Important
Trending

ಬಾರ್ & ರೆಸ್ಟೋರೆಂಟ್ ಕಳ್ಳತನ ಪ್ರಕರಣ ಬೇಧಿಸಿದ ಪೋಲೀಸರು| 3 ನೇಪಾಳಿಗರ ಸೆರೆ-3 ಲಕ್ಷ ನಗದು ವಶ| ತಲೆಮರೆಸಿಕೊಂಡ ಇತರೆ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು

ಅಂಕೋಲಾ: ಜಿಲ್ಲೆಯ ಅಂಕೋಲಾ ಹಾಗೂ ಹಳಿಯಾಳದಲ್ಲಿ ಇತ್ತೀಚೆಗೆ ನಡೆದಿದ್ದ ಬಾರ್ ಮತ್ತು ಹೋಟೆಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇಪಾಳ ಮೂಲದ 3 ಆರೋಪಿಗಳನ್ನು ಬಂಧಿಸಿ, ಅವರಿಂದ 3 ಲಕ್ಷ ರೂ ನಗದು ವಶಪಡಿಸಿಕೊಂಡಿರುವ ಅಂಕೋಲಾ ಪೊಲೀಸರು, ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.

ರಾ.ಹೆ.66 ರ ಅಂಚಿಗಿರುವ ಪಿಕಾಕ್ ಬಾರ್ & ರೆಸ್ಟೋರೆಂಟ್ ನಿಂದ ಲಕ್ಷಾಂತರ ರೂ ನಗದು ಮತ್ತು ಕೆಲ ಪ್ರಮಾಣದ ಮದ್ಯದ ಬಾಕ್ಸ್ ಕಳುವಾಗಿರುವ ಘಟನೆ ಮಾರ್ಚ್ ಪ್ರಾರಂಭದ ದಿನ ಮಂಗಳವಾರ (ತಡರಾತ್ರಿ)ಅಂಕೋಲಾದಲ್ಲಿ ನಡೆದಿತ್ತು.

ರಾತ್ರಿ ಎಂದಿನಂತೆ ವ್ಯವಹಾರ ಮುಗಿಸಿ, ಬಾರ್ ಬಂದ್ ಮಾಡಿ ಅಲ್ಲಿಯ ಸಿಬ್ಬಂದಿಗಳು, ಮೇಲ್ಮಹಡಿಯ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ವೇಳೆ. ರಾತ್ರಿ 2 ಗಂಟೆ ಸುಮಾರಿಗೆ ಬಾರ್ ನ ಹಿಂಬದಿ ಅಡುಗೆ ಕೋಣೆಯಂತಿರುವ ಶೆಡ್ ನ ಜಾಳಿಗೆ ಸರಿಸಿ ಒಳ ನುಸುಳಿದ ಕಳ್ಳರು, ಅಷ್ಟೇನೂ ಭಧ್ರವಾಗಿರದ ಇನ್ನೊಂದು ರೂಮಿನ ಬಾಗಿಲು ಚಿಲಕ ಮುರಿದು ಒಳನುಗ್ಗಿದ್ದರು ಎನ್ನಲಾಗಿದೆ.

ನಂತರ ಸ್ಟೋರ್ ರೂಮಿಗೆ ಪ್ರವೇಶಿಸಿದ್ದಲ್ಲದೇ, ಬಿಯರ್ ಹಾಗೂ ಕೆಲ ಮದ್ಯದ ಬಾಟಲಗಳನ್ನು ತೆಗೆದುಕೊಂಡು, ಆ ಬಳಿಕ ಕ್ಯಾಶ್ ಕೌಂಟರ್ ಬಳಿ ಬಂದು ಗಲ್ಲಾ ಪೆಟ್ಟಿಗೆ, ಅಕ್ಕ-ಪಕ್ಕ ಹುಡುಕಾಡಿ ಲಕ್ಷಾಂತರ ರೂಪಾಯಿ ನಗದನ್ನು ಕದ್ದೊಯ್ದಿದ್ದರು.

ಈ ಎಲ್ಲ ಘಟನಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರ ಪತ್ತೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ‘,ಪೊಲೀಸ್ ಇಲಾಖೆ, ಕೆಲ ಮಹತ್ವದ ಸುಳಿವನ್ನಾಧರಿಸಿ ಕಳ್ಳರ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜಿಲ್ಲೆಯ ಹಳಿಯಾಳದಲ್ಲಿ ನಡೆದ ಇಂತಹುದೇ ಕಳ್ಳತನದ ಪ್ರಕರಣಗಳು ಬಯಲಿಗೆ ಬಂದಿದೆ.

ಬಂಧಿತ ಆರೋಪಿಗಳು ನೇಪಾಳ ಮೂಲದವರಾಗಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಕೆಲಸ ಮಾಡಿಕೊಂಡು ವಾಸವಾಗಿದ್ದರು ನೇಪಾಳ ಶೆಟಗಾವ್ ಲಡಗಡಾ ನಿವಾಸಿಗಳಾದ ಹಾಲಿ ಹಳಿಯಾಳ ದೇಶಪಾಂಡೆ ಚಾಳ್ ನಿವಾಸಿ ವಾಚ್ಮನ್ ಕೆಲಸ ಮಾಡಿಕೊಂಡಿದ್ದ ಜಯಸಿಂಗ್ ರಾಮ್ ಸಿಂಗ್ ಛೇತ್ರಿ(40), ಕಾರವಾರ ಲಕ್ಕಿ ಹೊಟೇಲ್ ಕುಕ್ ಕೆಲಸದಲ್ಲಿದ್ದ ಪ್ರಕಾಶ ಬಹದ್ದೂರ್ ಸೌದ್ (31), ಕಾರವಾರ ವೆಲಕಮ್ ಡೈನ್ ಹೊಟೇಲ್ ಕ್ಯಾಶೀಯರ್ ಕೆಲಸ ಮಾಡಿಕೊಂಡಿದ್ದ ಶ್ಯಾಮ ಬಹಾದ್ದೂರ್ ಸೌದ್(21) ಬಂದಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಸಹಚರರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು , ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಉಪ ನಿರೀಕ್ಷಕರುಗಳಾದ ಪ್ರವಿಣಕುಮಾರ್, ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಪರಮೇಶ್, ಭಗವಾನ್ ಗಾಂವಕರ್ ರೋಹಿದಾಸ ದೇವಾಡಿಗ, ಆರ್. ಕೆ.ಆಸೀಫ್, ಶ್ರೀಕಾಂತ. ಕೆ, ಸುಧೀರ ಮಡಿವಾಳ, ರಮೇಶ ನಾಯಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಅಂಕೋಲಾ ಪೊಲೀಸರ ಕಾರ್ಯಾಚರಣೆ ಕುರಿತು ನಾಗರಿಕ ವಲಯದಿಂದಲೂ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button