Big News
Trending

ಬಾತರೂಮನಲ್ಲಿದ್ದ ನೀರಿನ ಬಕೆಟ್ ನಲ್ಲಿ ಬಿದ್ದು ಕಂದ ಸಾವು: ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಮುದ್ದು ಪುಟಾಣಿ

ಅಂಕೋಲಾ: ಮನೆಯಲ್ಲಿ ಆಟ ಆಡುತ್ತಿದ್ದ ಪುಟ್ಟ ಕಂದನೊಬ್ಬ ಮನೆಯ ಬಾತರೂಮಿನಲ್ಲಿದ್ದ ನೀರಿನ ಬಕೆಟ್ ಒಳಗೆ ತಲೆಕೆಳಗಾಗಿ ಬಿದ್ದು ಮೃತ ಪಟ್ಟ ಹೃದಯವಿದ್ರಾವಕ ಘಟನೆ ಪಟ್ಟಣದ ರಥ ಬೀದಿಯ ಪಕ್ಕದ ಮನೆಯೊಂದರಲ್ಲಿ ನಡೆದಿದೆ.  ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿಗಳು ತಮ್ಮ ಕರಳು ಕುಡಿ ಕಳೆದು ಕೊಂಡು ಪುತ್ರಶೋಕದಿಂದ ರೋದಿಸುವಂತಾಗಿದೆ.

ಪಟ್ಟಣದ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ತಾಯಿ ಎಂದಿನಂತೆ ತನ್ನ ಕೆಲಸ ಮುಗಿಸಿ ಬಂದು ಮನೆಯಲ್ಲಿ ಬಟ್ಟೆ ತೊಳೆಯುತ್ತಿದ್ದ  ವೇಳೆ ,ಫೋನ್ ರಿಂಗಣಿಸಿದ ಸದ್ದು ಕೇಳಿ , ಫೋನ ಕರೆಗೆ ಉತ್ತರಿಸಲು ಬಾತರೂಂ ಬಿಟ್ಟು  ಫೋನ್ ಇಟ್ಟಿದ್ದ ಪಕ್ಕದ ಕೋಣೆಗೆ ತೆರಳಿದ್ದಳು ಎನ್ನಲಾಗಿದೆ.

ಅದೇ ಸಮಯದಲ್ಲಿ ತಾಯಿಯ ಗಮನಕ್ಕಿಲ್ಲದೇ ಪುಟಾಣಿ ಮಗು ತನ್ನ ತಾಯಿಯನ್ನು ಹುಡುಕಿಕೊಂಡು ಇಲ್ಲವೇ ಆಟ ಆಡುತ್ತ ಬಾತರೂಂಮಿಗೆ  ಹೋಗಿ , ಅಲ್ಲಿನ ನೀರಿನ ಬಕೆಟ್ ನಲ್ಲಿ ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.  ಮಗುವಿನ ತಾಯಿ ಫೋನ ಕರೆಯತ್ತ ಗಮನ ಹರಿಸಿದರೆ, ಮೊಮ್ಮಗ ತನ್ನ ತಾಯಿಯೊಂದಿಗೆ ಇರಬಹುದೆಂದು ತಿಳಿದು  ಆ ಮಗುವಿನ ಅಜ್ಜಿಯೂ ಮೊಮ್ಮಗನತ್ತ  ಹೆಚ್ಚಿನ ಲಕ್ಷ್ಯ ವಹಿಸಿರಲಿಕ್ಕಿಲ್ಲ ಎನ್ನಲಾಗಿದ್ದು, ಕ್ಷಣ ಹೊತ್ತಿನಲ್ಲೇ  ಅಜ್ಜಿ ಒಳ ಬಂದು  ನೋಡುವಷ್ಟರಲ್ಲಿ ದುರಂತ ನಡೆದು ಹೋಗಿತ್ತು ಎನ್ನಲಾಗಿದೆ.

