Focus News
Trending

ಹಳ್ಳಿಯಿಂದ ಮಾರಾಟಕ್ಕೆ ಬಂದವರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಆರೋಪ ?. ಕಳ್ಳ ಬೆಕ್ಕಿಗೆ ಗಂಟೆ ಕಟ್ಟುವವರಾರು? ಪ್ರತಿಭಟನೆಯ ಎಚ್ಚರಿಕೆ

ಅಂಕೋಲಾ: ಪುರಸಭೆ ವ್ಯಾಪ್ತಿಯಲ್ಲಿ  ಹಣ್ಣು – ಹೂವು – ತರಕಾರಿ ಸೇರಿದಂತೆ ಇತರೆ ಬೀದಿ ಬದಿ ವ್ಯಾಪಾರ ಹಾಗೂ ಸಂತೆ ಮಾರುಕಟ್ಟೆ  ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಟೆಂಡರ್ ಪಡೆದಿರುವ ಗುತ್ತಿಗೆದಾರನ ಕಡೆಯವರು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ  ಎನ್ನುವ ಆರೋಪ ಅಲ್ಲಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎಂಬಂತೆ ಕೆಲ ರಸೀದಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುಬಾರಿ ಶುಲ್ಕ ವಸೂಲಾತಿ  ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವಂತಿದೆ.     

ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಮಾರುಕಟ್ಟೆ ಶುಲ್ಕದ ವಸೂಲಿ ಹೆಸರಲ್ಲಿ  ಸುಲಿಗೆ ನಡೆಸಲಾಗುತ್ತಿದೆಯೇ ? ಹಾಗೊಮ್ಮೆ ಹೌದು ಎಂದಾದರೆ ಕ್ರಮ ಕೈಗೊಳ್ಳುವರಾರು ಎನ್ನುವುದು ನೊಂದ ಕೆಲ ಬಡ  ರೈತ ಮಹಿಳೆಯರು, ಇತರೆ ಮಾರಾಟಗಾರರ  ಪ್ರಶ್ನೆಯಾಗಿದೆ ?.  ಶುಲ್ಕ ವಸೂಲಾತಿ ವೇಳೆ ತರಕಾರಿ ಬುಟ್ಟಿ ಒಂದಕ್ಕೆ ಇಷ್ಟುದರ ? ಬಾಕಿ ಯಾವುದಕ್ಕೆಲ್ಲಾ ಎಷ್ಟೆಷ್ಟು ದರ ಎಂಬ  ಸ್ಪಷ್ಟತೆ ಇದೆ ಎನ್ನಲಾಗಿದ್ದು,ಇವುಗಳೆಲ್ಲವನ್ನೂ ಗಾಳಿಗೆ ತೂರಿ ಗುತ್ತಿಗೆದಾರನ ಕಡೆಯವರು ಮನಸೋ ಇಚ್ಛೆ ಹಣ ವಸೂಲಿ ದಂಧೆಗೆ ಇಳಿದಿದ್ದಾರೆ ಎನ್ನಲಾಗಿದೆ.

ಗ್ರಾಮೀಣ ಪ್ರದೇಶ ಸೇರಿದಂತೆ ಇತರೆಡೆಯಿಂದ ಪ್ರತಿನಿತ್ಯ ತರಕಾರಿ, ಸೊಪ್ಪು, ಗಡ್ಡೆ -ಗೆಣಸು, ಹೂವು – ಹಣ್ಣುಗಳನ್ನು ಬುಟ್ಟಿ – ಇಲ್ಲವೇ ಚೀಲಗಳಲ್ಲಿ ತುಂಬಿ,ತಲೆಯ ಮೇಲೆ ಹೊತ್ತು ತಂದು ಬಿಸಿಲು-ಮಳೆ-ಚಳಿಯನ್ನು ಲೆಕ್ಕಿಸದೇ ಪಟ್ಟಣದಲ್ಲಿ ಕುಳಿತು ಮಾರಾಟ ಮಾಡಿ ಜೀವನೋಪಾಯ ನಡೆಸಬೇಕಾದ ಅದೇಷ್ಟೋ ಮಹಿಳೆಯರು, ರೈತರು, ವೃದ್ಧರು,ಹೆಚ್ಚಿನ ಶುಲ್ಕ ವಸೂಲಿಯಿಂದ ಹೈರಾಣಾಗುವಂತಾಗಿದ್ದು ಅವರ ಪರವಾಗಿ ಧ್ವನಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಉಮೇಶ ನಾಯ್ಕ,ಪುರಸಭೆಯವರು ತಮ್ಮ ಜವಾಬ್ದಾರಿಯನ್ನು ಅರಿತು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ,ಸಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ಶುಲ್ಕ ವಸೂಲಾತಿಯ ದರ ಪಟ್ಟಿಗಳನ್ನು ಎಲ್ಲರಿಗೂ ಕಾಣುವಂತೆ ಸ್ಪಷ್ಟವಾಗಿ ಬರೆದು ಗಳಲ್ಲಿ ಬರೆದ ಬೋರ್ಡುಗಳನ್ನು ಅಳವಡಿಸಬೇಕು.

