ಪದ್ಮಶ್ರೀ ತುಳಸೀ ಗೌಡರಿಗೆ ಪ್ರತಿಷ್ಠಿತ ಮದರ ತೆರೇಸಾ ಮೆಮೋರಿಯಲ್ ಪ್ರಶಸ್ತಿ.ಮಾಯಾನಗರಿ ಮುಂಬೈಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭ: ವಿಮಾನಯಾನ ಸಿಬ್ಬಂದಿ ಗಳಿಂದಲೂ ತುಳಸಿ ಗೌಡರಿಗೆ ಅಭಿನಂದನೆ

ಅಂಕೋಲಾ: ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡರ ಸಾಮಾಜಿಕ ಸೇವೆ ಮತ್ತು ಸುಸ್ಥಿರ ಪರಿಸರದ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗೆ ದೇಶದ ಪ್ರತಿಷ್ಠಿತ 2021ರ ಮದರ್ ತೆರೇಸಾ ಮೆಮೋರಿಯಲ್ ಪ್ರಶಸ್ತಿ ಒಲಿದು ಬಂದಿದೆ.ಸಾಮಾಜಿಕ ಸೇವೆ ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸುವ ಹಾರ್ಮೋನಿ ಫೌಂಡೇಶನ್, ತುಳಸಿ ಗೌಡರಿಗೆ  ಮುಂಬೈನಲ್ಲಿ 17 ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಲಿದೆ. ವೃಕ್ಷ ಮಾತೆಯೆಂದು ಗುರುತಿಸಲ್ಪಟ್ಟಿರುವ ತುಳಸಿ ಗೌಡ ಇತ್ತೀಚಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ  ಪ್ರಶಸ್ತಿಯನ್ನು ಸ್ವೀಕರಿಸಿದ್ದರು. 

ಸಸ್ಯಗಳ ಪಾಲನೆ-ಪೋಷಣೆಯಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡು , ಗಿಡ-ಮರಗಳ ಕುರಿತಾದ ಅವರ ಜ್ಞಾನ ಅರಣ್ಯ ವಿಶ್ವಕೋಶ ಎನ್ನುವಷ್ಟರಮಟ್ಟಿಗೆ ಪ್ರಸಿದ್ಧಿ ಯಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತುಳಸಿ ಗೌಡರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಾರ್ಮೋನಿ ಫೌಂಡೇಶನ್ ಅಧ್ಯಕ್ಷ ಡಾ. ಅಬ್ರಾಹಂ ಮಥೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದರ್ ಥೆರೇಸಾ ಸ್ಮರಣಾರ್ಥವಾಗಿ ಜನ್ಮತಾಳಿದ ಹಾರ್ಮೋನಿ ಫೌಂಡೇಶನ್ ಪ್ರತಿವರ್ಷ ಮಾನವೀಯ ಮೌಲ್ಯಗಳನ್ನು ಜಗತ್ತಿನಾದ್ಯಂತ ಪಸರಿಸುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಬೌದ್ಧ ಧರ್ಮಗುರು ದಲೈಲಾಮಾ, ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್, ಮಲೇಶಿಯಾದ ಪ್ರಧಾನಿ ಮಹತಿರ್ ಮಹಮದ್, ಅಣ್ಣಾ ಹಜಾರೆ, ಸುಧಾ ಮೂರ್ತಿ, ಮೇಧಾ ಪಾಟ್ಕರ್ ಸೇರಿದಂತೆ ಹಲವು ಗಣ್ಯರು ಈ ಹಿಂದೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ತುಳಸಿ ಗೌಡ, ಕರ್ನಾಟಕದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳೆಯಾಗಿದ್ದಾರೆ.ಪ್ರಶಸ್ತಿ ಪ್ರಧಾನ ಸ್ವೀಕಾರ ಸಮಾರಂಭಕ್ಕೆ ಮಾಯಾನಗರಿ ಮುಂಬೈಗೆ, ಮೊಮ್ಮಗ ಶೇಖರ ಗೌಡ , ಜೊತೆ  ಹುಬ್ಬಳ್ಳಿಯಿಂದ ವಿಮಾನ ಏರಿ ಪ್ರಯಾಣ ಬೆಳೆಸಿದ್ದಾರೆ. ಪದ್ಮಶ್ರೀ ಪುರಸ್ಕೃತೆಯನ್ನು ಕಂಡು ಪುಳಕಿತಗೊಂಡ ವಿಮಾನಯಾನ ಸಿಬ್ಬಂದಿ ಸೇರಿದಂತೆ ಇತರರು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದರು.         

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version