Big News
Trending

ಮಾಸ್ಕೇರಿ ಎಂಬ ಭಾವ ಮಾಂತ್ರಿಕನ ಒಂದು ಕವಿತೆಯ ಸುತ್ತ

ಕೆಲಸದ ಬಹು ಒತ್ತಡ ವೈಯಕ್ತಿಕ ಸಮಸ್ಯೆಗಳು ಇವೆಲ್ಲವುಗಳ ನಡುವೆ ಬಹು ಸಮಯದ ನಂತರ ನನ್ನ ಸೆಳೆದ ಒಂದು ಕವನ ಸಂಕಲನ ” ಒಂದು ಕವಿತೆಯ ಸುತ್ತ” ಇದು ಮಾಸ್ಕೇರಿ ಎಂ. ಕೆ.ನಾಯಕ ಅವರ ಆಯ್ದ ಭಾವಗೀತೆಗಳ ಸಂಕಲನ.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಸಹೃದಯಿ ಕವಿಗಳ ಸಾಲಲ್ಲಿ ಬೆರಳೆಣಿಕೆಯವರಾಗಿ ನಿಲ್ಲಬಲ್ಲವರಲ್ಲಿ ಒಬ್ಬರಾದ ಮಾಸ್ಕೇರಿ ಎಂ. ಕೆ.ನಾಯಕ ಅವರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ನಾಡು ಮಾಸ್ಕೇರಿಯವರು. ಕರಾವಳಿಯಲ್ಲಿ ಹುಟ್ಟಿ ಬೆಳೆದ ಇವರು ಇಂದು ದಟ್ಟ ಅರಣ್ಯದಿಂದ ಕೂಡಿದ ದಾಂಡೇಲಿಯ ಸುಂದರ ಪರಿಸರದಲ್ಲಿ ಬದುಕು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.ಕವಿ,ನಾಟಕಕಾರ ಸಾಂಸ್ಕೃತಿಕ ಹರಿಕಾರ,ಚಿಂತಕ, ಗಟ್ಟಿ ಸಂಘಟಕರಾದ ಮಾಸ್ಕೇರಿಯವರು ಮ‌ೂಲತಃ ಸಹೃದಯಿ ಕವಿ. ಎದ್ದು ಬಿದ್ದು ಹೆಸರು ಪ್ರಶಸ್ತಿ ಹುದ್ದೆ ಅಧಿಕಾರಕ್ಕಾಗಿ ತಮ್ಮನ್ನೇ ತಾವು ಮರೆತವರ ನಡುವೆ ಕಾವ್ಯ ಲೋಕದ ಬಹುದೊಡ್ಡ ಕಾಡಲ್ಲಿ ಇಂದಿಗೂ ತಾವು ಮರೆಯಲ್ಲೇ ಇರಲು ಬಯಸಿದವರು.  ಕಾವ್ಯದ ಮೌನ ಕ್ರಾಂತಿಯಿಂದಾಗಿ ತಾವಾಗಿಯೇ ಬೆಳಗಿದವರು. ಜೊತೆಜೊತೆಗೆ  ಸುತ್ತಲೂ ಬೆಳಕು ನೀಡಿದವರು. ಸಾಹಿತ್ಯವಲಯದಲ್ಲಿ ಸಹೃದಯತೆ ವಿರಳ ಎಂದೆನಿಸಿದೆ ಹಲವು ಬಾರಿ ನನಗೆ. ಆದರೆ ಮಾಸ್ಕೇರಿಯವರು ಈ ಅಪವಾದದಿಂದ ಮುಕ್ತರಾದವರು ಎನ್ನುವುದು ಎಲ್ಲರಿಗೂ ತಿಳಿದ ಸತ್ಯ ವಿಚಾರ.

