Follow Us On

WhatsApp Group
Focus News
Trending

ಶಿಕ್ಷಕರೊಂದಿಗೆ ಸಂವಾದ ನಡೆಸಿದ ಹೊರಟ್ಟಿ: ವಿಧಾನ ಪರಿಷತ್ ಸಭಾಪತಿಗಳಿಗೆ ಆತ್ಮೀಯ ಸನ್ಮಾನ ಗೌರವ

ಅಂಕೋಲಾ: ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸಿದ ಫಲವಾಗಿ 7ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಲು ಸಾಧ್ಯವಾಯಿತು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗಳಿಗೆ ಶುಭ ಹಾರೈಸಿದ ವಿಧಾನ ಪರಿಷತ್ ಸಭಾಪತಿಗಳು ನಂತರ ಅಂಕೋಲಾಕ್ಕೆ ಬಂದು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಜೈಹಿಂದ್ ಪ್ರೌಢಶಾಲೆ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ, ಪಾಲ್ಗೊಂಡು ಮಾತನಾಡಿ, ಶಿಕ್ಷಕರು ದೂರವಾಣಿ ಮೂಲಕ ಇಲ್ಲವೇ ಪತ್ರದ ಮೂಲಕ ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಪರಿಹರಿಸಲು ಸಂಪೂರ್ಣ ಪ್ರಯತ್ನ ನಡೆಸುವುದಾಗಿ ಹೇಳಿದರು.

ಪಿಂಚಣಿ ಕುರಿತಾದ ನೌಕರರ ಸಮಸ್ಯೆಗಳಿಗೆ ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ ಎಂದ ಅವರು 20 ತಿಂಗಳು ಶಿಕ್ಷಣ ಸಚಿವನಾಗಿ ಕರ್ತವ್ಯ ನಿರ್ವಹಿಸಿದ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲಾಗಿದೆ. 1039 ಸರ್ಕಾರಿ ಪ್ರೌಢಶಾಲೆ, 500 ಪದವಿ ಪೂರ್ವ ಕಾಲೇಜುಗಳನ್ನು ತೆರೆಯಲಾಗಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ 1462 ಕೋಟಿ ಬಜೆಟ್ ಒದಗಿಸಲಾಗಿತ್ತು ಎಂದು ಹೊರಟ್ಟಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ್ ಮಾತನಾಡಿ, ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳು ಶಿಕ್ಷಣಾಧಿಕಾರಿ ಹಂತದಲ್ಲಿಯೇ ಬಗೆಹರಿಸಲು ಸಾಧ್ಯವಿದ್ದಲ್ಲಿ ಸದಾ ಸ್ಪಂದಿಸುವುದಾಗಿ ತಿಳಿದರು.

ಪ್ರಾಧ್ಯಾಪಕ ಎಸ್ ವಿ ವಸ್ತ್ರದ, ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗಿನ ಶೈಕ್ಷಣಿಕ ಸಮಸ್ಯೆಗಳನ್ನು ಸಭಾಪತಿಯವರಿಗೆ ಮನವರಿಕೆ ಮಾಡಿದರು. ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ, ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಸಂಘದ ಪದಾಧಿಕಾರಿ ಎಲ್ ಎಂ ಹೆಗಡೆ,ಗಣಪತಿ ನಾಯಕ, ಜೈಹಿಂದ್ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಪದ್ಮನಾಭ ಪ್ರಭು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಅಂಕೋಲಾ ಘಟಕದ ಅಧ್ಯಕ್ಷ ಗಣಪತಿ ಆರ್ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಣಪತಿ ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು, ಸಂಘದ ಉಪಾಧ್ಯಕ್ಷ ಮನೋಜ ಗುರವ ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ವತಿಯಿಂದ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ಅಂಕೋಲಾದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮಂಗಳ ಲಕ್ಷ್ಮಿ ಪಾಟೀಲ ಅವರ ಕಾರ್ಯವೈಖರಿ ಕುರಿತು ಹೊರಟ್ಟಿಯವರು ಪ್ರಶಂಸೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button