Focus News
Trending

ಹಿಂದೂ ರುದ್ರಭೂಮಿ ಅತಿಕ್ರಮಣ ತೆರವಿಗೆ ಪುರಸಭೆಯ ನಿರ್ಲಕ್ಷ್ಯ: ಸ್ಮಶಾನ ಸುರಕ್ಷಾ ಸಮಿತಿಯಿಂದ ಪ್ರತಿಭಟನೆ

ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿನ ಕೋಟೆವಾಡದ ಹಿಂದೂ ಸ್ಮಶಾನ ರುದ್ರಭೂಮಿಯ ಅಭಿವೃದ್ದಿಯಲ್ಲಿ ಪುರಸಭೆಯು ತೋರುತ್ತಿರುವ ನಿರ್ಲಕ್ಷ್ಯದ ಕುರಿತು ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೊದಲು ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಲಾಯಿತು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸುರೇಶ ವೆರ್ಣೇಕರ ಕಳೆದ 40 ವರ್ಷಗಳಿಂದ ಕೋಟೆವಾಡದ ಹಿಂದೂ ಸ್ಮಶಾನದ ರಕ್ಷಣೆಗಾಗಿ ಹೋರಾಟ ನಡೆಯುತ್ತಲೇ ಇದೆ. ಹಿಂದೂ ರುದ್ರಭೂಮಿಯ ಒಟ್ಟೂ 7 ಎ. 2 ಗುಂಟೆ ಪ್ರದೇಶ ರುದ್ರಭ ರಾಷ್ಟ್ರೀಯ ಹೆದ್ದಾರಿಗಾಗಿ 32 ಗುಂಟೆ ಹೋಗಿದ್ದು ಉಳಿದ ಜಾಗೆಯಲ್ಲಿ ಈಗಾಗಲೇ 34 ಗುಂಟೆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ,

ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅತಿಕ್ರಮಣ ತೆರವಿನ ಬಗ್ಗೆ ಹಲವು ಸಲ ಹೋರಾಟ ಮಾಡಿದ ಫಲವಾಗಿ ಅತಿಕ್ರಮಣ ತೆರವುಗೊಳಿಸಿ ರುದ್ರಭೂಮಿಯ ಅಭಿವೃದ್ಧಿ ಕಾರ್ಯ ನಡೆಸುವಂತೆ ತಾಲೂಕ ದಂಡಾಧಿಕಾರಿ ಪುರಸಭೆಗೆ ಆದೇಶ ನೀಡಿದ್ದರೂ ಪುರಸಭೆಯವರು ಕ್ರಮ ಕೈಗೊಂಡಿಲ್ಲ.

