Big News
Trending

ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾಗಿದ್ದು ಇಲ್ಲೇ!

ಇಲ್ಲಿ ಪೂಜೆಗಾಗಿ ಸಮುದ್ರದಿಂದ ಸ್ವೀಕರಿಸಿದ ನೀರು ಸಿಹಿಯಾಗುತ್ತಾ?
ಶಿವಗಂಗೆಯರ ವಿವಾಹ: ಐತಿಹಾಸಿಕ ಹಿನ್ನಲೆ ಏನು?

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶಾರ್ವರಿ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾಗಿ ಜರುಗಿತು. ವಿಶಾಲವಾದ ಮಹಾಬಲೇಶ್ವರ ಕಡಲ ತೀರದಲ್ಲಿ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.


ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಗುಮಟೆಪಾಂಗ ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ಭಕ್ತರು ಆರತಿ ನೀಡಿ ದೇವದಂಪತಿಗಳನ್ನು ಬರಮಾಡಿಕೊಂಡರು. ವಿವಾಹ ಮಹೋತ್ಸವದ ನಂತರ ಶಿವ -ಗಂಗೆಯರು ಶ್ರೀ ದೇವಾಲಯದ ‘ಅಮೃತಾನ್ನ’ ಭೋಜನ ಶಾಲೆಗೆ ಚಿತ್ತೈಸಿ ದೇವರಾಜೋಪಚಾರ ಪೂಜೆ ಸ್ವೀಕರಿಸಿದರು. ಆನಂತರ ಪ್ರಸಾದ ವಿತರಣೆ ನಡೆಯಿತು. ಉಪಾಧಿವಂತ ಮಂಡಲದ ಸದಸ್ಯರು, ಊರ ನಾಗರಿಕರು, ಎಲ್ಲ ಸಮಾಜದ ಬಂಧುಗಳು ಉಪಸ್ಥಿತರಿದ್ದರು

ಶಿವಗಂಗೆಯರ ವಿವಾಹ: ಐತಿಹಾಸಿಕ ಹಿನ್ನಲೆ


ಶಿವನ ಶಿರದಲ್ಲಿರುವ ಗಂಗೆಯು ಶಿವನ ಸಾನಿಧ್ಯದಲ್ಲಿ ನೆಲೆಸಲು ಬಲೆ ಬೀಸಿ ಮೀನು ಹಿಡಿದು ಜೀವನ ನಡೆಸುವ ಅಂಬಿಗರ ಬಲೆಗೆ ಗಂಗವಳಿ ಸಮೀಪದ ಸಮುದ್ರದಲ್ಲಿ ಮೂರ್ತಿ ರೂಪದಲ್ಲಿ ಸಿಗುತ್ತದೆ. ಅಂಬಿಗರು ಮೂರ್ತಿಯನ್ನು ಭಕ್ತಿಯಿಂದ ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ಪ್ರತಿಷ್ಠಾಪಿಸಿ ತಮ್ಮ ಕುಲದೇವತೆಯಾಗಿ ಅನಾದಿ ಕಾಲದಿಂದ ಪೂಜಿಕೊಳ್ಳುತ್ತಾ ಬಂದಿದ್ದಾರೆ. ಗೋಕರ್ಣದಲ್ಲಿ ನೆಲೆಸಿರುವ ಶ್ರೀ ಮಹಾಬಲೇಶ್ವರ ತನ್ನ ಪರಿವಾರದೊಂದಿಗೆ ದಸರಾ ಹಬ್ಬದ ಸಂದರ್ಭದಲ್ಲಿ ಮಾಸ್ಕೇರಿ ಸೀಮೆಗೆ ಬಂದಾಗ ಚೆಲುವೆಯೂ, ಸೌಂದರ್ಯವತಿಯೂ ಆದ ಗಂಗೆಯ ರೂಪ, ಲಾವಣ್ಯಕ್ಕೆ ಮನಸೋತು ಅವಳನ್ನು ಮದುವೆಯಾಗಲು ನಿಶ್ಚಿಯಿಸುತ್ತಾನೆ.


