Follow Us On

WhatsApp Group
Important
Trending

ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ ಗೆ ವಿವಾಹಿತೆಯ ಕರೆತಂದು ಚಿನ್ನಾಭರಣ ದೋಚಿ ಮೋಸ: ಮಹಿಳೆಯ ಚಿನ್ನಾಭರಣ, ಬ್ಯಾಗ್ ದೋಚಿ ಪರಾರಿ

ಗೋಕರ್ಣ : ಮದುವೆಯಾಗುತ್ತೇನೆಂದು ನಂಬಿಸಿ,ಮಹಿಳೆಯನ್ನು ಗೋಕರ್ಣಕ್ಕೆ ಕರೆತಂದ ವ್ಯಕ್ತಿಯೋರ್ವ,ಲಾಡ್ಜ್ನಲ್ಲಿ ತಂಗಿದ್ದ ವೇಳೆ, ಮಹಿಳೆಯ ಅರಿವಿಗೆ ಬಾರದಂತೆ ರಾತ್ರಿ ವೇಳೆ ಅವಳ ಬಳಿ ಇದ್ದ ಚಿನ್ನಾಭರಣ, ಮೊಬೈಲ್, ಹಾಗೂ ನಗದು ಎಗರಿಸಿ ಪರಾರಿಯಾಗಿರುವ  ಘಟನೆ ನಡೆದಿದೆ .

ಚಿಕ್ಕೊಡಿಯ ಕರೋಶಿ ಗ್ರಾಮದ ಮಾಲವ್ವ ಗುರಪ್ಪ ನಡುವಿನಕೇರಿ (36) ಎಂಬ ಮಹಿಳೆಯೇ, ವಂಚನೆಗೊಳಗಾದ ಮಹಿಳೆಯಾಗಿದ್ದು, ಅವಳನ್ನು ಪುಸಲಾಯಿಸಿ, ಗೋಕರ್ಣಕ್ಕೆ ಕರೆತಂದಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು ಸುಮಾರು 1 ಲಕ್ಷ 52 ಸಾವಿರ ರೂಪಾಯಿ ಮೌಲ್ಯದ 38 ಗ್ರಾಂ ಬಂಗಾರ, 12 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಹಾಗೂ 15 ಸಾವಿರ ನಗುದು ಕದ್ದು ರೂಮಿಗೆ ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿರುವ ಶಂಕೆ ಇದೆ.     

ಕಳೆದ 4 ತಿಂಗಳ ಹಿಂದೆ ಮಾಲವ್ವ ಎಂಬ ಮಹಿಳೆಗೆ ಪರಿಚಯವಾದ  ಮೀರಜ್ ಅಥವಾ ಪುಣೆಯ ಮೂಲದವ ಎನ್ನಲಾದ ಸುರೇಶ, ಪ್ರೀತಿ ಪ್ರೇಮದ ಹೆಸರಲ್ಲಿ ಮಹಿಳೆಯನ್ನು ಮೋಸದ ಬಲೆಗೆ ಕೆಡವಿದ್ದ ಎನ್ನಲಾಗಿದ್ದು, ಆರೋಪಿಯ ಅಸಲಿ  ಹೆಸರು ಮತ್ತು ವಿಳಾಸವೂ ಬದಲಿರ ಬಹುದಾದ ಸಾಧ್ಯತೆ ಕೇಳಿಬಂದಿದೆ.   

ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ತನ್ನನ್ನು ಗೋಕರ್ಣಕ್ಕೆ ಕರೆತಂದ ಆರೋಪಿಯ ಮಾತಿಗೆ ಮರುಳಾಗಿ ಅವನ ಪೂರ್ವಾಪರ ವಿಚಾರ ಮಾಡದೇ ಮಾಲವ್ವ ರಾತ್ರಿ ಗೋಕರ್ಣಕ್ಕೆ ಬಂದು  ರಥ ಬೀದಿಯಲ್ಲಿರುವ ಖಾಸಗಿ ವಸತಿ ಗೃಹವೊಂದರಲ್ಲಿ ಆರೋಪಿ ಜೊತೆ ಉಳಿದುಕೊಂಡಿದ್ದು ನವ ಜೀವನದ ಕನಸು ಕಾಣುತ್ತಿರುವ  ವೇಳೆ, ಅವಳ ಕನಸೆಲ್ಲವೂ ಹುಚ್ಚು ಪ್ರೇಮದ ಹೊಳೆಯಲ್ಲಿ ಕೊಚ್ಚಿ ಹೋಗಿ ನುಚ್ಚು ನೂರಾದಂತಿದೆ.  

