ಪದ್ಮಶ್ರೀ ಪುರಸ್ಕೃತೆ ಹೊನ್ನಳ್ಳಿಯ ತುಳಸಿ ಗೌಡ ಅವರಿಗೆ ಉತ್ತರಕನ್ನಡ ಜಿಲ್ಲಾಡಳಿತದ ಪರವಾಗಿ, ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ಮತ್ತಿತರ ಅಧಿಕಾರಿಗಳು ಗೌರವ ಸನ್ಮಾನ ನೀಡಿದರು. ಸುಮಾರು ಆರು ದಶಕಗಳ ಕಾಲ ಗಿಡಮರಗಳನ್ನು ಬೆಳೆಸುತ್ತಾ, ವೃಕ್ಷ ಮಾತೆಯೆಂದೇ ಪ್ರಸಿದ್ಧಿಯಾಗಿ,ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪುರಸ್ಕಾರವನ್ನು ಪಡೆದಿರುವ, ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೋವಿಂದ ಗೌಡ ತನ್ನ ಹಸಿರು ಪ್ರೇಮದ ಮೂಲಕ ಎಲ್ಲೆಡೆಯೂ ಮನೆಮಾತಾಗಿದ್ದಾರೆ.ಜಿಲ್ಲಾಡಳಿತದ ವತಿಯಿಂದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರನ್ನು ಸೋಮವಾರ ,ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಂಕೋಲಾ ತಹಶೀಲ್ದಾರ ಉದಯ್ ಕುಂಬಾರ್,ಜಿಲ್ಲಾಧಿಕಾರಿಗಳ ಆದೇಶದಂತೆ ಹೊನ್ನಳ್ಳಿ ತುಳಸಿ ಗೌಡ ಅವರ ಮನೆಗೆ ಹೋಗಿ,ಜಿಲ್ಲಾಡಳಿತದ ಪರವಾಗಿ ಕರೆತಂದರು. ಈ ವೇಳೆ ಅಗಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ನಾಯ್ಕ,ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.,
ತುಳಸಿ ಗೌಡರ ಜೊತೆ ಅವರ ಮೊಮ್ಮಗ ಶೇಖರ ಗೌಡರನ್ನು ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದಾಗ ,ಅಪರ ಜಿಲ್ಲಾಧಿಕಾರಿ ಹೆಚ್ ಕೃಷ್ಣಮೂರ್ತಿ,ಪ್ರವೇಶದ್ವಾರದ ಬಳಿ ನಿಂತು ತುಳಸಿ ಗೌಡ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ತುಳಸಿಗೌಡ ,ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ಮತ್ತಿತರ ಅಧಿಕಾರಿಗಳ ಜೊತೆ ಆತ್ಮೀಯತೆಯಿಂದ ಮಾತನಾಡಿ,ತನ್ನ ವೃತ್ತಿ ಜೀವನದಿಂದ ಹಿಡಿದು ಇಂದಿನ ವರೆಗೆ ಅರಣ್ಯ ಇಲಾಖೆ ಸೇರಿದಂತೆ,ವಿವಿಧ ಇಲಾಖೆಗಳ ಸಹಾಯ-ಸಹಕಾರ,ಮತ್ತು ತನಗೆ ದೊರೆತ ಗೌರವ ಪ್ರಶಸ್ತಿಗಳನ್ನು ಸ್ಮರಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ತುಳಸಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎಚ್ ಕೃಷ್ಣಮೂರ್ತಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ಎಂಪಿ ಮಾತನಾಡಿ,ಯಾವುದೇ ಪ್ರಶಸ್ತಿ-ಪುರಸ್ಕಾರಗಳಿಗೆ ಆಸೆ ಪಡದೇ,ಹಲವು ದಶಕಗಳ ಕಾಲ ನಿಸ್ವಾರ್ಥ ಸೇವೆಸಲ್ಲಿಸಿ,ಹಸಿರು ಪರಿಸರ ಉಳಿಸಿ ಬೆಳೆಸಲು ಅವಿರತ ಶ್ರಮಿಸಿದ ತುಳಸಿ ಗೌಡ ,ಎಲ್ಲರಿಗೂ ಮಾದರಿಯಾಗಿದ್ದು , ಅವರ ಸಾಧನೆಯ ಬದುಕು ವೈಯಕ್ತಿಕವಾಗಿ ಹಾಗೂ ಜಿಲ್ಲೆಗೆ ಪದ್ಮಶ್ರೀ ಪುರಸ್ಕಾರದ ಮೂಲಕ ಹೆಮ್ಮೆ ತಂದಿದೆ ಎಂದರು.
ಜಿಲ್ಲಾಡಳಿತದ ಸಮ್ಮಾನ ಸ್ವೀಕರಿಸಿ ಮಾತನಾಡಿದ ತುಳಸಿ ಗೌಡ,ಕಾಡೆಂದರೆ ನನಗೆ ಎಂದೆಂದಿಗೂ ಪ್ರೀತಿ .ವಿವಿಧ ಜಾತಿಯ ಬೀಜಗಳನ್ನು ಸಂಗ್ರಹಿಸಿ ,ಅವುಗಳನ್ನು ಮೊಳಕೆ ಬರಿಸಿ ,ಸಸಿಗಳನ್ನಾಗಿ ಮಾಡುವುದು ಸೇರಿದಂತೆ, ಇತರೆ ರೀತಿಯಲ್ಲಿಯೂ ಗಿಡಗಳನ್ನು ನೆಟ್ಟು – ಬೆಳೆಸುವುದು ನನ್ನ ಕಾಯಕ. ಜಿಲ್ಲಾಡಳಿತ ಹಾಗೂ ಇತರೆಡೆ ನೀಡಿದ ಸನ್ಮಾನ ಖುಷಿ ತಂದಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ ನಾಯಕ ಕಾರ್ಯಕ್ರಮ ನಿರೂಪಿಸಿದರು.
ಉಪವಿಭಾಗಾಧಿಕಾರಿಗಳಿದ ವಿದ್ಯಾಶ್ರೀ ಚಂದರಗಿ, ಮಮತಾದೇವಿ ಜಿ.ಎಸ್, ಆಡಳಿತ ವಿಭಾಗದ ಉಪಕಾರ್ಯದರ್ಶಿ ನಾಗೇಶ ರಾಯ್ಕರ್, ಅಂಕೋಲಾ ತಹಶೀಲ್ದಾರ ಉದಯ ಕುಂಬಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮದ ನಂತರ ಉಪವಿಭಾಗಾಧಿಕಾರಿಗಳಾದ ವಿದ್ಯಾಶ್ರೀ ಮತ್ತು ಮಮತಾದೇವಿ ಜೊತೆ ಆತ್ಮೀಯವಾಗಿ ಕೆಲಹೊತ್ತು ಕಳೆದ ತುಳಸಿ ಗೌಡ,ಅಧಿಕಾರಿಗಳ ಕೋರಿಕೆ ಮೇರೆಗೆ ತುಳಸಿ ಹಬ್ಬದ ಶುಭ ಸಂದರ್ಭದಲ್ಲಿ ತುಳಸಿಯ ಕುರಿತು ಹಾಡುವ ಮೂಲಕ ಗಮನಸೆಳೆದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