ಮುಂದಿನ ಒಂದು ವಾರದೊಳಗೆ ಕ್ರಮಕೈಗೊಳ್ಳದಿದ್ದರೆ ಬೀದಿ ವ್ಯಾಪಾರಸ್ಥರೊಂದಿಗೆ ಪುರಸಭೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.     ಕೋವಿಡ್ ಲಾಕ್ಡೌನ್ ಮತ್ತಿತರ ಕಾರಣಗಳಿಂದ  ತನಗಾದ ನಷ್ಟ ಬರಿಸಿ ಕೊಡುವಂತೆ ಇಲ್ಲವೇ ಗುತ್ತಿಗೆ ಅವಧಿಯನ್ನು ಮುಂದುವರಿಸುವಂತೆ ಈ ಹಿಂದಿನ ಗುತ್ತಿಗೆದಾರ ಸಂಬಂಸಿದ  ಇಲಾಖೆಯ ಬಳಿ ಕೋರಿ ಕೊಳ್ಳುತ್ತ, ಹೊಸ ಟೆಂಡರ್ ನೀಡುವಿಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ . ತದನಂತರ ಹೊಸ ಟೆಂಡರ್ ಗೆ ಹಸಿರು ನಿಶಾನೆ ದೊರೆಯಿತು ಎನ್ನಲಾಗಿದ್ದು ತರಕಾರಿ ಮಾರುಕಟ್ಟೆ ಶುಲ್ಕ ವಸೂಲಿ ಪರರ ಪಾಲಾಗಿತ್ತು.

ಹೊಸದಾಗಿ ಗುತ್ತಿಗೆ ಪಡೆದದವನ ಕಡೆಯವರು ಚಿಕ್ಕಪುಟ್ಟ ವ್ಯಾಪಾರಸ್ಥರಿಂದಲೂ 100 ರಿಂದ 150 ರೂ ವಸೂಲಿಗಿಳಿದರೆ ಹೇಗೆ ಎನ್ನುವ ರೀತಿಯಲ್ಲಿ ಈ ವಿಷಯವನ್ನು ಇತ್ತೀಚೆಗೆ ಕಣಕಣೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕಿ ರೂಪಾಲಿ ನಾಯ್ಕ ಅವರ ಗಮನಕ್ಕೂ ತಂದಿದ್ದರು. ಸ್ಥಳದಲ್ಲೇ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿಗಳು, ಅಧ್ಯಕ್ಷರು ಈ ಕುರಿತು ಪರಾಮರ್ಶಿಸುವುದಾಗಿ ತಿಳಿಸಿದ್ದರು. ಹಬ್ಬ-ಹರಿದಿನಗಳು,ಸಂತೆ ಮತ್ತಿತರ ವಿಶೇಷ ದಿನಗಳಂದು ಹೊರ ತಾಲೂಕು ಹಾಗೂ ಜಿಲ್ಲೆಯ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಮಾರುಕಟ್ಟೆ  ವ್ಯಾಪಾರ ವಹಿವಾಟುಗಳು ಹೆಚ್ಚಿರುತ್ತವೆ.