ಈ ವಯಸ್ಸಿನಲ್ಲಿಯೂ ಅವರಲ್ಲಿನ ಅದಮ್ಯ ಚೈತನ್ಯ ಪಾರದರ್ಶಕ ವ್ಯಕ್ತಿತ್ವ, ಒಳಗು- ಹೊರಗು, ಹಿರಿದು- ಕಿರಿದು, ಉಳ್ಳವ -ಇಲ್ಲದವ ಎಂದು ಭೇದವೆಣಿಸದ ಮಗುವಂತ ಮನಸ್ಸು ಕಂಡಾಗ  ಸಮಾನ  ಹಾಗೂ ಶ್ರಮ ಸಂಸ್ಕೃತಿಯ ಆರಾಧಕರಾಗಿ ನಮಗವರು ಕಾಣಸಿಗುತ್ತಾರೆ.  ಪ್ರಗತಿಪರರೆಂದು ಹೇಳಿಕೊಂಡು ಸಮಾಜದ ಪ್ರಗತಿಗೆ,ಸಂಸ್ಕೃತಿಗೆ ಕಂಟಕರೇ ಆಗಿರುವ ಹಲವರ ನಡುವೆ ಸಾಹಿತ್ಯಕವಾಗಿ ತಮ್ಮನ್ನು ಯಾವುದೇ ಪಂಥ ಧೋರಣೆಗಳಲ್ಲಿ, ಚಳುವಳಿಗಳಲ್ಲಿ ಗುರುತಿಸಿಕೊಳ್ಳದೇ  ಮನುಷ್ಯ ಪ್ರೀತಿಯನ್ನೇ ತುಂಬಿಕೊಂಡು ಸಾಮಾನ್ಯರಲ್ಲಿ ತಾನೊಬ್ಬ ಸಾಮಾನ್ಯ ಎಂದು ಮಾನವೀಯ ಗುಣಗಳನ್ನೇ ಹಂಚುತ್ತಾ ಬಂದವರು ಮಾಸ್ಕೇರಿಯವರು. ಸಾಹಿತ್ಯ ಎನ್ನುವುದು ದೇವರ ಕಾರ್ಯವೇ ಎನ್ನುವಂತೆ ಬದುಕುತ್ತಿರುವ ನೇರ ನುಡಿಯ ಪ್ರೀತಿ, ವಾತ್ಸಲ್ಯ ಉತ್ಸಾಹದ ಅದಮ್ಯ ಶಕ್ತಿಯಂತಿರುವ ಎಂ.ಕೆ.ನಾಯಕರು ನನ್ನಂಥ ಅನೇಕ ಯುವಕರಿಗೆ ಪ್ರೇರಣೆ ಹಾಗೂ ಆದರಣೀಯ ಹಾಗೂ ಅನುಸರಣೀಯ ಯೋಗ್ಯರಾದವರು.ಇನ್ನೂ ಅವರ ಕವಿತೆಗಳನ್ನು ಓದುತ್ತಾ ಹೋದಂತೆ ನನಗನ್ನಿಸಿದ್ದು   ಇವರ ಪ್ರತಿ ಕವಿತೆಯು ಮೆದುಳಿಗಿಂತ ಎದೆಗೇ ಹೆಚ್ಚು ಆಪ್ತವಾಗುತ್ತವೆ. ಅರ್ಥವಾಗದಂತಹ ಯಾವೊಂದು ಪದಗಳೂ ಇಲ್ಲ. ಸಹಜವಾದ ಶುದ್ಧ ಭಾಷೆ. ಎಲ್ಲವೂ ಅರಳು ಹುರಿದಂತೆ ಸುಲಲಿತ.ಕಾರಣ ಇಷ್ಟೇ ಬರೆಯಲೇ ಬೇಕೆಂದು ಬರೆದ ಯಾವ ಕವಿತೆಗಳು ನನಗೆ ಕಾಣಲೇ ಇಲ್ಲ.

