ಅಂಕೋಲಾ: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಆತ್ಮೀಯತೆ ಬೆಳಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯೋರ್ವನ ಮೇಲೆ ನೊಂದ ಬಾಲಕಿಯ ಕುಟುಂಬದವರು ದೂರು ನೀಡಿದ್ದು , ಈ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ- ಹುಬ್ಬಳ್ಳಿ ಮಾರ್ಗ ಮಧ್ಯೆ ರಾ.ಹೆ. 63 ಕ್ಕೆ ಹೊಂದಿಕೊಂಡಿರುವ ಗ್ರಾಮವೊಂದರ ನಿವಾಸಿ ಅಜಿತ್ ಎಂಬಾತ ಈ ನೀಚ ಕೃತ್ಯ ಎಸಗಿದ ವ್ಯಕ್ತಿ ಎ೦ದು ಆರೋಪಿಸಲಾಗಿದೆ. ಖಾಸಗಿ ವಾಹನ ಚಾಲನಾ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿರುವ ಈತ, ಕಳೆದ ಒಂದೆರೆಡು ವರ್ಷಗಳಿಂದೀಚೆಗೆ ಮದುವೆಯಾಗಿ, ಪುಟ್ಟ ಮಗುವೊಂದರ ತಂದೆ ಆಗಿದ್ದರೂ ಸಹ , ತನ್ನ ಜವಾಬ್ದಾರಿ ಅರಿಯದೇ ಚಪಲ ಚನ್ನಿಗರಾಯನಂತೆ ತೀಟೆ ತೀರಿಸಿಕೊಳ್ಳಲು ಮುಗ್ದ ಬಾಲಕಿಯನ್ನು ಬಳಿಸಿಕೊಂಡ ಎಂಬ ಮಾತು ಸ್ಥಳೀಯರಿಂದ ಅಲ್ಲಲ್ಲಿ ಕೇಳಿ ಬಂದಂತಿದೆ.
ಬಾಲಕಿಯ ಜೊತೆ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಕಳೆದ ಕೆಲ ತಿಂಗಳುಗಳ ಹಿಂದೆ ಬಾಲಕಿಗೆ ತನ್ನ ತಾಯಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ, ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ, ಈ ವಿಷಯ ಮನೆಯವರಿಗೆ ತಿಳಿಸಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ದ್ದಲ್ಲದೇ, ತದ ನಂತರವೂ ಮತ್ತೆ ಮತ್ತೆ ಕೆಲ ಬಾರಿ ಬಲತ್ಕಾರದಿಂದ ಲೈಂಗಿಕ ಕ್ರಿಯೆ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