ಈ ವೇಳೆ ಗೂಡ್ಸ ರಿಕ್ಷಾ ಮತ್ತಿತರ ವಾಹನಗಳ ಮೂಲಕ  ಹಣ್ಣು – ಹೂವು -ತರಕಾರಿಗಳಂತ ಹತ್ತಾರು  ಬಗೆಯ ಜೀವನಾವಶ್ಯಕ ವಸ್ತುಗಳ ಮಾರಾಟ ನಡೆಸಲಾಗುತ್ತದೆ. ಈ ವೇಳೆ ಶುಲ್ಕ ವಸೂಲಾತಿ ಹೆಸರಲ್ಲಿ ಒಮ್ಮೊಮ್ಮೆ  ಗೊಂದಲ ಸೃಷ್ಟಿಸಿ ವಾಹನ ಬಂದೊಡನೆ ಅದರೊಳಗಿರುವ ಒಟ್ಟಾರೆ ಸಾಮಗ್ರಿಗಳ – ತರಕಾರಿ ಹಲ್ಲು ಹಂಪಲುಗಳ ಪ್ರಮಾಣ ಆಧರಿಸಿ ಒಮ್ಮೆ ಶುಲ್ಕ, ಚಿಲ್ಲರೆ ಮಾರಾಟಕ್ಕೆ ಮತ್ತೆ ಪ್ರತ್ಯೇಕ ಶುಲ್ಕ ವಿಧಿಸುವ ಆರೋಪವೂ ಒಮ್ಮೊಮ್ಮೆ ಕೇಳಿ ಬರುತ್ತದೆ.

ಬಹುತೇಕ ವ್ಯಾಪಾರಸ್ಥರಿಗೆ ವಸೂಲಿ ಮಾಡಿದ   ಹಣಕ್ಕೆ ಸರಿಯಾಗಿ ಅದೇ ಮೊತ್ತದ  ಶುಲ್ಕ ವಸೂಲಿಯ ರಸೀದಿ ನೀಡಿದರೆ,ಇನ್ನು ಕೆಲವೆಡೆ ಕೆಲ ಮುಗ್ದ ಜನತೆಯಿಂದ ಹೆಚ್ಚಿನ ಹಣ ವಸೂಲಿ ಮಾಡಿ, ಕಡಿಮೆ ದರದ ಶುಲ್ಕ ವಸೂಲಾತಿ ರಸೀದಿ ನೀಡಿ , ವ್ಯತ್ಯಾಸದ ಹಣವನ್ನು ತಮ್ಮ ಜೇಬಿಗೆ ಇಳಿಸಿ ಕೊಳ್ಳುತ್ತಿರುವ ಸಂಶಯದ ಮಾತುಗಳು ಕೇಳಿ ಬರಲಾರಂಭಿಸಿವೆ.

ಈ ಕುರಿತು ಪ್ರಶ್ನಿಸಿದರೆ ಅಥವಾ ಇತರರಿಗೆ ಈ ವಿಷಯ ತಿಳಿಸಿ,ವಸೂಲಾತಿ ಮೆಂಬರನಿಗೆ  ತಿಳಿದು ತಮ್ಮ ಮೇಲೆ ಸಿಟ್ಟಾಗಿ ನಾಳೆ ತಮಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮತ್ತಷ್ಟು ಸಮಸ್ಯೆ ಆಗಬಹುದೆಂಬ ಅಂಜಿಕೆಯಿಂದ ಕೆಲ ಮುಗ್ಧರು,ತಮ್ಮ ಅಸಹಾಯಕತೆಯನ್ನು ಹೊರಗಡೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಶುಲ್ಕ ವಸೂಲಿ ರಸೀದಿ ತೋರಿಸುವುದು, ಪೆಟ್ರೋಲ – ಡಿಸೆಲ್ ತುಟ್ಟಿಯಾಗಿದೆ ಎಂಬ ನೆಪವಾಗಿರಿಸಿಕೊಂಡು ಕೆಲ ವ್ಯಾಪಾರಸ್ಥರು ಸಹ ತಾವು ತಂದ.ಹಣ್ಣು-ತರಕಾರಿಗಳ ದರವನ್ನು ಏರಿಸಿ ,ಗ್ರಾಹಕರ ತಲೆಯ ಮೇಲೆ ದರದ ಹೊರೆ ವರ್ಗಾಯಿಸಿ ಸಿಕ್ಕಲ್ಲೇ ಸೀರುಂಡೆ  ಎನ್ನುವ ವ್ಯವಹಾರಿಕ ಬುದ್ಧಿ ಉಪಯೋಗಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಳ್ಳ ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವುದು ಕೆಲ ಸಾರ್ವಜನಿಕರ, ಹಳ್ಳಿಯ  ನೊಂದ ಬಡ ಮಾರಾಟಗಾರರ ಪ್ರಶ್ನೆಯಾಗಿದೆ ?ಸಂಬಂಧಿತ ಆಡಳಿತ ವ್ಯವಸ್ಥೆ ಈ ಕುರಿತು ಸೂಕ್ತ ಕ್ರಮ ಜರುಗಿಸುವುದೇ ಎಂದು ಕಾದು ನೋಡಬೇಕಿದೆ.               

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button