ಅಧ್ಯಕ್ಷೆ ನಾಡಕರ್ಣಿ ಅವರಿಂದ ಇಬ್ಬರು ಸದಸ್ಯರ ಮೇಲೆ ದೂರು: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಂಕೋಲಾ ಪುರಸಭೆ ಪ್ರಕರಣ

ಅಂಕೋಲಾ: ಇತ್ತೀಚೆಗೆ ನಡೆದ ಪುರಸಭೆಯ ವಿಶೇಷ ಸಭೆಯ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿರುವ ಹಾಗೂ ವಿಶೇಷ ಸಭೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವುದಾಗಿ , ಇನ್ನಿತರ ಕೆಲ ವಿಷಯಗಳನ್ನು ದೂರಿನಲ್ಲಿ ತಿಳಿಸುವ ಮೂಲಕ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಸದಸ್ಯ ಮಂಜುನಾಥ ಎಸ್ ನಾಯ್ಕ ಮೇಲೆ ಗಂಭೀರ ಆರೋಪ ಮಾಡಿದ್ದಲ್ಲದೇ ಅದೇ ದೂರಿನಲ್ಲಿ ಪುರಾಸಭೆಯ ಇನ್ನೋರ್ವ ಸದಸ್ಯ ಕಾರ್ತಿಕ ಎಸ್ ನಾಯ್ಕ ವಿರುದ್ಧವೂ ಕೆಲ ಆಪಾದನೆಗಳನ್ನು ಮಾಡಿದ್ದು, ಈ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 2 ರಂದು ನಡೆದ ವಿಶೇಷ ಸಭೆಯಲ್ಲಿ ಆರೋಪಿತರು ಪುರಸಭೆಯ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿಗಳ ಅನುಮತಿ ಇಲ್ಲದೇ ವಿಡಿಯೋ ಚಿತ್ರೀಕರಣ ನಡೆಸಿ ಸದ್ರಿ ಸಭೆಗೆ ಸಂಬಂಧಿಸದ ಕಡತ ನೀಡುವಂತೆ ಒತ್ತಾಯ ಮಾಡಿದ್ದು ಅದನ್ನು ಕಚೇರಿಯಲ್ಲಿ ಪಡೆಯುವಂತೆ ಸೂಚಿಸಿದಾಗ ಸಿಟ್ಟಾದ ಮಂಜುನಾಥ ನಾಯ್ಕ ಅವರು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಅವರೊಂದಿಗೆ ಜಗಳಕ್ಕಿಳಿದು ಅಸಭ್ಯವಾಗಿ ವರ್ತನೆ ಮಾಡಿದ್ದು ಜಯಾ ನಾಯ್ಕ ಅವರು ವಿಡಿಯೋ ಚಿತ್ರೀಕರಣ ಮಾಡದಂತೆ ವಿನಂತಿ ಮಾಡಿಕೊಂಡರೂ ಸಹ ಕೇಳದೆ ಸಭೆಗೆ ಅಡ್ಡಿ ಪಡಿಸಿದ್ದು, ಅಡ್ಡಿ ಆತಂಕಗಳ ನಡುವೆ ಸಭೆಯನ್ನು ಬಹುಮತದಿಂದ ಮುಗಿಸಲಾಗಿದ್ದರೂ ಸಭೆಯನ್ನು ಅರ್ಧದಲ್ಲೇ ಮುಗಿಸಿ ಹೊರಗಡೆ ಹೋಗುತ್ತಿದ್ದಾರೆ ಎಂದು ವಿಡಿಯೋ ಚಿತ್ರೀಕರಣ ನಡೆಸಿ ದಿಕ್ಕಾರ ಕೂಗಿದ್ದು, ಪದೇ ಪದೇ ಭೃಷ್ಠಾಚಾರದ ಸುಳ್ಳು ಅಪವಾದ ಮಾಡಿದ್ದಾರೆ ಎಂದು ಅಧ್ಯಕ್ಷೆ ಶಾಂತಲಾ ನಾಡಕರ್ಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾವು ಸಭೆ ಮುಗಿಸಿ ತಮ್ಮ ಪತಿಯೊಂದಿಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಂಜುನಾಥ ನಾಯ್ಕ ಅವರು ವಿಡಿಯೋ ಚಿತ್ರೀಕರಣ ನಡೆಸಿ ಹೊರಗೆ ಹೋಗಲು ಅಡ್ಡಿ ಪಡಿಸಿ, ತಮ್ಮ ಗಂಡನಿಗೆ ಮಹಿಳೆಯರನ್ನು ಮುಂದಿಟ್ಟು ದಂಧೆ ಮಾಡುತ್ತೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ವಿಶೇಷ ಸಭೆಯ ಕಲಾಪಗಳ ವಿಡಿಯೋಗಳನ್ನು ವಾಟ್ಸಪ್ ಗ್ರೂಪ್ ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕ ಹರಿಬಿಟ್ಟು ಮಾನಹಾನಿ ಆಗುವಂತೆ ನಡೆದುಕೊಂಡಿದ್ದಾರೆ ಎಂಬಿತ್ಯಾದಿ ವಿಷಯಗಳನ್ನೊಳಗೊಂಡು, ಪುರಸಭೆ ಸದಸ್ಯ ಮಂಜುನಾಥ ನಾಯ್ಕ ಅವರ ಮೇಲೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ದೂರು ದಾಖಲಿಸಿದ್ದು ಪಿ.ಎಸ್. ಐ ಪ್ರವಿಣಕುಮಾರ್ ಅವರು ಐ.ಪಿ.ಸಿ ಕಲಂ ಸಂಖ್ಯೆ 341, 354, 354(ಎ), 504, 341, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಡಳಿತ ಪಕ್ಷ ಹಾಗೂ ವಿಪಕ್ಷದ ನಡೆ-ನುಡಿಗಳು ಮುಂದಿನ ಯಾವೆಲ್ಲ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳಿಗೆ ಕಾರಣವಾಗಲಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅಲ್ಲಲ್ಲಿ ಕೇಳಿ ಬಂದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version