ಈ ಕುರಿತು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಾಗ ಜಿಲ್ಲಾಧಿಕಾರಿಗಳು ಅಂಕೋಲಾ ತಹಶೀಲ್ದಾರರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಂಡು ವರದಿ ಮಾಡುವಂತೆ ತಿಳಿಸಿದ್ದಾರೆ. ಆದರೂ ಪುರಸಭೆ ಯಾವ ಕ್ರಮಕ್ಕೂ ಮುಂದಾಗಿಲ್ಲ. ಪದೇ ಪದೇ ಮನವಿ ನೀಡಿ ಸಾಕಾಗಿದೆ ಹೀಗಾಗಿ ಇನ್ನು ಮುಂದೆ ಉಗ್ರ ಹೋರಾಟದ ಮೂಲಕ ಸ್ಮಶಾನ ಭೂಮಿಯನ್ನು ರಕ್ಷಿಸಬೇಕಾಗುವದು ಎಂದರು.
ಪಟ್ಟಣದ ಬೀದಿಯಲ್ಲಿ ಜಾಗಟೆ ಬಾರಿಸುತ್ತ ಮೆರವಣಿಗೆ ನಡೆಸಿ ಸಮಾಜ ಮಂದಿರದ ಬಳಿ ತೆರಳಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪುರಸಭೆಯ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ ಮತ್ತು ಅಧ್ಯಕ್ಷೆ ಶಾಂತಲಾ ನಾಡಕರ್ಣಿಯವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪುರಸಭೆಗೆ ಎಷ್ಟು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿ ಇದುವರೆಗೆ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ತಹಶೀಲ್ದಾರರು ಅತಿಕ್ರಮಣ ಖುಲ್ಲಾಪಡಿಸಲು ಆದೇಶಿಸಿದ್ದರೂ ಯಾಕೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಕೇಳಲಾಗಿದೆ. ಈ ಸಮಯದಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಟೆಂಡರ ಕರೆಯಲಾಗುವದು ಎಂಬ ಮಾತುಗಳು ಕೇಳಿಬರುತ್ತಿವೆಯೆಂದು ಸ್ಮಶಾನ ಸುರಕ್ಷಾ ಸಮಿತಿಯವರು ಮತ್ತು ಪುರಸಭಾ ಮುಖ್ಯಾಧಿಕಾರಿ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಮುಖ್ಯಾಧಿಕಾರಿ ಹೋರಾಟಗಾರರನ್ನು ಸಮಾಧಾನಪಡಿಸಲು ಪ್ರಯತ್ನಪಟ್ಟರಾದರೂ ಹೋರಾಟಗಾರರು ನಮಗೆ ಕಾನೂನಿನ ಪಾಠ ಮಾಡುವದು ಬೇಡ ಮೊದಲು ಅತಿಕ್ರಮಣ ತೆರವುಗೊಳಿಸಿಕೊಡಿ ಎಂದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ ಇಡೀ ಪ್ರಕರಣದ ಬಗ್ಗೆ ಪರಿಶೀಲಿಸಿ ಕಾನೂನು ಪಂಡಿತರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ಬಾಲಕೃಷ್ಣ ನಾಯ್ಕ, ಎಂಜಿನೀಯರ ಭಾಸ್ಕರ ಗೌಡ, ಸ್ಮಶಾನ ಸುರಕ್ಷಾ ಸಮಿತಿಯ ಕಾರ್ಯದರ್ಶಿ ಮೋಹನ ಎಸ್ ನಾಯ್ಕ, ಸುರೇಶ ಸಾತಪ್ಪ ನಾಯ್ಕ, ಉದಯ ರಾಮಚಂದ್ರ ನಾಯ್ಕ, ಮಾರುತಿ ನಾಯ್ಕ, ನಾರಾಯಣ ಆರ್ ನಾಯ್ಕ, ಅಭಿಜಿತ ಶೇಣ್ವಿ, ಪ್ರಕಾಶ ನಾಯ್ಕ, ಸಂಜಯ ನಾಯ್ಕ, ಶಿವಾನಂದ ನಾಯ್ಕ, ಮಂಜುನಾಥ ವಿ ನಾಯ್ಕ, ಹಮ್ಮು ಗೌಡ, ಮಂಜು ಆಗೇರ, ರಾಮದಾಸ ಐಗಳ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕಿನ ಕೋಟೆ ವಾಡದಲ್ಲಿರುವ ಹಿಂದೂ ಸ್ಮಶಾನ ಭೂಮಿಗಾಗಿ ಶೇಡಗೇರಿ ಸ.ನಂ. 83ಅ|ಬ| ನೇದರಲ್ಲಿ 4 ಎ 20 ಗುಂ. ಹಾಗೂ ಸ.ನಂ. 158/2 ರಲ್ಲಿ 2ಎ 22ಗುಂ ಗುಂಟೆ ಜಮೀನು ಸೇರಿ ಒಟ್ಟು 7ಎ.2ಗುಂ ಮೀಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಗಾಗಿ ಗಡಿ ಗುರುತು ನಾಶವಾಗಿರುವ ಸಾಧ್ಯತೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿಕ್ರಮಣ ನಡೆಯುತ್ತಿದೆ ಎಂದು ಸ್ಮಶಾನ ಸುರಕ್ಷಾ ಸಮಿತಿಯವರು ಆಗ್ರಹಿಸಿ ಪುರಸಭೆಯ ಗಮನಕ್ಕೆ ಬರುತ್ತಲೇ ಇದ್ದರು ಯಾವುದಕ್ಕೂ ಸಕಾರಾತ್ಮಕ ಸ್ಪಂದನೆ ಸಿಗದಿದ್ದಾಗ ಅನಿವಾರ್ಯವಾಗಿ ಹೋರಾಟಕ್ಕಿಳಿದು ಸ್ಮಶಾನ ಭೂಮಿ ಸರ್ವೇ ಕಾರ್ಯ ನಡೆಸಿ ಗಡಿ ಗುರುತು ಮಾಡಲೇಬೇಕೆಂದು ಪಟ್ಟು ಹಿಡಿದ ಪರಿಣಾಮ ತಹಶೀಲ್ದಾರ ಉದಯ ಕುಂಬಾರ 12 ಡಿಸೆಂಬರ 2020ಕ್ಕೆ ಸರ್ವೇ ಕಾರ್ಯ ನಡೆಸಿ ಗಡಿ ಗುರುತಿಸಿದಾಗ ಸ.ನಂ.83|ಅ|ಬ ರಲ್ಲಿ 34 ಗುಂ. ಜಾಗವನ್ನು ಖಾಸಗಿಯವರು ಅತಿಕ್ರಮಿಸಿ ವಾಸದ ಮನೆ ನಿರ್ಮಿಸಿಕೊಂಡಿದ್ದು ಸ.ನಂ.158/2 ರಲ್ಲಿ ಪುರಸಭೆಗೆ ಸಂಬಂಧಿಸಿದ ವಸತಿಗೃಹಕ್ಕಾಗಿ ಸ್ಮಶಾನ ಭೂಮಿ ಅತಿಕ್ರಮಣ ವಾಗಿರುವುದು ದೃಡಪಟ್ಟಿದೆ.

