ಅತಿಸೂಕ್ಷ್ಮ ಹಾಗೂ ದೊಡ್ಡ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ: ದೇವಸ್ಥಾನದಲ್ಲಿ ನಡೆಯಿತೇ ಆಣೆ – ಪ್ರಮಾಣ ? ಪಕ್ಷಕ್ಕಾಗಿ ಜಯವೋ ಅತಿರೇಕವೋ? ನಿರ್ಧರಿಸುವವರಾರು?
ಅಂಕೋಲಾ: ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಒಟ್ಟು 22 ಮತಗಟ್ಟೆಗಳ ಪೈಕಿ, ಅತಿ ಸೂಕ್ಷ್ಮ ಎಂದು ಗುರುತಿಸಲಾದ ಹಾಗೂ ಅತಿ ದೊಡ್ಡ ಮತಗಟ್ಟೆ ಕೇಂದ್ರವಾಗಿದ್ದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಕಾಂಗ್ರೆಸ್, ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದು ಬಂದು,ಪುರಸಭೆ ಸದಸ್ಯರಾದ ಎಲ್ಲಾ ಜನಪ್ರತಿನಿಧಿಗಳು (ಒಟ್ಟೂ 23 ಸದಸ್ಯರು) ತಮ್ಮ ಮತದ ಹಕ್ಕು ಚಲಾಯಿಸಿದ್ದರಿಂದ, ಶೇ. 100 ಮತದಾನ ದಾಖಲಾದಂತಾಗಿದೆ.
ಬೆಳಿಗ್ಗೆ 8 ರಿಂದಲೇ ಮತದಾನಕ್ಕೆ ಅವಕಾಶವಿದ್ದರೂ,ಆರಂಭದ ಸ್ವಲ್ಪ ಹೊತ್ತು ಮತದಾನ ಕೇಂದ್ರದತ್ತ ಯಾವುದೇ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.ತದನಂತರ ಕಾಂಗ್ರೆಸ್ಸಿನ ಒಂದಿಬ್ಬರು ಸದಸ್ಯರು ಬಂದು ಮತದಾನ ಮಾಡಿದರು. ಬಿಜೆಪಿ ಪಕ್ಷದಿಂದ ಆಯ್ಕೆಯಾದ ( 8) ಸದಸ್ಯರು ಮತ್ತು ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲು ಬೆಂಬಲಿಸಿದ್ದ (5) ಸ್ವತಂತ್ರರು ಸೇರಿ ಒಟ್ಟು 13 ಜನ ಒಟ್ಟಾಗಿ ಬಂದು ಮತದಾನ ಮಾಡಲು ಪೂರ್ವ ಯೋಜಿತ ರಾಜಕೀಯ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಆದರೆ ಸ್ವತಂತ್ರ ಸದಸ್ಯರ ಪೈಕಿ ಒರ್ವ ಹಿರಿಯರು , ಅದಾವುದೋ ಕಾರಣದಿಂದ ಆ ಗುಂಪಿನಲ್ಲಿ ಕಾಣಿಸಿಕೊಳ್ಳದೇ, ಕೆಲಸದ ಒತ್ತಡ ಅಥವಾ ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಿಂದ ಪ್ರತ್ಯೇಕವಾಗಿ ಉಳಿದು, ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಇನ್ನುಳಿದ 12 ಜನರು ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಬೆಳಿಗ್ಗೆ ಶಾಂತದುರ್ಗಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಪುರಸಭೆ ಉಪಾಧ್ಯಕ್ಷೆ ರೇಖಾ ಡಿ ಗಾಂವಕರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ಬಾಲ ಕೃಷ್ಣ ನಾಯ್ಕ ಇವರ ನಡುವೆ ಪ್ರಸಾದ ಪಡೆದು, ಇಲ್ಲವೇ ಆಣೆ ಪ್ರಮಾಣ ಮಾದರಿಯಲ್ಲಿ ಅಭ್ಯರ್ಥಿ ಉಳ್ವೇಕರಗೆ ಮತದಾನ ಮಾಡುವ ವಿಷಯದಲ್ಲಿ ಪರಸ್ಪರ ಅದೇನೋ ಬಿರುಸಿನ ನಡೆದು ,ದೇವಸ್ಥಾನ ಪ್ರಾಂಗಣದಲ್ಲಿಯೇ ರಾಜಕೀಯ ಗೊಂದಲಕ್ಕೆ ಕಾರಣವಾಯಿತು ಎನ್ನಲಾಗಿದೆ.