ಎಲ್ಲವೂ ಅದಾಗಿಯೇ ಬಂದಂಥ ಕವಿತೆಗಳಿರಬೇಕು ಎಂದೆನಿಸಿತು. ಅವರ ಒಡನಾಟ ಹತ್ತಿರದಿಂದ ಬಲ್ಲ ನನಗೆ  ಪುಸ್ತಕದ ಕವಿತೆಗಳು ಅವರ ವ್ಯಕ್ತಿತ್ವ ಬಿಂಬದಂತೆ ಕಂಡವು.   ಬದುಕನ್ನು ಸಹಜವಾಗಿ ಆಡಂಬರವಿಲ್ಲದೇ ಪ್ರೀತಿಸುವ ನಾಯಕರು ತಮ್ಮ ಕವಿತೆಗಳಲ್ಲೂ ಪ್ರೀತಿಯನ್ನೇ ತುಂಬಿದ್ದಾರೆ. ಅಂತರಂಗದಲ್ಲಿ ಪ್ರೀತಿಯನ್ನೇ ತುಂಬಿಕೊಂಡ ಈ ಕವಿ ಆಂತರ್ಯದಲ್ಲಿರುವುದನ್ನೇ ಚಾಚೂ ತಪ್ಪದೇ ಓದುಗನಿಗೆ ನೀಡಿದ್ದಾರೆ. ಭಾವಗೀತೆಯನ್ನು ಅತಿಯಾಗಿ ಹಚ್ಚಿಕೊಂಡ  ನೆಚ್ಚಿಕೊಂಡ ಈ ಕವಿಯು ಭಕ್ತಿಗೀತೆಯನ್ನು ಬರೆದರೂ ಅಲ್ಲೊಂದು ಹೃದಯದ ಸ್ಪಂದನವಿರುತ್ತದೆ .ಭಾವದ ಮಿಡಿತವಿರುತ್ತದೆ.ಅವರ ಒಂದೆರಡು ಕವಿತೆಯ ಸಾಲುಗಳನ್ನು ನಾನು ಇಲ್ಲಿ ನೆನೆಯ ಬಯಸುತ್ತೇನೆ.

ಯಾಕೋ ಯಾರೋ ಹಚ್ಚಿದ ಕಿಚ್ಚುನನ್ನ ಎದೆಯ ಸುಡುತಲಿಹುದುಬೆಂದು ಹೋಗುವ ಮುನ್ನ ನೀರು ಹನಿಸಿ ಉಳಿಸೆ ಕಣ್ಣು ತೆರೆದು

ಇಲ್ಲಿ ಕವಿಯ ಭಾವ ತೀವ್ರತೆ ಇದೆ. ಕವಿಯ ಮನದ ಹೇಳದೆ ಉಳಿದ ನೋವು  ಕವಿತೆಯಾಗಿ ಹೊರಹೊಮ್ಮಿರುವುದನ್ನು ಇಲ್ಲಿ ನೋಡಬಹುದಾಗಿದೆ. ಈ ನೋವಿನಿಂದ ಸಾಂತ್ವನವನ್ನಾದರೂ ನೀಡಬಲ್ಲೆಯ ಎಂದು ಕವಿ ಭರವಸೆಗಾಗಿ ಹಂಬಲಿಸುತ್ತಾನೆ.

ಹೃದಯ ಸಿರಿಗೆ ಸರಿದೂಗದುಸ್ವರ್ಗವು ಸಹೃದಯಿಅರಿತವರಿಗೆ ಅರಿವಾಗದೆಬಿಡೆ ಯಾರಿಗೂ ಬಾಯಿ
ಪ್ರೀತಿಯನ್ನೇ ಜೀವನದುದ್ದದ್ಕೂ ಉಣಬಡಿಸಿದ ಕವಿ ಈ ಪ್ರೀತಿಗಿಂತ ಜಗದಲ್ಲಿ ಯಾವುದೂ ಶೇಷ್ಠವಾದುದಲ್ಲ ಎನ್ನುವುದನ್ನು ಸಾಲುಗಳಲ್ಲಿ ತಿಳಿಯಪಡಿಸಿದ್ದಾನೆ.

ಕಾಲ ಕೈಯೊಳಗಿರದು ಕರುಣೆ ಕಾಲನಿಗೂ ಇರದುಬಲ್ಲವರ ನುಡಿಮುತ್ತು ಹಾಲಿ ಖಾಲಿಇಲ್ಲವನೆನ್ನು ಏನೂ ಉಸಿರಿದ್ದು ನನ್ನ ಬಳಿಮೇಲೆ ಮೂಡಿದೆ ಭಯ ಹರಗೆಡಲು ಬೆಳ್ಳಿ
ಇಲ್ಲಿ ಕವಿ ತಾತ್ವಿಕವಾಗಿ ಅನುಭಾವಿಯಾಗಿ ಕವಿತೆಯ ಹುಟ್ಟಿಗೆ ಕಾರಣವಾಗಿದ್ದಾನೆ. ಎಲ್ಲವೂ ನಿಯಮದಂತೆ ಎನ್ನುವ ಮೂಲಕ ತಟಸ್ಥನಾಗುತ್ತಾನೆ.


