ಚುನಾವಣಾ ಪ್ರಚಾರ ಸಭೆ ಮುಗಿಸಿ ಸಚಿವ ಹೆಬ್ಬಾರ ಕಾಂಗ್ರೆಸ್ ನಾಯಕನ ಮನೆಗೆ ತೆರಳಿದ್ದು ಯಾಕೆ ?.

ಅಂಕೋಲಾ: ಯಲ್ಲಾಪುರದಲ್ಲಿ ವಿರಾಟ ದರ್ಶನ ಮಾಡಿ ಜಿಲ್ಲೆಯಲ್ಲಿ ಬಿಜೆಪಿ ತಾಕತ್ತು ಪ್ರದರ್ಶಿಸಿದ್ದೇವೆ. ಗ್ರಾಮ ಪಂಚಾಯತ ಚುನಾವಣೆ ಮೂಲಕವೇ ಒಂದು ವರ್ಷದ ಹಿಂದಿನಿಂದ  ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಿದ ಬಿಜೆಪಿ,ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸದೇ,ಶಸ್ತ್ರಾಭ್ಯಾಸ ಮುಗಿಸಿ ಯುದ್ಧಕ್ಕೆ ಬಂದಿದೆ. ಈ ಹಿಂದಿನ ಎಲ್ಲಾ ಪರಿಷತ್ ಚುನಾವಣೆಯಲ್ಲಿ ಆಡಳಿತ ಪಕ್ಷದವರೇ ಅಧಿಕಾರಕ್ಕೆ ಬಂದಿದ್ದು,ಈ ಬಾರಿ ನಮ್ಮ ಪಕ್ಷದ ಗಣಪತಿ ಉಳ್ವೇಕರ್ ಗೆಲುವು  ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಂ ಹೆಬ್ಬಾರ, ಮತದಾನ  ಮಾಡುವಾಗ ಜಾಗ್ರತೆ ವಹಿಸುವ  ಅಗತ್ಯತೆ ಇದೆ ಎಂದು ಸಾರಿ ಸಾರಿ ಹೇಳಿದರು.  ತಾಲೂಕಿನ ಅವರ್ಸಾದ  ಗಾಂಧೀ ಮೈದಾನದ ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಟ್ಟಡದಲ್ಲಿ  ಸೋಮವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ  ಅವರು ಮಾತನಾಡಿದರು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಮಾತನಾಡಿ  ಗ್ರಾಮ ಪಂಚಾಯಿತಿ, ಪುರಸಭೆ,  ವ್ಯಾಪ್ತಿಯ ಸಮಸ್ಯೆ ಬಗೆಹರಿಸಲು ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಅಗತ್ಯವಾಗಿದೆ, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ  ದೂರವಾಣಿ ಕರೆ ಮಾಡಿ ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ಗೆಲ್ಲಿಸಲು ನಮ್ಮೆಲ್ಲಾ ಶಾಸಕರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ. ಉಳ್ವೇಕರ ಅವರು ಈ ಹಿಂದೆ ಕಾರವಾರ ನಗರ ಸಭೆ ಅಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಸದಸ್ಯರಾಗಿ  5 ಅವಧಿಗೆ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.

