Important
Trending

ನೌಕಾನೆಲೆಯಲ್ಲಿ ಉದ್ಯೋಗದ ಆಮಿಷ : ಹಣ ಪಡೆದು ವಂಚನೆ;  ಹೆಂಡತಿಯ ನೌಕರಿ ಕನಸು ಕಂಡವನಿಗೆ ಸ್ಥಳೀಯನಿಂದಲೇ ಪಂಗನಾಮ

5 ಲಕ್ಷ ರೂಪಾಯಿ ಹಣ ಪಡೆದು ಮೋಸ

ಅಂಕೋಲಾ: ಸೀ ಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಮೀನುಗಾರನೋರ್ವನಿಂದ 5 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿರುವ ಘಟನೆ ತಾಲೂಕಿನ ಹಾರವಾಡದ ಗಾಬೀತವಾಡದಲ್ಲಿ ನಡೆದಿದ್ದು ಹಣ ಮರಳಿ ಕೇಳಲು ಹೋದ ವ್ಯಕ್ತಿಗೆ ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಹಾರವಾಡ ನಿವಾಸಿ ಮನೋಜ ಕೃಷ್ಣಾನಂದ ಪೆಡ್ನೇಕರ್ (32) ಈತನೇ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪಿ.

Hit and Run Case | ಡಿಕ್ಕಿ ಹೊಡೆದು ಪರಾರಿಯಾದ ಗ್ಯಾಸ್ ಟ್ಯಾಂಕರ್ | ವ್ಯಕ್ತಿ ಸ್ಥಳದಲ್ಲಿಯೇ ಸಾವು

ಈತ ಹಾರವಾಡ ಗಾಬೀತವಾಡ ನಿವಾಸಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಗಿರೀಶ ನಾಮದೇವ ಸಾದಿಯೇ ಎಂಬಾತನಿಂದ ಆತನ ಹೆಂಡತಿ  ಅಕ್ಷತಾ ಎಂಬಾಕೆಗೆ ಅರ್ಗಾದ   ಸೀಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2021 ರ ಫೆಬ್ರವರಿ 21 ರಂದು 2 ಲಕ್ಷ ರೂಪಾಯಿ ಮತ್ತು ಏಪ್ರಿಲ್ 4 ರಂದು 3 ಲಕ್ಷ ಹೀಗೆ ಒಟ್ಟು 5 ಲಕ್ಷ ರೂಪಾಯಿ ನಗದು ಹಣ ಪಡೆದು ವಂಚನೆ ಮಾಡಿರುವುದಾಗಿ ಹೇಳಲಾಗಿದೆ. ತನ್ನ ಹೆಂಡತಿಗೆ ನೌಕರಿ ಸಿಗಬಹುದು ಎಂಬ ಆಸೆಯಿಂದ ಚಿನ್ನಾಭರಣ ಅಡವಿಟ್ಟು ಸಾಲ – ಶೂಲ ಮಾಡಿಕೊಂಡು ಹಣ ಕೊಟ್ಟು,  ಕೊನೆಗೆ ತಾನು ಮೋಸ ಹೋಗಿರುವುದಾಗಿ ತಿಳಿದ ಗಿರೀಶ್ ಸಾದಿಯೇ ಆರೋಪಿಯಿಂದ ಹಣ ಮರಳಿ ನೀಡುವಂತೆ ಬೇಡಿಕೆ ಇಟ್ಟಾಗ ಆರೋಪಿ ಮನೋಜ ಪೆಡ್ನೇಕರ್ ಅವಾಚ್ಯ ಶಬ್ದಗಳಿಂದ ಬಯ್ದು ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. 

ಉದ್ಯೋಗದ ಆಮಿಷ ಒಡ್ಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚಳ: ಇರಲಿ ಎಚ್ಚರ

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ  ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಜನರನ್ನು ನಂಬಿಸಿ ನಾನಾ ರೀತಿಯಲ್ಲಿ ಮೋಸ ಹಾಗೂ ವಂಚನೆ ಮಾಡುವವರು ಅನೇಕ ಕಡೆ ಕಂಡುಬರುತ್ತಿದ್ದು,ಕೆಲವರು ತಾವೇ ಅಧಿಕಾರಿಗಳೆಂದು ಹೇಳಿ ಪೋಸು ನೀಡಿದರೆ,ಇನ್ನು ಕೆಲವರು ತಮಗೆ ಅಧಿಕಾರಿಗಳ ಸಂಪರ್ಕ ಇದೆ ಎಂದು ಹೇಳಿ ನಂಬಿಸುತ್ತಾರೆ.ಅವರ ಮಾತಿಗೆ ಮರಳು ಬಿದ್ದು ಉದ್ಯೋಗದ ಆಸೆಯಿಂದ ಹಣಕೊಟ್ಟು ಕಳೆದುಕೊಂಡವರು ಹಲವರಿದ್ದು,ತಾವು ವಂಚನೆಗೊಳಗಾದದ್ದು ಗೊತ್ತಾದ ನಂತರ ಕೆಲವರು ಮಾತ್ರ ಪ್ರಕರಣ ದಾಖಲಿಸುತ್ತಾರೆ.

ಇನ್ನು ಕೆಲವರು ನಾನ ಕಾರಣಗಳಿಂದ ತಮ್ಮ ದುಡ್ಡು ಹೋದರೆ ಹೋಗಲಿ ಎಂದು ಮರ್ಯಾದೆಗೆ ಅಂಜಿ ಸುಮ್ಮನಿದ್ದು ಬಿಡುತ್ತಾರೆ.ಇಲ್ಲವೇ ಹಣಕೊಟ್ಟು ಲಂಚ ಉದ್ಯೋಗ ಪಡೆಯುವುದು ತಪ್ಪು ಎಂಬ ಕಾನೂನಿನ ನಿಯಮಾವಳಿಗೆ ಹೆದರಿ ಸುಮ್ಮನಿರುತ್ತಾರೆ ಎನ್ನಲಾಗಿದೆ.ಒಟ್ಟಿನಲ್ಲಿ ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಮಾತು ಸತ್ಯವಾಗುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button