ಅಂಕೋಲಾ: ಕೇವಲ 6 ವಿದ್ಯಾರ್ಥಿನಿಯರಿಂದ ಆರಂಭವಾಗಿ ರಾಜ್ಯದಿಂದ ಬುಗಿಲೆದ್ದ ಹಿಜಾಬ್ ವಿವಾದ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಕಾರಣವಾಗಿತ್ತು. ಅದರ ಪರಿಣಾಮ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಹಿಜಾಬ್ ಪರ – ವಿರೋಧದ ವಾತಾವರಣ ಕಂಡುಬಂದಿತ್ತು.
ಈ ನಡುವೆ ಅಂಕೋಲಾ ತಾಲೂಕಿನಲ್ಲಿ ವಾತಾವರಣ ತಿಳಿಯಾಗಿಯೇ ಇತ್ತು. ಆದರೆ ಪಟ್ಟಣ ವ್ಯಾಪ್ತಿಯ ಪಿ.ಯು ಕಾಲೇಜ್ ಒಂದರಲ್ಲಿ ಸೋಮವಾರ 6 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗಲು ಮುಂದಾದಾಗ, ಶೈಕ್ಷಣಿಕ ಸಂಸ್ಥೆಯವರು ಅದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಹೈಕೋರ್ಟ್ ಮಧ್ಯಂತರ ಆದೇಶ ಇರುವುದರಿಂದ ಸಮವಸ್ತ್ರ ಧರಿಸಿಯೇ ತರಗತಿಗೆ ಬರುವುದು ಖಡ್ಡಾಯವಾಗಿದ್ದು, ಕಾನೂನು ಪಾಲಿಸಿ ತರಗತಿಗೆ ಹಾಜರಾಗುವಂತೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ತಿಳಿಹೇಳುವ ಪ್ರಯತ್ನ ಮಾಡಿದರೂ, ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಮನೆಗೆ ಮರಳುವಂತಾಯಿತು ಎನ್ನಲಾಗಿದೆ.
ಮನೆಗೆ ಮರಳಿದ ತಮ್ಮ ಮಕ್ಕಳಿಂದ ವಿಷಯ ಕೇಳಿ ತಿಳಿದ ಕೆಲ ವಿದ್ಯಾರ್ಥಿನಿಯರ ಪಾಲಕರು,ಮತ್ತಿತರರು ಈ ವಿಷಯದ ಕುರಿತು ಶಿಕ್ಷಣ ಸಂಸ್ಥೆ ಹಾಗೂ ಸಂಬಂಧಿಸಿದ ಇತರರಲ್ಲಿ ಪೋನ್ ಕರೆ ಮಾಡಿ ವಿಚಾರಿಸಿದ್ದಾರೆ ಎನ್ನಲಾಗಿದ್ದು,ಅವರಲ್ಲಿಯೇ ಕೆಲವರು ತಪ್ಪು ಕಲ್ಪನೆ ಇಲ್ಲವೇ ಉಡಾಫೆಯಿಂದ ಕೆಲ ವಿಷಯಗಳ ಕುರಿತು ವಾಗ್ವಾದ ಮಾಡಿದರು ಎನ್ನಲಾಗಿದೆ.
ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಹ ಕಾಲೇಜ ಬಳಿ ತೆರಳಿ ಪರಿಸ್ಥಿತಿ ಅವಲೋಕನ ನಡೆಸಿ, ವಿವಾದ ಭುಗಿಲೇಳದಂತೆ ಸಂಬಂಧಿಸಿದವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಾಲೂಕಿನ ವಿದ್ಯಾರ್ಥಿನಿಯರಿಂದ ನೇರವಾಗಿ ‘ಇದುವರೆಗೆ ಕಂಡು ಬರದಿದ್ದ ಹಿಜಾಬ್ ವಿಷಯ ಸೋಮವಾರ ಬೆಳಗ್ಗೆ ಸಣ್ಣಗೆ ಸದ್ದು ಮಾಡಿದ್ದು, ಶಾಂತಿ ಹಾಗೂ ಸೌಹಾರ್ದತೆಗೆ ಮಾದರಿಯಾಗಿರುವ ಅಂಕೋಲಾದಲ್ಲಿ ನಡೆದ ಈ ಘಟನೆಗೆ ಹಲವು ಪ್ರಜ್ಞಾವಂತರು ಖಂಡನೆ ವ್ಯಕ್ತಪಡಿಸಿದ್ದು,ಶಿಕ್ಷಣ ಕಲಿಯಬೇಕಾದ ವಿದ್ಯಾರ್ಥಿಗಳು,ಮತ್ತು ಅವರನ್ನು ಬಳಸಿಕೊಂಡು ಕುತಂತ್ರ ಹೂಡುವ ಕೆಲವರ ಬೇಜವಾಬ್ದಾರಿ ನಡೆ – ನುಡಿಗಳು, ಯುವ ಜನಾಂಗವನ್ನು ಹಾದಿ ತಪ್ಪಿಸುತ್ತಿದ್ದು, ಅದಕ್ಕೆ ಯಾರೂ ಪ್ರಚೋದನೆಗೊಳಗಾಗಬಾರದು ಎನ್ನುವ ಹಿತನುಡಿ ಹೇಳುತ್ತಿದ್ದಾರೆ.
ಮತ್ತೆ 1-2 ಕಾಲೇಜುಗಳಲ್ಲಿಯೂ ಇದೇ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ತಾಲೂಕಾಡಳಿತ, ಪೋಲೀಸ್ ಇಲಾಖೆ, ಸಂಭಧಿತ ಶಿಕ್ಷಣ ಇಲಾಖೆ ಹಾಗೂ ಕಾಲೇಜುಗಳು ಶಾಂತಿ- ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿ, ಸಣ್ಣದಾಗಿ ಬೀಸುತ್ತಿರುವ ಈ ವಿವಾದದ ಹೊಗೆಯನ್ನು ಈಗಲೇ ನಂದಿಸಿ, ಬೆಂಕಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಹಾಗೂ ಧರ್ಮ ಬೇಧವಿಲ್ಲದೇ ಎಲ್ಲರೂ ಶಿಕ್ಷಣ ನೀತಿಯನ್ನು ಕಡ್ಡಾಯವಾಗಿ ಪಾಲಿಸಿ,ಯಾವುದೇ ವಿವಾದಕ್ಕೆ ಆಸ್ಪದವಿಲ್ಲದಂತೆ ತಮ್ಮ ಜವಾಬ್ದಾರಿ ತೋರ್ಪಡಿಸಬೇಕೆನ್ನುವುದು ತಾಲೂಕಿನ ಪ್ರಜ್ಞಾವಂತ ಹಾಗೂ ಶಾಂತಿಪ್ರಿಯರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