ಮೀನುಗಾರ ಸಮಾಜದ, ಬಿಜೆಪಿ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದು,ನಾವೆಲ್ಲರೂ ಕೂಡಿ ಅವರನ್ನು ಗೆಲ್ಲಿಸೋಣ ಎಂದರು.ಪಕ್ಷದ ವಕ್ತಾರ ಉಮೇಶ ಭಾಗವತ್, ಮುಖಂಡ ರಾಜೇಂದ್ರ ನಾಯ್ಕ, ಅಭ್ಯರ್ಥಿ ಗಣಪತಿ ಉಳ್ವೇಕರ್ ಮಾತನಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಮಂಡಲ ಅಧ್ಯಕ್ಷ ಸಂಜಯ ನಾಯ್ಕ,ಉಪಾಧ್ಯಕ್ಷ ಮಾರುತಿ ಗೌಡ, ಜಿ.ಪಂ ಮಾಜಿ ಸದಸ್ಯ ಜಗದೀಶ ಮೊಗಟಾ,  ಹಿರಿಯ ಮುಖಂಡ ಭಾಸ್ಕರ ನಾರ್ವೇಕರ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀ ಹಾದಿಮನಿ (ಬೆಲೇಕೇರಿ) , ದೀಪಾ ನಾಯ್ಕ (ಅಲಗೇರಿ),  ನಿಶಾ ನಾಯ್ಕ(ಹಟ್ಟಿಕೇರಿ) ವೇದಿಕೆಯಲ್ಲಿ  ಉಪಸ್ಥಿತರಿದ್ದರು.ರಾಘು ಭಟ್ಟ ನಿರೂಪಿಸಿದರು.ಪಕ್ಷದ ಹಿರಿ ಕಿರಿಯ  ಮುಖಂಡರು, ಕಾರ್ಯಕತರು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಸಾರ್ವಜನಿಕರು ಪಾಲ್ಗೊಂಡಿದ್ದರು.         

ಸಭೆ ಮುಗಿಸಿ ಸಚಿವ ಹೆಬ್ಬಾರ ಹತ್ತಿರದಲ್ಲಿಯೇ ಇದ್ದ ಸ್ಥಳೀಯ ಪ್ರಭಾವಿ ಮುಖಂಡ,ಹಾಗೂ ಕಾಂಗ್ರೆಸ್ ನಾಯಕ ಮಾರುತಿ ನಾಯ್ಕ ಮನೆಗೆ ತೆರಳಿ,ಕುಟುಂಬ ಸದಸ್ಯರು ಮತ್ತು ಆತ್ಮೀಯರೊಂದಿಗೆ ಕೆಲ ಹೊತ್ತು ಕಳೆದರು. ಈ ವೇಳೆ ಶಾಲಾಭಿವೃದ್ಧಿ, ರಸ್ತೆ ಸುಧಾರಣೆ, ಆಟದ ಮೈದಾನ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು. ಎನ್ನಲಾಗಿದ್ದು, ಮನೆಯಿಂದ ಹೊರ ಬರುತ್ತ ನಗುಮುಖದಲ್ಲಿ ಫೋಟೋ ಪೋಸ್ ನೀಡಿ, ಪ್ರಯಾಣ ಬೆಳೆಸಿದರು. 

ಶಿವರಾಂ ಹೆಬ್ಬಾರ ಸಚಿವರಾಗುವುದಕ್ಕೂ ಪೂರ್ವ,ಕಳೆದ ಎರಡು ಮೂರು ದಶಕಗಳಿಂದ ಅಂಕೋಲಾ ದೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅವರ್ಸಾದ ಮಾರುತಿ ನಾಯ್ಕ ಕುಟುಂಬದೊಂದಿಗೆ ಈ ಹಿಂದಿನಿಂದಲೂ ಆತ್ಮೀಯತೆ ಬೆಳೆಸಿಕೊಂಡಿದ್ದು, ಆ ಕಾರಣದಿಂದಲೇ ಊರಿಗೆ ಬಂದಾಗ,ಅವರ ಮನೆಗೆ ಆತ್ಮೀಯ  ಭೇಟಿಮಾಡಿದರು ಎನ್ನಬಹುದು.