ಅಲ್ಲದೆ ದಕ್ಷಿಣ ದಿಕ್ಕಿನಲ್ಲಿ ಸರಕಾರಿ ಕಟ್ಟಡವೊಂದು ನಿರ್ಮಾಣವಾಗಿದೆ. ಫೆಬ್ರುವರಿ 2021ರಲ್ಲಿ ತಹಶೀಲ್ದಾರರು ಸ್ಮಶಾನ ಭೂಮಿ ಅತಿಕ್ರಮಣ ಖುಲ್ಲಾ ಪಡಿಸಿ ಸ್ಮಶಾನ ಜಮೀನಿನ ಸುತ್ತಲೂ ಕಂಪೌಂಡ ಗೋಡೆ ನಿರ್ಮಿಸಿ ಮೂಲಭೂತ ಸೌಕರ್ಯವನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲು ಪುರಸಭೆಗೆ ಲಿಖಿತ ಆದೇಶ ನೀಡಿದ್ದಾರೆ

ಆದರೆ ಪುರಸಭೆ ಮಾತ್ರ ಅತಿಕ್ರಮಣ ಖುಲ್ಲಾ ಪಡಿಸಲು ಆಸಕ್ತಿ ತೋರಿದಂತೆ ಕಂಡುಬಂದಿಲ್ಲ ಏಪ್ರಿಲ್ 20ರಂದು ಹೋರಾಟ ಸಮಿತಿಯವರು ಮತ್ತೆ ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಶೀಲಿಸಿ ಅತಿಕ್ರಮಣ ಖುಲ್ಲಾಪಡಿಸಿ ವರದಿ ಮಾಡಿಕೊಳ್ಳುವಂತೆ ತಹಶೀಲ್ದಾರರಿಗೆ ತಿಳಿಸಿದ್ದಾರೆ ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿದ್ದು ಕಂಡುಬಂದಿಲ್ಲ.

ವಿಸ್ಮಯ ನ್ಯೂಸ್ ವಿಲಾಸ ನಾಯಕ್ ಅಂಕೋಲಾ

Back to top button