Important
Trending

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಫಲಕೊಡದ ಬಿಜೆಪಿ-ಜೆಡಿಎಸ್ ಮೈತ್ರಿ: ಬಲಹೆಚ್ಚಿಸಿಕೊಂಡ ಕಾಂಗ್ರೆಸ್

ಕಾರವಾರ: ಉತ್ತರಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಳಿಕ ಹಲವು ಚರ್ಚೆಗಳು ಗರಿಗೇದರಿದೆ. ಈ ಸೋಲನ್ನು ಒಬ್ಬೊಬ್ಬರು ಒಂದೊoದು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ವಿಶೇಷವಾಗಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ, ಫಲಿಸಲಿಲ್ಲ ಎಂದೇ ಹೇಳಲಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಒಟ್ಟು 97 ಸಾವಿರದ 928 ಮತಗಳು ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ಗೆ 44 ಸಾವಿರದ 435 ಮತಗಳು ಬಿದ್ದಿವೆ.

ಕ್ಷೇತ್ರದಲ್ಲಿ ಫಲಕೊಡದ ಬಿಜೆಪಿ-ಜೆಡಿಎಸ್ ಮೈತ್ರಿ

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು 59 ಸಾವಿರದ 965 ಮತಗಳನ್ನು ಪಡೆದಿದ್ದರು. ಹಾಗು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ 59 ಸಾವಿರದ 289 ಮತಗಳನ್ನು ಗಳಿಸಿದ್ದರು. ಇವೆರಡನ್ನು ಸೇರಿಸಿದರೆ, 1 ಲಕ್ಷದ 19 ಸಾವಿರದ 254 ಮತಗಳು. ಆದ್ರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿದ್ದಿರುವ ಮತಗಳ ಸಂಖ್ಯೆ 97 ಸಾವಿರದ 928 ಮತಗಳು. ಅಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಸ್ ಅಭ್ಯರ್ಥಿಗಳು ಪಡೆದಿದ್ದ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದಿಲ್ಲ. ಸುಮಾರು 26 ಸಾವಿರ ಮತಗಳು ಈ ಬಾರಿಗೆ ಕಾಂಗ್ರೆಸ್ ಕಡೆ ವಾಲಿರುವುದು ಅಥವಾ ಬಿದ್ದಿರುವುದು ಅಂಕಿ-ಅoಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಕುಮಟಾದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ, ಫಲ ಕೊಡಲಿಲ್ಲ ಎಂದೇ ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳ ಸಂಖ್ಯೆ,, 19 ಸಾವಿರ 270. ಆದರೆ, ಈ ಬಾರಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪಡೆದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪಡೆದ ಮತಗಳ ಸಂಖ್ಯೆ 44 ಸಾವಿರದ 445. ಹೀಗಾಗಿ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ ವಿಧಾನಸಭೆಗಿಂತ ದುಪ್ಪಟ್ಟು ಓಟ್ ಪಡೆದಿದೆ. ಇದರರ್ಥ ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕಾಗೇರಿಗೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕ್ಷೇತ್ರದಲ್ಲಿ ನಿರೀಕ್ಷಿತ ಫಲಕೊಡಲಿಲ್ಲ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಕಾಂಗ್ರೆಸ್ ದುಪ್ಪಟ್ಟು ಮತಗಳನ್ನು ಪಡೆಯಲು ಸಫಲವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತಗಳ ಸಂಖ್ಯೆ ಕುಸಿಯುತ್ತಿದೆಯೇ? ಅಥವಾ ಬಿಜೆಪಿ ಸಂಘಟನೆ ಹಳ್ಳಹಿಡಿದಿಯೇ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಬಗ್ಗೆ ಬಿಜೆಪಿ ಶಾಸಕರು, ತಾಲೂಕಾಧ್ಯಕ್ಷರು, ಜೆಡಿಎಸ್ ಮುಖಂಡರು ಗಂಭೀರವಾಗಿ ಚರ್ಚಿಸಬೇಕಿದೆ.

ಸಚಿವರ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರೂಪಾಲಿ ನಾಯ್ಕ 75 ಸಾವಿರದ 307 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 1 ಲಕ್ಷದ 13 ಸಾವಿರ ಮತಗಳು ಬಂದಿವೆ. ಅಂದರೆ, 38 ಸಾವಿರ ಮತಗಳ ಹೆಚ್ಚಳವಾಗಿದೆ. ಹಾಲಿ ಶಾಸಕ ಸತೀಶ್ ಸೈಲ್ ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 77 ಸಾವಿರದ 445 ಮತಗಳು ಬಿದ್ದಿದ್ದವು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದ ಮತಗಳ ಸಂಖ್ಯೆ 47 ಸಾವಿರ.

ಇನ್ನು ಸಚಿವರು ಪ್ರತಿನಿಧಿಸುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪಷ್ಟವಾಗಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಂಕಾಳ್ ವೈದ್ಯ ಅವರು 1 ಲಕ್ಷದ 442 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿಯ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಂಜಲಿ ನಿಂಬಾಳ್ಕರ್ ಗೆ ಬಿದ್ದಿರುವ ಮತಗಳು 67 ಸಾವಿರ. ಕಳೆದ ಚುನಾವಣೆಯಲ್ಲಿ ಸುನೀಲ್ ನಾಯ್ಕ ಅವರು 67 ಸಾವಿರದ 771 ಮತಗಳನ್ನು ಗಳಿಸಿದ್ದರು. ಆದರೆ, ಈ ಬಾರಿ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button