ಈ ವೇಳೆ ಪಕ್ಷದ ಹಿರಿಯ ನಾಯಕರೊಬ್ಬರು,ಮತ್ತಿತರರು ರೇಖಾ ಗಾಂವಕರ ಅವರನ್ನು,ಸಮಾಧಾನಪಡಿಸಿ ಪಕ್ಷದ ಪರ ಮತ ಚಲಾಯಿಸುವಂತೆ ವಿನಂತಿಸಿದರು ಎನ್ನಲಾಗಿದ್ದು,ಇದರಿಂದ ಮತ್ತಷ್ಟು ಬೇಸರಗೊಂಡ ರೇಖಾ ಗಾಂವಕರ,ನಾನು ಸ್ವತಂತ್ರವಾಗಿ ಆಯ್ಕೆಯಾಗಿದ್ದರೂ ಬಿಜೆಪಿ ಆಡಳಿತಕ್ಕೆ ಬರಲು ಈ ಹಿಂದೆಯೇ ಬೆಂಬಲಿಸಿದ್ದೇನೆ. ಹಾವೇರಿ ಪಕ್ಷವು ನನಗೆ ಉಪಾಧ್ಯಕ್ಷ ಹುದ್ದೆಯನ್ನು ನೀಡಿದೆ.
ಹಾಗೆಂದ ಮಾತ್ರಕ್ಕೆ ಎಲ್ಲವೂ ನನ್ನಿಂದಲೇ ಅಲ್ಲ. ನನ್ನಂತೆ ಇತರೆ ಸ್ವತಂತ್ರ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದು,ಅವರಿಗೆ ಯಾರಿಗೂ ಇಲ್ಲದ ಆಣೆ ಪ್ರಮಾಣಗಳು ,ಅಪನಂಬಿಕೆ ನನ್ನ ಮೇಲೆ ಅಷ್ಟೇ ಯಾಕೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಂತೂ ಇಂತು ಪೂಜೆಯಲ್ಲಿ ಪಾಲ್ಗೊಂಡಿದ್ದ ಪುರಸಭೆಯ ಸದಸ್ಯರು ಮತದಾನ ಕೇಂದ್ರಕ್ಕೆ ಬಂದು ಮತಚಲಾಯಿಸಿದರು ಎನ್ನಲಾಗಿದ್ದು,ರೇಖಾ ಗಾಂವಕರ ಸ್ವಲ್ಪ ಮುಂಚಿತವಾಗಿ ಬಂದು ಮತಚಲಾಯಿಸಿ,ಬಳಿಕ ತರಕಾರಿ ಮಾರುಕಟ್ಟೆ ಎದುರಿನ ಪ್ರವೇಶದ್ವಾರದ ಬಳಿ ನಿಂತು,ದೇವಸ್ಥಾನದ ಬಳಿ ನಡೆದ ಘಟನೆಗಳನ್ನು ವಿವರಿಸಿ,ತನಗೆ ಜಯಾ ಬಾಲಕೃಷ್ಣ ನಾಯ್ಕ ಇವರಿಂದ ಹತ್ತಾರು ಬಾರಿ ಆದ ಕಹಿ ಅನುಭವವನ್ನು ಕೆಲ ಸಹ ಸದಸ್ಯರು, ಹಾಗೂ ಹತ್ತಿರ ಇದ್ದ ಇನ್ನಿತರರ ಬಳಿ ಹೇಳಿಕೊಂಡಿದ್ದಾರೆ.ಈ ವೇಳೆ ಭಾವುಕ ಹಾಗೂ ದುಃಖ ಭರಿತರಾಗಿದ್ದಂತೆ ಕಂಡು ಬಂದ ಅವರನ್ನು,ಹಿತೈಷಿಗಳು ಹಾಗೂ ಪಕ್ಷದ ಪ್ರಮುಖ ರೋರ್ವರು ಸಂತೈಸಿ ಮನೆಗೆ ತೆರಳುವಂತೆ ತಿಳಿಸಿದ್ದರು ಎನ್ನಲಾಗಿದೆ.