ಆದರೆ ಇದು ಚುನಾವಣೆ ಸಮಯವಾದ್ದರಿಂದ ಆತ್ಮೀಯ ಭೇಟಿಯ ಜೊತೆ ಜೊತೆಯಲ್ಲಿಯೇ ,ಅವರ್ಸಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಮಾರುತಿ ನಾಯ್ಕ ಅವರ ಮನವೊಲಿಸಿ ಅವರ ಪತ್ನಿ ಹಾಗೂ ಹಾಲಿ ಅವರ್ಸಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಸಾರಾ ಕುಟಿನೋ ಪ್ರಭಾವ ಬಳಸಿ,ಬಿಜೆಪಿ ಬುಟ್ಟಿಗೆ ಮತ್ತಷ್ಟು ಮತಗಳನ್ನು ಸೆಳೆಯುವ ರಾಜಕೀಯ ತಂತ್ರಗಾರಿಕೆ ರೂಪಿಸಿದಂತಿದೆ. ಅದಕ್ಕೆ ಇಂಬುಕೊಡುವಂತೆ ಅವರ್ಸಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಹಿತ ಬೆಲೇಕೇರಿ ಹಾಗೂ ಹಟ್ಟಿಕೇರಿಯ ಪ್ರಭಾವಿ ಸದಸ್ಯರು ಸಹ ಈ ವೇಳೆ ಮಾರುತಿ ನಾಯ್ಕ ಅವರ ಮನೆಯಲ್ಲಿ ಉಪಸ್ಥಿತರಿದ್ದಂತಿತ್ತು. ಇದೇ ವೇಳೆ ಅನತಿ ದೂರದಲ್ಲಿಯೇ ಇದ್ದ ಶಾಸಕಿ ಹಾಗೂ ಪಕ್ಷದ ಅಭ್ಯರ್ಥಿ ಯಾರೊಬ್ಬರೂ  ಮಾರುತಿ ನಾಯ್ಕ ಅವರ  ಮನೆ ಬಳಿ  ಅದಾವುದೋ ಕಾರಣದಿಂದ ಬಾರದಿರುವುದು ಸಹ ಸ್ಥಳೀಯ ಮಟ್ಟದಲ್ಲಿ ಕೆಲ ರಾಜಕೀಯ  ಚರ್ಚೆಗೆ ಕಾರಣವಾದಂತಿತ್ತು.

ಒಟ್ಟಿನಲ್ಲಿ ಈ ಗುಣ ಅವಗುಣಗಳು ವಿಧಾನಪರಿಷತ್,ಮುಂಬರುವ ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್, ಹಾಗೂ ವಿಧಾನಸಭಾ ಚುನಾವಣೆಗಳ ಮೇಲೂ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಪರಿಣಾಮ ಬೀರಬಹುದು ಎನ್ನುವ ರಾಜಕೀಯ ಲೆಕ್ಕಾಚಾರದ ಮಾತುಗಳು ಅಲ್ಲಲ್ಲಿ ಕೇಳಿ ಬಂದಿದೆ.  ಗಣಪತಿ ಉಳ್ವೇಕರ ಅವರ ಗೆಲವಿಗಾಗಿ ಪಕ್ಷದ ಮುಖಂಡರು ತನ್ನ ಮೇಲೆ ಹೊರಿಸಿದ ಹಿರಿದಾದ ಭಾರವನ್ನು ಹೊತ್ತು,ತನ್ನ   ರಾಜಕೀಯ ಅನುಭವದ ಸಂಪೂರ್ಣ ಶಕ್ತಿ – ಯುಕ್ತಿ   ವಿನಿಯೋಗಿಸಿ,ಸಮರ್ಥ ನಾಯಕತ್ವವನ್ನು ಪ್ರದರ್ಶಿಸಿ ಗೆಲುವು ಸಾಧಿಸುವಂತೆ ಮಾಡಿ  ಹಾಗೂ ಜಿಲ್ಲೆಯ ಮೇಲೆ  ತನ್ನ ಹಿಡಿತ ಸಾಧಿಸಲು, ಮತ್ತು  ಆ ಮೂಲಕ  ತನ್ನ ವರ್ಚಸ್ಸು ಮತ್ತಷ್ಟು ಹೆಚ್ಚಿಸಿ ಕೊಳ್ಳಲು ಪ್ರಯತ್ನ ಮುಂದುವರೆಸಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version