ಹೀಗೆ ಸಾವಿರಾರು ಭಾವಗೀತೆಗಳು, ಭಕ್ತಿ ಪ್ರಧಾನ ಗೀತೆಗಳನ್ನು ಬರೆದ ಈ ಕವಿಯ ಗೀತೆಗಳು ನಾಡಿನ ಹೆಸರಾಂತ ಗಾಯಕರಾದ ದಿವಂಗತ ಜಿ.ವಿ.ಅತ್ರಿ, ಪುತ್ತೂರು ನರಸಿಂಹ ನಾಯಕ್, ರತ್ನಮಾಲಾ ಪ್ರಕಾಶ ಮೊದಲಾದವರ ಕಂಠಸಿರಿಯಲ್ಲಿ ಹತ್ತಾರು ಧ್ವನಿಸುರುಳಿಗಳ ಮೂಲಕ ನಾಡಿನ ಸಹೃದಯಿ ಸಂಗೀತ ಸಾಹಿತ್ಯ ಪ್ರೇಮಿಗಳ ಮನ ತಣಿಸಿವೆ.  ಮಾಸ್ಕೇರಿ ಸಾಹಿತ್ಯ ಆರಾಧನಾ ವೇದಿಕೆಯ ಮೂಲಕ ಮರೆಯಲ್ಲೇ ಉಳಿದ  ಸಾವಿರಾರು ಪ್ರತಿಭೆಗಳ ಮೇಲೆ ಪ್ರೋತ್ಸಾಹದ ಅವಕಾಶದ ಬೆಳಕು ನೀಡಿದ ಮಹಾ ಶ್ರೇಯಸ್ಸು ಈ ಭಾವಗೀತೆ ಕವಿಗೆ ಸಲ್ಲುತ್ತದೆ. ಭಾರತಿ ಪ್ರಕಾಶನದ ಮೂಲಕ ಯುವ ಪ್ರತಿಭಾವಂತ ಅನೇಕ ಪುಸ್ತಕಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಕಟಿಸಿ ಕೊಟ್ಟವರು ಇವರು. ಕಾವ್ಯವೇ ಜೀವಾಳವಾದರೂ ಅನೇಕ ನಾಟಕಗಳನ್ನು ಬರೆದು ರಂಗದ ಮೇಲೆ ಪ್ರಯೋಗಿಸಿದ ರಂಗಕರ್ಮಿ ಎಂದರೂ ತಪ್ಪಾಗಲಾರದು.ಕರಿಕಂಬಳಿ ನಾಟಕದ ಮೂಲಕ ನಾಟಕಕಾರರಾಗಿಯೂ ಮನೆ ಮಾತಾದವರು ಮಾಸ್ಕೇರಿಯವರು. ಇದುವರೆಗೂ ನೂರಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಮಾನವೀಯ ಮೌಲ್ಯದ ಸಾಹಿತ್ಯ ಜಂಗಮರೂ ಹೌದು.ಬೆಳೆಯುವುದಕ್ಕಿಂತ ಬೆಳೆಸುವುದರಲ್ಲಿಯೇ ಹೆಚ್ಚು ತೃಪ್ತಿ ಕಂಡುಕೊಂಡ ಸದಾ ಒಳಿತನ್ನೇ ತುಂಬಿಕೊಂಡು ಒಳಿತನ್ನೇ ಹಾರೈಸುವ ಹಮ್ಮಿಲ್ಲದ ಹಪಾಹಪಿತನವಿಲ್ಲದ ಈ ಭಾವಗೀತೆಯ ಕವಿಗೆ ನಾಡಿನ ಎಲ್ಲ  ಗೌರವಗಳು ಪ್ರಾಪ್ತವಾಗುವುದರಲ್ಲಿ ಸಾಹಿತ್ಯ ಕ್ಷೇತ್ರದ ಸ್ವಾಸ್ಥ್ಯ ಅಡಗಿದೆ ಎನ್ನುವ ಅಭಿಪ್ರಾಯದೊಂದಿಗೆ ಆ ಎಲ್ಲ ಗೌರವಗಳು ಅವರನ್ನು ಅರಸಿ ಬರಲಿ ಎಂದು ಬಯಸುತ್ತೇನೆ.

ಲೇಖನ- ಉಮೇಶ ಮುಂಡಳ್ಳಿ ಭಟ್ಕಳ

Back to top button