ಇದಾದ ಕೆಲ ಹೊತ್ತಿನಲ್ಲೇ ಅಧ್ಯಕ್ಷರು ಸಹಿತ ಇತರೆ ಸದಸ್ಯರೆಲ್ಲರೂ ಮತದಾನ ಪೂರ್ಣಗೊಳಿಸಿ,ಪ್ರವೇಶ ದ್ವಾರದ ಬಳಿ ಬಂದು ಪಕ್ಷದ ಪರವಾಗಿ ನಾವೆಲ್ಲ ಒಂದಾಗಿ ಮತ ಚಲಾಯಿಸಿದ್ದೇವೆ ಎಂಬಂತೆ ಗೆಲುವಿನ ವಿಶ್ವಾಸ ತೋರಿಸುವಂತೆ,ಫೋಟೋ ತೆಗೆಯಿಸಿಕೊಂಡು ಹೋದರಾದರೂ, ಆ ವೇಳೆ ರೇಖಾ ಗಾಂವಕರ ಅಲ್ಲಿ ಇರದುದರಿಂದ, ಬೆಳಿಗ್ಗೆ ದೇವಸ್ಥಾನದಲ್ಲಿ ನಡೆದ ಘಟನೆಗೆ ಕೆಲವರು ಥಳಕು ಹಾಕಿದರು ಎನ್ನಲಾಗಿದೆ, ಇತ್ತೀಚೆಗೆ ಜಯಾ ಮತ್ತು ರೇಖಾರ ನಡುವಿನ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ, ಬಹಿರಂಗವಾಗಿ ತೋರ್ಪಡಿಸುತ್ತಿರುವ ನಡೆ ಹಾಗೂ ಬಿರು ನುಡಿಗಳು ಪಕ್ಷ ಸಂಘಟನೆಯಲ್ಲಿ ಬಿರುಕಿಗೆ ಕಾರಣವಾಗುತ್ತಿದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಇದರಿಂದ ಪಕ್ಷದ ಕೆಲ ಮುಖಂಡರು ಮತ್ತು ಕಾರ್ಯಕರ್ತರಿಗೂ ಇರಿಸು-ಮುರಿಸು ತಂದಂತಿದೆ.
ಪುರಸಭೆಯ ಪ್ರಮುಖ ಹುದ್ದೆಯಲ್ಲಿರುವ ಈ ಎರಡು ಮಹಿಳಾ ಮಣಿಗಳ ಒಳಜಗಳ ಈ ಹಿಂದೆಯೇ ಶಾಸಕಿ ರೂಪಾಲಿ ನಾಯ್ಕ ಗಮನಕ್ಕೂ ಬಂದಿದ್ದು,ಭಿನ್ನಾಭಿಪ್ರಾಯ ಶಮನಕ್ಕೆ ಶಾಸಕಿ ತನ್ನದೇ ಆದ ಪ್ರಯತ್ನ ಮುಂದುವರಿಸಿದ್ದಾರೆ. ಆರಂಭದಲ್ಲಿ ರೆಸಾರ್ಟ್ ರಾಜಕೀಯದ ಮೂಲಕ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ನಡೆಸಿದ ತಂತ್ರಗಾರಿಕೆಯಿಂದ ಹಿಡಿದು,ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ,ತದನಂತರದ ಹತ್ತಾರು ಬೆಳವಣಿಗೆಗಳು, ವಿವಿಧ ರೀತಿಯ ಪ್ರತಿಭಟನೆಗಳು, ರಾಜಕೀಯ ಹಾಗೂ ಆಡಳಿತಾತ್ಮಕ ಕೆಲ ವಿಚಾರಗಳಲ್ಲಿ ಉಂಟಾದ ಗೊಂದಲಗಳು ಒಂದಲ್ಲ ಒಂದು ರೀತಿ ಅಂಕೋಲಾ ಪುರಸಭೆ ಸದಾ ಸುದ್ದಿಯಲ್ಲಿರುವಂತೆ ಮಾಡಿದೆ.
ಅಡಳಿತ ಪಕ್ಷವೇ ಇರಲಿ, ವಿಪಕ್ಷವೇ ಇರಲಿ, ಜನಪ್ರತಿನಿಧಿಗಳಾದವರು ಇನ್ನು ಮುಂದಾದರೂ ಪಕ್ಷ -ಬೇಧ, ಭಿನ್ನಾಭಿಪ್ರಾಯ ಮರೆತು, ತಮ್ಮ ತಮ್ಮ ಜವಾಬ್ದಾರಿ ಅರಿತು ಪುರಸಭೆ ವ್ಯಾಪ್ತಿಯಲ್ಲಿನ ರಸ್ತೆ ಸುಧಾರಣೆ,ತರಕಾರಿ ಹಾಗೂ ಮೀನುಮಾರುಕಟ್ಟೆ ವ್ಯವಸ್ಥಿತ ನಿರ್ವಹಣೆ,ಕುಡಿಯುವ ನೀರು ಪೂರೈಕೆ,ಬೀದಿ ದೀಪ, ಒಳಚರಂಡಿ ನಿರ್ಮಾಣಕ್ಕೆ ವ್ಯವಸ್ಥಿತ ಯೋಜನೆ ರೂಪುಗೊಳಿಸಿ ,ಶೀಘ್ರ ಅನುಷ್ಠಾನಕ್ಕೆ ಒತ್ತು ನೀಡುವುದು ಸೇರಿದಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಷೇಷ ಗಮನ ಹರಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