ಮೊಮ್ಮಗ ನೀರಿದ್ದ ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದಿರಿವುದನ್ನು ಕಂಡು ಅಜ್ಜಿ ಅವಾಕ್ಕಾಗುವಂತೆ ಆಗಿದೆ. ಅನಾಹುತ ಗಮನಕ್ಕೆ ಬರುತ್ತಲೇ ಮಗುವಿನ ತಾಯಿ ಮತ್ತಿತರರು ಮಗುವನ್ನೆತ್ತಿಕೊಂಡು ತಾಲೂಕಾ ಆಸ್ಪತ್ರೆಗೆ ಕರೆತಂದರಾದರೂ , ಆಸ್ಪತ್ರೆಗೆ ತರುವ ಮುನ್ನವೇ ಮಗುವಿನ ಪ್ರಾಣಪಕ್ಷಿ  ಹಾರಿ ಹೋಗಿತ್ತು ಎನ್ನಲಾಗಿದ್ದು ಈ ಕುರಿತು ವೈದ್ಯರು ದೃಢಪಡಿಸಿದ್ದಾರೆ.ಜಿಲ್ಲೆಯ ಹೆಸರಾಂತ ಗುತ್ತಿಗೆದಾರರೋರ್ವರ ಬಳಿ ಮೇಲಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮಗುವಿನ ತಂದೆ  ತನ್ನ ಕೆಲಸ ಮುಗಿಸಿ ಮನೆಗೆ ಬಂದಾಗ ,ತನ್ನ ಮಗುವಿನ ಜೀವಕ್ಕೆ ಅಪಾಯವಾಗಿದೆ ಎಂಬ ಸುದ್ದಿ, ಮನೆ ಮಾಲೀಕರಿಂದ ಕೇಳಿ ತಿಳಿದು ಆಸ್ವತ್ರೆಯತ್ರ  ದುಃಖದ ಹೆಜ್ಜೆ ಇಡುವಂತಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಮುದ್ದು ಪುಟಾಣಿಯ ಪ್ರಥಮ ಹುಟ್ಟುಹಬ್ಬ ಆಚರಿಸಿ ಸಂತಸ ಹಂಚಿಕೊಂಡಿದ್ದ ಕುಟುಂಬ, ಕೆಲ ದಿನಗಳಲ್ಲಿಯೇ  ವಿಧಿಯ ಕ್ರೂರ ಆಟಕ್ಕೆ ಸಿಲುಕಿ ನಲುಗುವಂತಾಗಿದೆ.. ಪುತ್ರ ಶೋಕದಿಂದ ಶಾಕ್ ಆದಂತಿದ್ದ  ಹೆತ್ತ ತಾಯಿ ಅಸ್ವಸ್ಥಳಾಗಿ ಕುಸಿದು, ಬಹು ಹೊತ್ತು ಆಸ್ಪತ್ರೆಯಲ್ಲಿಯೇ ದಾಖಲಾಗುವಂತೆ ಮಾಡಿದೆ. ಕುಟುಂಬ ವರ್ಗದವರು, ಆಪ್ತರು ಸೇರಿ ನೂರಾರು ಜನ ಆಸ್ಪತ್ರೆಗೆ ಬಂದು ಸಾಂತ್ವನ ಹೇಳಿದರು.

ಉಸಿರು ಹಾರಿ ಹೋದರು, ಆಸ್ಪತ್ರೆಯ ಬೆಡ್ ಮೇಲೆ ಮಲಗಿದಂತೆ ಕಂಡು ಬರುವ ಮುದ್ದು ಪುಟಾಣಿಯನ್ನು ನೋಡಿದರೆ ಎಂಥವರ ಕರಳು ಚುರ್ರೆನ್ನದಿರದು. ಸಾಮಾಜಿಕ ಕಾರ್ಯಕರ್ತ ನಾಗರಾಜ ಐಗಳ, ಶಾಸಕಿ ರೂಪಾಲಿ ನಾಯ್ಕ ಕುಟುಂಬದ ಟ್ರಸ್ಟ್ ಮೂಲಕ ಕೊಡಮಾಡಿದ ಶೃದ್ಧಾಂಜಲಿ ವಾಹನದ ಮೂಲಕ ಮಗುವಿನ ಮೃತ ದೇಹವನ್ನು ಮೂಲಮನೆ ಕುಮಟಾಕ್ಕೆ ಸಾಗಿಸಿದರು. ಮಗುವಿನ ಕುಟುಂಬಸ್ಥರು, ಇತರರು ಸಹಕರಿಸಿದರು. ಈ ಹಿಂದೆಯೂ ತಾಲೂಕಿನಲ್ಲಿ ಇಂತಹ 1 – 2 ಪ್ರಕರಣಗಳು ಘಟಿಸಿದ್ದು,ಸಣ್ಣ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button