರಿ ಕುಳಿತಿದೆ. ರಾಹುತನಕಟ್ಟೆಯ ಜನಸಂಚಾರ ಇರುವ ಭಾಗದಲ್ಲಿ ತೀರ ಕತ್ತಲು ಆವರಿಸಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ.

ಈ ಹಿಂದೆ ಮೂರು ಭಾರಿ ದನಗಳು ಅಡ್ಡಬಂದು ಕಾರು, ಇನ್ನೋವಾ, ಬೈಕ್ ಸವಾರರು ಅಪಘಾತಕ್ಕೊಳಗಾಗಿದ್ದರು. ಹಿಂದೆ ವ್ಯಕ್ತಿಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭವೇ ಅಪಘಾತಕ್ಕೊಳಗಾಗಿದ್ದರು.

ರಾಹುತನಕಟ್ಟೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಪಾಯಿಂಟ್ ಮಾಡಿ ಇಟ್ಟಿದ್ದರೂ ತಾಂತ್ರಿಕ ಕಾರಣಗಳನ್ನು ನೀಡಿ ವಿದ್ಯುತ್ ದೀಪ ಅಳವಡಿಸಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಐಆರ್‌ಬಿ ಕಂಪೆನಿಯ ಸಿಬ್ಬಂಧಿಗಳು ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button