ಶಾಲಾ ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಗಾರ: ಕಾನೂನಿನ ಕುರಿತು ಅರಿವು

ಕುಮಟಾ: ಉತ್ತರಕನ್ನಡ ಜಿಲ್ಲಾ ಪೊಲೀಸ್ ಹಾಗೂ ಸಾವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಕಾರವಾರ ಇವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಇಂದು ಕುಮಟಾ ಪಟ್ಟಣದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಕಾರವಾರ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಿಯಾಂಗ ಎಮ್ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಉತ್ತಮ ಶಿಕ್ಷಣ ವ್ಯವಸ್ಥೆ, ಸಾಕ್ಷರತೆ ಹೆಚ್ಚಾಗುತ್ತಿರುವ ಜೋತೆಗೆ ಶಾಲೆಗಳಲ್ಲಿ ಹಾಗೂ ಶಾಲೆಯ ಹೊರಭಾಗದಲ್ಲಿ ಮಕ್ಕಳ ಮೇಲಿನ ದೌರ್ಜನ್ಯವು ಅತಿಯಾಗುತ್ತಿರುವುದು ಬೇಸರದ ಸಂಘತಿಯಾಗಿದೆ. ಇದನ್ನು ತಡೆದಗಟ್ಟಬೆಕೆಂಬ ಸದುದ್ಧೇಶದಿಂದ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಒಂದು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಶಾಲೆ ಹಾಗೂ ಶಾಲೆಯ ಹೊರಭಾಗದಲ್ಲಿ ಮಕ್ಕಳನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೋರ್ವರ ಜವಾಬ್ಧಾರಿಯಾಗಿದ್ದು, ಒಂದು ವೇಳೆ ದೌರ್ಜನ್ಯ ನಡೆದ ಬಳಿಕ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಾಗುತ್ತದೆ ಎಂಬ ಕುರಿತಾಗಿಯೂ ಸಹ ಈ ಕಾರ್ಯಾಗಾರದಲ್ಲಿ ಸಲಹೆ ಸೂಚನೆ ನೀಡಿಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀಧರ ಎಸ್.ಆರ್ ಅವರು ಮಾತನಾಡಿ, ಶಾಲಾ ಮಕ್ಕಳ ಸಾರಿಗೆ ಸುರಕ್ಷತೆ, ಮಕ್ಕಳ ಮೇಲೆ ದೌರ್ಜನ್ಯವಾಗದಂತೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮ, ಮಕ್ಕಳ ಸುರಕ್ಷತೆಗಾಗಿ ಅರಿವು ನೆರವು ಮುಂತಾದ ವಿಷಯಗಳ ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಡಿ ಪೆನ್ನೇಕರ್ ಅವರು ಮಾತನಾಡಿ, ಮಕ್ಕಳ ಜೊತೆ ಅತಿ ಹೆಚ್ಚು ಸಮಯವನ್ನು ಪಾಲಕರ ಜೋತೆಗೆ ಶಿಕ್ಷಕರು ಕಳೆಯುತ್ತಾರೆ. ಆದ ಕಾರಣ ಶಿಕ್ಷಕರು ಮಕ್ಕಳೊಂದಿಗೆ ಆದಷ್ಟು ಸ್ನೇಹ ಭಾವದಿಂದಿರಬೇಕು. ಜೊತೆಗೆ ಮಕ್ಕಳ ಮೇಲೆ ಯಾವ ರೀತಿಯ ದೌರ್ಜನ್ಯ ನಡೆದರೂ ಅಂತಹ ವಿದ್ಯಾರ್ಥಿ ಅವರಿಗಾದ ದೌರ್ಜನ್ಯವನ್ನು ನಿಮ್ಮ ಬಳಿ ಹೇಳಿಕೊಳ್ಳವಂತಾಗಬೇಕು. ಅಂದಾಗ ಮಾತ್ರ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಎಲ್.ಪಿ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಬದ್ರಿನಾಥ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ಇದರ ಉಪ ನಿರ್ದೇಶಕರಾದ ಹರೀಶ ಗಾಂವಕರ್, ಉಪ ನಿರ್ದೆಶಕರ್ ಡಯಟ್ ಹಾಗೂ ಕುಮಟಾ ತಾಲೂಕಾ ಪಂಚಾಯತ್ ಆಡಳಿತಾಧಿಕಾರಿಗಳಾದ ಈಶ್ವರ ನಾಯ್ಕ, ಕುಮಟಾ ಪಿ.ಎಸ್.ಐ ಆನಂದ ಮೂರ್ತಿ, ಹೊನ್ನಾವರ ಪಿ.ಎಸ್.ಐ ಶಶಿಕುಮಾರ್, ರವಿ ಗುಡ್ಡಿ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Exit mobile version