ಆದರೆ ಆಗಲೇ ಗೌರಿಯನ್ನು ಮದುವೆಯಾಗಿರುವ ಮಹಾಬಲೇಶ್ವರನು ಗಂಗೆಯನ್ನು ಬಿಡಲಾಗದೇ, ಗೌರಿಗೆ ತಿಳಿಯದ ರೀತಿಯಲ್ಲಿ ಗಂಗೆಯನ್ನು ಮದುವೆಯಾಗಲು, ಗೌರಿಯು ಗಾಢ ನಿದ್ರೆಯಲ್ಲಿರುವಾಗ ಕೃಷ್ಣ ಪಕ್ಷ ಅಷ್ಟಮಿಯ ಮಧ್ಯರಾತ್ರಿ ಕತ್ತಲೆಯಲ್ಲಿ ಸಮುದ್ರ ದಂಡೆಯಲ್ಲಿ ಪರಿವಾರದೊಂದಿಗೆ ನಡೆದು ಬರುತ್ತಾನೆ. ಗಂಗೆಕೊಳ್ಳದಲ್ಲಿ ಈ ಸಂದರ್ಭದಲ್ಲಿ ಉತ್ತರದ ಗಂಗೆಯು ಉಕ್ಕುತ್ತಾಳೆಂಬುದು ಹಾಗೂ ಮಹಾಬಲೇಶ್ವರ ಸ್ನಾನ ಮಾಡುವ ಸಂದರ್ಭದಲ್ಲಿ ಆ ಭಾಗದ ನೀರು ಸಿಹಿಯಾಗುತ್ತದೆ ಎಂದು ಪೂಜೆಗಾಗಿ ಸ್ವೀಕರಿಸಿದ ಒಂದು ಬಿಂದಿಗೆ ನೀರು ಸಿಹಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.


ಸ್ನಾನ ಕಾರ್ಯಗಳನ್ನು ಪೂರೈಸಿ ಕತ್ತಲಿರುವಾಗಲೇ ಗಂಗಾದೇವಿ ನೆಲೆಸಿರುವ ದೇವಸ್ಥಾನಕ್ಕೆ ಶಿವ ಬರುತ್ತಾನೆ. ಶಿವನ ಬರುವಿಕೆಯನ್ನು ಅರಿತ ಗಂಗೆಯು ತಾನೊಬ್ಬಳೇ ಇಲ್ಲಿರುವುದರಿಂದ ಪರಪುರುಷನಾದ ಶಿವನು ಒಳ ಪ್ರವೇಶಿಸದಂತೆ ಬಾಗಿಲು ಹಾಕುತ್ತಾಳೆ. ಮಾರುವೇಷದಲ್ಲಿರುವ ಶಿವನು ತನ್ನ ಪರಿಚಯವನ್ನು ತನಗಿರುವ ವಿವಿಧ ನಾಮಾಂಕಿತಗಳೊoದಿಗೆ ಅರಹುತ್ತಾ ನಾನಾ ಪರಿಯಾಗಿ ಹೇಳುತ್ತಾನೆ. ಅವನ ಯಾವ ಮಾತಿಗೂ ಗಂಗೆಯು ಒಪ್ಪದಿರಲು ತಾನು ನಿಜವಾದ ಶಿವನೆಂದೂ, ಮಹಾಬಲೇಶ್ವರನಾಗಿ ಗೋಕರ್ಣದಲ್ಲಿ ನೆಲೆಸಿರುವ ಬಗ್ಗೆ ತಿಳಿಸುತ್ತ ತನ್ನ ನಿಜ ರೂಪದ ಪರಿಚಯ ತೋರಿಸಲು ಬಾಗಿಲು ತೆರೆಯುತ್ತಾಳೆ.

ಬಳಿಕ ಗಂಗೆ ಶಿವನೊಂದಿಗೆ ವಿವಾಹವಾಗಲು ಒಪ್ಪಿಗೆ ಸೂಚಿಸುತ್ತಾಳೆ. ಮುಂದೆ ಅಶ್ವಿನಿ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಮತ್ತು ಗಂಗಾವಳಿ ಮಧ್ಯ ಸಮುದ್ರ ದಂಡೆಯ ಮೇಲೆ ಶಿವ ಗಂಗೆಯರ ವಿವಾಹ ನೆರವೇರುವುದೆಂದು ನಿಶ್ಚಯವಾಗುತ್ತದೆ ಎನ್ನುವುದು ಇತಿಹಾಸ.

ವಿಸ್ಮಯ ನ್ಯೂಸ್, ಗೋಕರ್ಣ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button