Follow Us On

WhatsApp Group
Important
Trending

ಮರಳು ಸಾಗಾಟದ ಹಿಂದಿದೆ ಮರುಳು ಮಾಡುವ ದಂಧೆ ?. ಪಾಸ್ 1,ಟ್ರಿಪ್ 2: ಅಕ್ರಮ ಮರಳುಗಾರಿಕೆ ಅನುಮಾನ: ಎರಡು ವಾಹನ ವಶ

ಡೀಸೆಲ್ ಕಳ್ಳತನದ ಪ್ರತ್ಯೇಕ ಪ್ರಕರಣವೂ ದಾಖಲುಅಂಕೋಲಾ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ. ಕಾರವಾರದಿಂದ ಯಲ್ಲಾಪುರ ಕಡೆಗೆ ಮರಳು ಸಾಗಿಸುತ್ತಿದ್ದ ಟಿಪ್ಪರ ಲಾರಿಗಳನ್ನು ತಪಾಸಣೆಗೊಳಪಡಿಸಿದಾಗ ಪರವಾನಿಗೆ ಪಾಸುಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅವಧಿ ಮೀರಿದ ಪಾಸುಗಳನ್ನು ಬಳಸಿ ಮರಳು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಟಿಪ್ಪರ ಲಾರಿಗಳು GA04/T3090 ಹಾಗೂ GA03/K8086  . ಯಲ್ಲಾಪುರದ ಪ್ರಶಾಂತ ಮತ್ತು ಇಮ್ರಾನ್ ಇವರಿಗೆ ಸೇರಿದ್ದೆನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.  ಇತ್ತೀಚೆಗಷ್ಟೆ ಕಾರವಾರದ ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಸರಕಾರ ಶರತ್ತುಬದ್ದ ಅನುಮತಿ ನೀಡಿದ್ದು,ಮರಳುಗಾರಿಕೆ ನಿಧಾನವಾಗಿ ಆರಂಭವಾಗಿದೆ.ಆದರೆ ಇದೇ ವೇಳೆ ಅಂಕೋಲಾ ತಾಲೂಕಿಗೆ ಈ ವರೆಗೂ ಪರವಾನಿಗೆ ದೊರೆಯದೆ ಇನ್ನಷ್ಟು  ದಿನ ಕಾಯಬೇಕಾದ ಅನಿವಾರ್ಯತೆ ಇದೆ.ಪೊಲೀಸ್ ಇಲಾಖೆಯ ಬಿಗು ನಿಲುವಿನಿಂದ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೂ ಬಹುತೇಕ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.

ಆದರೆ  ತಾಲೂಕಿನ ಗಡಿ ಭಾಗಕ್ಕೆ  ಹೊಂದಿಕೊಂಡ ಇತರೆ ತಾಲೂಕಿನ ಕೆಲವರು ಮರಳು ಸಾಗಾಣಿಕೆಯಲ್ಲಿ ತಮ್ಮ ಕರಾಮತ್ತು ತೋರಿಸಿ,ಸಂಬಂಧಿತ ಇಲಾಖೆಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಒಂದೇ ಪಾಸಿನಲ್ಲಿ ಎರಡು ಟ್ರಿಪ್ ಸಾಗಾಟ ಮಾಡುತ್ತಿರುವ ಕುರಿತು ಸಂಶಯದ ಮಾತುಗಳು ಅಲ್ಲಲ್ಲಿ ಕೇಳಿ ಬಂದಿವೆ. ಮರಳು ಸಾಗಾಟದ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಸಾಧನ ಅಳವಡಿಸಿ, ನಿಗದಿತ ಸಮಯದೊಳಗೆ ಮರಳು ಸಾಗಾಟಕ್ಕೆ ಅವಕಾಶ ಮಾಡಿಕೊಡಾಗುತ್ತದೆ.

ಆದರೆ ಕೆಲವರು ಇಲಾಖೆಯ ಕಣ್ಣು ತಪ್ಪಿಸಿ, ಇಲ್ಲವೇ ಒಳ ಒಪ್ಪಂದ ಮಾಡಿಕೊಂಡು ಒಂದೇ ಪಾಸಿನಲ್ಲಿ ಒಂದಕ್ಕಿಂತ ಹೆಚ್ಚು ಟ್ರಿಪ್ ಮರಳನ್ನು ಅಕ್ರಮವಾಗಿ ಸಾಗಿಸಿ,ಸರ್ಕಾರದ ಆದಾಯಕ್ಕೂ ಪಂಗನಾಮ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಒಂದೊಮ್ಮೆ ತಮ್ಮ ಗಾಡಿಗಳನ್ನು ಯಾರಾದರೂ ತಡೆದು ತಪಾಸಣೆ ಮಾಡಿದರೆ, ಆ ವೇಳೆ ಅಧಿಕಾರಿಗಳನ್ನು ನಂಬಿಸಲು ವಾಹನದ ಟೈಯರ್ ಸ್ಟೋಟವಾಗಿತ್ತು, ವಾಹನ ಕೆಟ್ಟು ನಿಂತಿತ್ತು ಮತ್ತಿತರ ಸಬೂಬು ಹೇಳಿ ಜಾರಿಕೊಳ್ಳುತ್ತಿರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಇದೇ ವೇಳೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಕಷ್ಟಸಾಧ್ಯವಾಗಿದ್ದು ವಾಹನ ಮಾಲೀಕರು ಮತ್ತು ಚಾಲಕರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ  ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ರಸ್ತೆ ಸಂಚಾರದ ವೇಳೆ ಮೇಲ್ನೋಟಕ್ಕೆ ಕಂಡುಬರುತ್ತಿರುವುದು ಸುಳ್ಳಲ್ಲ. ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೆದ್ದಾರಿ ದುರಸ್ತಿಗೆ ತುರ್ತು ಗಮನಹರಿಸಬೇಕಿದೆ.       

ಮರಳುಸಾಗಾಟದ ವೇಳೆ ಪಡೆದ ಮೊದಲ ಪಾಸಿನಲ್ಲಿ ಒಂದನೇ ಟ್ರಿಪ್ ಮುಗಿಸಿ,ಪುನಹ ಬೇಗ ಬಂದು ಎರಡನೇ ಟ್ರಿಪ್ ಸಾಗಿಸಲಾಗುತ್ತಿದೆ ಇಲ್ಲವೇ ಗ್ರಾಹಕರಿಗೆ ತಲುಪಿಸಬೇಕಾದ ಪರವಾನಿಗೆ ಪಾಸನ್ನೂ ಸಹ ವಾಹನದವರೇ ತಮ್ಮ ಬಳಿ ಇಟ್ಟುಕೊಂಡು ಸಮಯ ಸಂದರ್ಭ ನೋಡಿ ಒಂದಕ್ಕಿಂತ ಹೆಚ್ಚು ಟ್ರಿಪ್ ಸಾಗಿಸುತ್ತಾರೆನ್ನುವ   ಅನುಮಾನ ವ್ಯಕ್ತವಾಗುತ್ತಿದೆ. ಈ  ಕುರಿತು ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ಹಾಗೂ ಪ್ರಮುಖ ನಾಕಾಗಳಲ್ಲಿಯೂ ಕಾಗದ ಪತ್ರ ಪರಿಶೀಲನೆ, ಸಮಯ ಮತ್ತಿತರ ಸಂಬಂಧಿತ ವಿಷಯಗಳನ್ನು ದಾಖಲಿಸಿ ಅಕ್ರಮ ವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಇಲ್ಲದಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಕ್ರಮ ದಂಧೆಕೋರರಿಗೆ ಮಣೆ ಹಾಕಿದಂತಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button