ಶಿರಸಿ: ನಗರದಲ್ಲಿ ತನ್ನ ಮಗಳ ಸಮಾನ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಗೆ ಕಾರವಾರದ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 77,500ರೂ. ದಂಡ ವಿಧಿಸಿ ಅಂತಿಮ ತೀರ್ಪು ನೀಡಿದೆ. ಈ ಮೂಲಕ ಇಲ್ಲಿನ ನ್ಯಾಯಾಲಯದಲ್ಲಿ 40ನೇ ಶಿಕ್ಷೆಯು ಪ್ರಕಟವಾದಂತಾಗಿದೆ. ಗುಲಾಬ್ ಚಂದ್ ಚೀಮಾಲಾಲ್ ಶಾಹ (37) ಶಿಕ್ಷೆಗೆ ಗುರಿಯಾದವ.
ಈತನು ಮೂಲತಃ ಯಾದಗಿರಿಯ ದೇಸಾಯಿ ಓಣಿಯವನಾಗಿದ್ದು ಅಡುಗೆ ಕೆಲಸ ಮಾಡಲು ಶಿರಸಿಗೆ ನಗರಕ್ಕೆ ಬಂದು ಕಲ್ಕುಣಿ ರಸ್ತೆಯಲ್ಲಿ ಮಹಿಳೆಯೊಬ್ಬಳೊಂದಿಗೆ ಉಳಿದುಕೊಂಡಿದ್ದ. ಈ ಮಹಿಳೆಗೆ ಪುತ್ರಿ ಹಾಗೂ ಪುತ್ರರಿದ್ದಾರೆ. 2021ರ ಏ.7ರಂದು ರಂದು ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಮಹಿಳೆ ಪೇಟೆಗೆ ಹೋಗಿದ್ದು ಆಕೆಯ ಪುತ್ರ ಹಾಗೂ ಹೊರಗಡೆ ಆಟ ಆಡಲು ಹೋಗಿದ್ದ.
ಇದೇ ಸಮಯದಲ್ಲಿ ಮಹಿಳೆಯ ಪುತ್ರಿ ಒಬ್ಬಳೇ ಮನೆಯಲ್ಲಿ ಇರುವುದನ್ನು ಕಂಡು ಆರೋಪಿ ಅವಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಈ ವಿಷಯವನ್ನು ತಾಯಿಗೆ ಹೇಳಿದರೆ ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದ. ನಂತರದ ಕೆಲವು ದಿನಗಳಲ್ಲಿ ಮತ್ತೆ 2-3 ಬಾರಿ ಮಧ್ಯರಾತ್ರಿ ಫಿರ್ಯಾದಿಯ ಬಳಿ ಬಂದು ಬಾಗಿಲು ಹಾಕಿ ಬಲವಂತವಾಗಿ ಸಂಭೋಗ ಮಾಡಿದ್ದ ಎನ್ನಲಾಗಿದೆ.
ದೂರಿನ ಆಧಾರದ ಮೇಲೆ ಶಿರಸಿ ವೃತ್ತದ ಸಿಪಿಐ ರಾಮಚಂದ್ರ ನಾಯಕ ಅವರು ಕಾನೂನು ಕ್ರಮ ಜರುಗಿಸಿ ತನಿಖೆ ಜರುಗಿಸಿಅಂತಿಮ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಜೈಲು ಶಿಕ್ಷೆ ಹಾಗೂ 77,500 ರೂ.ದಂಡ ವಿಧಿಸಿ ತೀರ್ಪಿತ್ತಿದೆ.
ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಈ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸುಭಾಷ ಪಿ. ಕೈರನ್ನ ವಾದ ಮಂಡಿಸಿದ್ದರು.
ವಿಸ್ಮಯ ನ್ಯೂಸ್, ಶಿರಸಿ