Focus News
Trending

ಪರಿಷತ್ ಚುನಾವಣೆಯಲ್ಲಿ ಮತ್ತೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ದೇಶಪಾಂಡೆ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸತೀಶ ಸೈಲ್

ಅಂಕೋಲಾ : ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಈ ಬಾರಿಯೂ ಕಾಂಗ್ರೆಸ್ ಅಬ್ಯರ್ಥಿಯೇ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ನಾಡವರ ಸಮುದಾಯಭವನದಲ್ಲಿ ಬುಧವಾರ ಮಧ್ಯಾಹ್ನ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಬ್ಯರ್ಥಿ ಭೀಮಣ್ಣ ನಾಯ್ಕ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅದೇ ಗೆಲುವು ಪುನರಾವರ್ತನೆಯಾಗಿ ಈ ಬಾರಿ ಭೀಮಣ್ಣ ನಾಯ್ಕ ಅವರು ಗೆದ್ದು ಬರಲಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು ಇಲ್ಲದೆ ಪರಿಷತ್ ಚುನಾವಣೆ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು ಆಡಳಿತರೂಢ ಸರಕಾರಕ್ಕೆ ಇದು ಶೋಭೆ ತರುವಂತದ್ದಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ,ಇತರೆ ಮೀಸಲಾತಿ ಜಾರಿಗೆ ತರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ನಡೆಯುತ್ತಿರುವ ಪಕ್ಷ ಕಾಂಗ್ರೆಸ್ ಪಕ್ಷ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿರುವ ಮಹಿಳಾ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಬೆಳೆದು ಬಂದ ಭೀಮಣ್ಣ ನಾಯ್ಕ, ಜಿಲ್ಲೆಯ ರಾಜಕೀಯ ವ್ಯವಸ್ಥೆಗಳ ಒಳ-ಹೊರಗನ್ನು ಅತ್ಯಂತ ಸಮೀಪದಿಂದ ಬಲ್ಲವರು ಇಂತಹ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಟ್ಟು ಮತದಾನ ಮಾಡಿ ಎ೦ದು ಎಂದರು.

ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ, ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಪಂಚಾಯತಗಳಲ್ಲಿ ಆಯ್ಕೆಯಾದ ಜನ ಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸರಕಾರದಿಂದ ಅನುದಾನ ಬರುತ್ತಿಲ್ಲ ಜನಪ್ರತಿನಿಧಿಗಳು ಸರಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲು ತನ್ನನ್ನು ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ವಿನಂತಿಸಿದರು.

ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಸತೀಶ್ ಸೈಲ್, ಕಾರವಾರ ಅಂಕೋಲಾ ಕ್ಷೇತ್ರ ಸೇರಿದಂತೆ ರಸ್ತೆ ಸೇತುವೆಗಳ ಅಭಿವೃದ್ಧಿ ಆಗಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆದವುಗಳೇ ಆಗಿದೆ. ಮಂಜುಗುಣಿ ಸೇತುವೆ, ಬೆಳಂಬರ ರಸ್ತೆ ಮತ್ತಿತರ ಕಾಮಗಾರಿಗಳು ಆಗಲು ಸಾಧ್ಯವೇ ಇಲ್ಲ ಎಂದು ಬೊಬ್ಬೆ ಹೊಡೆದವರು ನಮ್ಮ ಆಡಳಿತಾವಧಿಯ ನೈಜ ಅಭಿವೃದ್ಧಿಯನ್ನು ಈಗಲಾದರೂ ಅರ್ಥೈಸಿಕೊಳ್ಳಲಿ.. ನೆರೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಇದುವರೆಗೂ ಬಿಜೆಪಿ ಸರ್ಕಾರದಿಂದ ಸೂಕ್ತ ಪರಿಹಾರದ ಹಣ ಸಿಕ್ಕಿಲ್ಲ.

ವಿವಿಧ ಕಾಮಗಾರಿ ನೀಡುವಿಕೆಯ ಪರ್ಸೆಂಟೇಜ್ ವ್ಯವಹಾರದ ವಿರುದ್ಧ ಗುತ್ತಿಗೆದಾರರೇ ಸಿಡಿದೇಳುವಂತೆ ಮಾಡಿದೆ.ಚುನಾವಣೆ ಬಂದಾಗ ಮಾತ್ರ ಹಿಂದುತ್ವದ ಹೆಸರು ಬಿಜೆಪಿಗರ ಅಜೆಂಡಾ ಆಗಿದೆ.,ಪರೇಶ್ ಮೆಸ್ತ ಅಲೆಯಲ್ಲಿ ಗೆದ್ದು ಬಂದ ಪಕ್ಷದ ನಾಯಕರು ಪರೇಶ್ ಮೇಸ್ತ ತಂದೆಗೆ ಚುನಾವಣೆ ಟಿಕೆಟ್ ನೀಡಿ ಗೆಲ್ಲಿಸಬಹುದಿತ್ತಲ್ಲವೇ ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ವಿಧಾನಪರಿಷತ್ತಿಗೆ ಕಳುಹಿಸುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದರು.

ಕೆ.ಪಿ.ಸಿ.ಸಿ. ಸದಸ್ಯ ರಮಾನಂದ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಪಾಂಡುರಂಗ ಗೌಡ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವ, . ಪ್ರಮುಖರಾದ ಸುಜಾತಾ ಗಾಂವಕರ, ನಾಗರಾಜ ನಾರ್ವೇಕರ, ಸುಜಾತಾ ಗಾಂವಕರ, ಕೆ ಎಚ್ ಗೌಡ, ಜಿ. ಎಮ್. ಶೆಟ್ಟಿ, ಶಂಭು ಶೆಟ್ಟಿ, ಪುರುಷೋತ್ತಮ ನಾಯ್ಕ, ಪುಷ್ಪಾ ನಾಯ್ಕ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಕೋಲಾ ಪುರಸಭೆಯ ಕಾಂಗ್ರೆಸ್ ಸದಸ್ಯರು,ವಿವಿಧ ಗ್ರಾಮ ಪಂಚಾಯತಿಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಹಾಗೂ ಸದಸ್ಯರು, ಪಕ್ಷದ ವಿವಿಧ ಸೆಲ್ ಗಳ ಅಧ್ಯಕ್ಷರು, ಸದಸ್ಯರು,ಮಾಜಿ ಜನಪ್ರತಿನಿಧಿಗಳು,ಪಕ್ಷದ ಹಿರಿ-ಕಿರಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.ವಿನೋದ ನಾಯಕ್ ಬಾಸಗೋಡ ನಿರೂಪಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button