ಹೊನ್ನಾವರ: ವಿದ್ಯಾರ್ಥಿಗಳು ಸಕಾರಾತ್ಮಕ ಹಾಗೂ ದೃಢ ಸಂಕಲ್ಪದ ಮನೋಭಾವ ಹೊಂದಿರಬೇಕು.ಹಾಗಿದ್ದಾಗ ಮಾತ್ರ ಉನ್ನತ ಗುರಿ ಸಾಧನೆ ಸಾಧ್ಯ ಎಂದು ರೋಟರಿ ಕ್ಲಬ್ ಹೊನ್ನಾವರದ ಕಾರ್ಯದರ್ಶಿಯಾದ ಮಹೇಶ್ ಕಲ್ಯಾಣಪುರ ಅವರು ಹೇಳಿದರು.ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಹೊನ್ನಾವರ ಹಾಗೂ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ಅವರ ಸಹಯೋಗದಲ್ಲಿ ನಡೆದ ‘ವೃತ್ತಿ ಮಾರ್ಗದರ್ಶನ-2022’ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು,ಹೇಗೆ ಬುದ್ಧಿವಂತಿಕೆ,ತೂಕ,ವೇಗ ಎಲ್ಲಾ ವಿಭಾಗದಲ್ಲಿಯೂ ಬೇರೆ ಪ್ರಾಣಿಗಳ ಹೆಸರೇ ಕೇಳಿಬಂದರೂ ತನ್ನ ಮನೋಭಾವದಿಂದ ಸಿಂಹ ಕಾಡಿನ ರಾಜ ಎನಿಸಿಕೊಂಡಿದೆಯೋ ಅಂತಹ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಒಂದೂವರೆ ಗಂಟೆಗಳ ಕಾಲ SSLC ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದ ರೋಟರಿ ಸದಸ್ಯರೂ ಆದ ಡಾ.ಎ.ಎಸ್.ಶಾಸ್ತ್ರಿ ಅವರು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ತಾವೇ ಗುರುತಿಸಿಕೊಂಡರೆ ಭವಿಷ್ಯದ ವೃತ್ತಿಯ ಆಯ್ಕೆ ಸುಲಭವಾಗುತ್ತದೆ ಎಂದರು.ವ್ಯಾಸ ನಿರ್ದೇಶಕರಾದ ಗಣೇಶ ಅಡಿಗ ಅವರು ರೋಟರಿ ಹಾಗೂ ವ್ಯಾಸ ಸಹಯೋಗದಲ್ಲಿ ನಡೆದ ‘ವೃತ್ತಿ ಮಾರ್ಗದರ್ಶನ-2022’ ಕಾರ್ಯಕ್ರಮವನ್ನು ಒಟ್ಟು 9 ಶಾಲೆಗಳಲ್ಲಿ ನಡೆಸಿದ್ದು ಒಟ್ಟೂ 692 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ,ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ನಿರಂಜನ್ ಅವರೂ ಭಾಗವಹಿಸಿದ್ದರು ಎಂದು ವರದಿ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಲ್.ಎಂ.ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಮುಕ್ತಾ ನಾಯ್ಕ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಶ್ರೀಕಾಂತ್ ಹಿಟ್ನಳ್ಳಿ ಅವರು ವಂದಿಸಿದರು.
ವಿಸ್ಮಯ ನ್ಯೂಸ್, ಹೊನ್ನಾವರ