ಆರೋಪಿತನು, ತನ್ನ ಜೊತೆ ಇದ್ದ ಮಹಿಳೆಗೆ  ಅಮಲು ಪದಾರ್ಥ ಬೆರೆಸಿದ ತಂಪು ಪಾನೀಯ ಕುಡಿಸಿ, ಮಂಪರು  ಬರುವಂತೆ ಮಾಡಿ, ಆ ವೇಳೆ  ಮಹಿಳೆಯ ಬಳಿ ಇದ್ದ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಎಗರಿಸಿ, ಲಾಡ್ಜ್ ನಿಂದ ಹೊರ ಬರುವ ವೇಳೆ ಮಹಿಳೆ ಇರುವ ರೂಂ ನ ಬಾಗಿಲಿಗೆ ಹೊರಬದಿಯಿಂದ  ಚಿಲಕ ಹಾಕಿ, ಮೋಸ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ನೊಂದ  ಮಹಿಳೆಯ ದೂರಿನ ಮೇರೆಗೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿಯ ಸರಿಯಾದ ವಿಳಾಸ ತಿಳಿದು ಕೊಳ್ಳದ ಮಹಿಳೆ, ಆತನ ಮೊಬೈಲ್ ನಂಬರ್ ಸಹ ನೆನಪಿಟ್ಟುಕೊಳ್ಳದೇ ಪರಿತಪಿಸುವಂತಾಗಿದೆ.ಚಿನ್ನಾಭರಣ, ನಗದು ಜೊತೆ ಮಹಿಳೆಯ ಮೊಬೈಲನ್ನು ತೆಗೆದುಕೊಂಡು ಹೋಗುವ ಮೂಲಕ ತನ್ನ ಸುಳಿವು ಲಭ್ಯವಾಗದಂತೆ ಆರೋಪಿ ಚಾಲಾಕಿತನ ತೋರಿದಂತಿದೆ. ಈತನು  ವಸತಿ ಗೃಹದಲ್ಲಿಯೂ ಸುಳ್ಳು ವಿಳಾಸ ನೀಡಿದ್ದಾನೆ ಎನ್ನಲಾಗಿದೆ.ಪಿ.ಎಸ್.ಐ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆ ಕಾರ್ಯಾಚರಣೆಗೆ  ಮುಂದಾಗಿದ್ದಾರೆ.     

ಕ್ಷಿಣದ ಕಾಶಿ ಎಂದೆನಿಸಿಕೊಂಡ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಧಾರ್ಮಿಕ ಹಾಗೂ ಪ್ರವಾಸಿ ಕಾರಣಗಳಿಂದ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ದಿನ ನಿತ್ಯ ಬಂದು ಹೋಗುತ್ತಲೇ ಇರುತ್ತಾರೆ.ಆದರೆ ಈ ವೇಳೆ ಇಲ್ಲಿಯ ಕೆಲವು ವಸತಿಗೃಹಗಳು,ಪ್ರವಾಸಿಗರಿಗೆ ರೂಂ ಬಾಡಿಗೆ ನೀಡುವ ಮುನ್ನ ,ಪ್ರವಾಸಿಗರ ಗುರುತಿನ ಪತ್ರವನ್ನು ಸರಿಯಾಗಿ ತಪಾಸಣೆ ಮಾಡಿರುವುದು, ಅಥವಾ ತೆಗೆದುಕೊಳ್ಳದಿರುವುದು,ಬುಕಿಂಗ್ ಕೌಂಟರ್ ಹಾಗೂ ಇತರೆ ಕೆಲವೆಡೆ ಸುರಕ್ಷತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸದಿರುವುದು ಮುಂತಾದ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ಎನ್ನಲಾಗಿದೆ

ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಅನಿವಾರ್ಯ  ಎಂದು ಸಿಪಿಐ ವಸಂತ ಆಚಾರ್ಯ , ಪಿಎಸೈ ನವೀನ್ ನಾಯ್ಕ, ಸಂಬಂಧಿಸಿದ ವಸತಿಗೃಹಗಳ ಮಾಲಕ ಹಾಗೂ ಸಿಬ್ಬಂದಿಗಳ ಸಭೆ ಕರೆದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನು ಮುಂದಾದರೂ  ವಿವಿಧ ಇಲಾಖೆಗಳು ಹಾಗೂ ಸಂಬಂಸಿದವರೆಲ್ಲರೂ ಎಚ್ಚೆತ್ತು  ಸುರಕ್ಷಿತ ಮುಂಜಾಗ್ರತಾ ಕ್ರಮಗಳ ಕುರಿತು ಗಮನ ಹರಿಸುವಂತಾಗಬೇಕೆನ್ನುವುದು  ಪ್ರಜ್ಞಾವಂತರ ಅನಿಸಿಕೆ ಆಗಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯ್ಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button