Follow Us On

WhatsApp Group
Important
Trending

ಹೊನ್ನಾವರ ಜಾತ್ರೆ: ಅನ್ಯಧರ್ಮದವರಿಗೆ ಅಂಗಡಿ ಇಡಲು ಅವಕಾಶ ಇದ್ಯಾ? ಇಲ್ಲವಾ? ವಿಶೇಷ ಸರ್ವ ಸಾಧಾರಣ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಏನು?

ಹೊನ್ನಾವರ: ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಎಪ್ರಿಲ್ 10 ರಂದು ರಾಮನವಮಿ ಜಾತ್ರೆಯ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ತಾತ್ಕಾಲಿಕ ಡೇರೆ ಅಂಗಡಿಗಳ ಹರಾಜನ್ನು ಈ ಹಿಂದಿನoತೆಯೇ ನಡೆಸಲು ಶುಕ್ರವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ವಿಶೇಷ ಸರ್ವ ಸಾಧಾರಣ ಸಭೆಯಲ್ಲಿ ನಿರ್ಧರಿಸಲಾಗಿದೆ. ಹರಾಜು ನಡೆಸುವ ಕುರಿತು ಚರ್ಚೆ ನಡೆದು, ಅಂತಿಮವಾಗಿ ಅಧ್ಯಕ್ಷ ಶಿವರಾಜ ಮೇಸ್ತ ಈ ಹಿಂದಿನoತೆಯೇ ಈ ಸಲವೂ ನಡೆಸಲು ತೀರ್ಮಾನ ಪ್ರಕಟಿಸಿದರು.

ಸಭೆಯ ಆರಂಭದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದರ್ಮಾದಾಯ ದತ್ತಿಗಳ ನಿಯಮಗಳು-2002 ರ ಪ್ರತಿಯನ್ನು ಸದಸ್ಯರಿಗೆ ವಿತರಿಸಲಾಯಿತು. ಪಟ್ಟಣ ಪಂಚಾಯಿತಿಯ ಜಾಗದಲ್ಲಿ ಹರಾಜು ಮಾಡುವಾಗ ಹಿಂದುಯೇತರರಿಗೆ ನೀಡಬಾರದೆಂಬ ನಿಯಮ ಕಾನೂನಿನ ನಿರ್ಬಂಧದದಲ್ಲಿ ಬರುವುದಿಲ್ಲ ಎಂದು ಕಾನೂನು ಸಲಹೆಯ ವರದಿಯನ್ನು ಓದಲಾಯಿತು. ಪಟ್ಟಣ ಪಂಚಾಯತ ಸದಸ್ಯ ವಿಜಯ ಕಾಮತ ಮಾತನಾಡಿ ಜಾತ್ರೆ ನಡೆಯುವ ಸ್ಥಳದಿಂದ ಹೂವಿನ ಚೌಕದ ವರೆಗಿನ ಜಾಗದಲ್ಲಿ ಹರಾಜು ಮಾಡುವುದನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಕೊಡಬೇಕು ಎಂದು ಪ್ರಸ್ತಾಪಿಸಿದರು. ಸದಸ್ಯರಾದ ಸುರೇಶ ಹೊನ್ನಾವರ, ಮಹೇಶ ಮೇಸ್ತ ಇದಕ್ಕೆ ಧ್ವನಿಗೂಡಿಸಿದರು.

ನಾಮನಿರ್ದೇಶನ ಸದಸ್ಯ ದತ್ತಾತ್ರೆಯ ಮೇಸ್ತ ಮಾತನಾಡಿ ವೆಂಕಟ್ರಮಣ ದೇವಸ್ಥಾನದ ಸಮೀಪದಲ್ಲೇ ಗಣಪತಿ ದೇವಸ್ಥಾನ, ಶಾರದಾಂಬ ದೇವಸ್ಥಾನಗಳಿದ್ದು ಯಾವುದೇ ಹಿಂದು ದೇವಸ್ಥಾನಗಳೆದುರು ಹಿಂದುಯೇತರರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಅಧ್ಯಕ್ಷ ಶಿವರಾಜ ಮೇಸ್ತ ಇದಕ್ಕೆ ಉತ್ತರಿಸಿ ಪಟ್ಟಣ ಪಂಚಾಯತ ಜಾಗದಲ್ಲಿ ಹರಾಜು ಮಾಡುವುದನ್ನು ದೇವಸ್ಥಾನಕ್ಕೆ ವಹಿಸಿದರೆ ಕಾನೂನಿನ ಆಕ್ಷೇಪಣೆ ಉಂಟಾಗುವುದು. ಹರಾಜು ಪ್ರಕ್ರಿಯೆ ಬಗ್ಗೆ ಜಿಲ್ಲಾಧಿಕಾರಿಯವರಿಗ ಬರೆಯಲಾಗಿದ್ದು ಅವರಿಂದ ಉತ್ತರ ಬರಲು ತಡವಾಗಬಹುದು. ಎಪ್ರಿಲಲ್ 10ಕ್ಕೆ ಜಾತ್ರೆ ಇದೆ. ಆದ್ದರಿಂದ ಈ ವರ್ಷ ಹಿಂದಿನoತೆಯೇ ನಡೆಸಿಕೊಂಡು ಹೋಗೋಣ. ಮುಂದಿನ ವರ್ಷ ಇನ್ನೂ ಹೆಚ್ಚಿನ ಕಾನೂನು ಸಲಹೆ ಪಡೆದು ಯಾವ ರೀತಿ ಮಾಡಬಹದು ಎಂಬುದನ್ನು ಚರ್ಚಿಸೋಣ ಎಂದರು.

ಪಟ್ಟಣ ಪಂಚಾಯತ ಸದಸ್ಯ ಅಜಾದ ಅಣ್ಣಿಗೇರಿ ಮಾತನಾಡಿ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಗಳನ್ನು ಧಾರ್ಮಿಕ ದತ್ತಿ ಇಲಾಖೆ ಜ್ಯಾರಿಗೆ ತರಬೇಕು. ಪಟ್ಟಣ ಪಂಚಾಯಿತಿ ಜ್ಯಾರಿಗೆ ತರಲು ಬರುವುದಿಲ್ಲ. ಹೊನ್ನಾವದಲ್ಲಿ ಸೌಹಾರ್ದಯುತ ವಾತಾವರಣವಿದ್ದು ಈ ಹಿಂದಿನoತೆಯೇ ಎಲ್ಲರೂ ಒಂದಾಗಿರೋಣ ಎಂದರು.

ನoತರ ವಿಜಯ ಕಾಮತ ಅವರು ಹಿಜಾಬ್ ಪ್ರತಿಭಟನೆಗಾಗಿ ಅಂಗಡಿ ಬಂದ್ ವಿಚಾರ ಪ್ರಸ್ತಾಪಿಸಿದಾಗ ಹೊನ್ನಾವರದಲ್ಲಿ ಮುಸ್ಲೀಂಮರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿಲ್ಲ ಎಂದು ಸಮಜಾಯಿಸಿ ನೀಡಿದರು. ಜಾತ್ರೆಗೆ ಹೊರಗಿನವರೂ ಬರುತ್ತಾರೆ. ಹೊರಗಿನವರೂ ಪ್ರತಿಭಟನೆಗಿಳಿದಿಲ್ಲವೇ ಎಂದು ವಿಜು ಕಾಮತ ಪ್ರಶ್ನಿಸಿದರು.

ಉಪಸ್ಥಿತರಿದ್ದ ಸಾರ್ವಜನಿಕರಾದ ರಘು ಪೈ, ರಾಜು ಭಂಡಾರಿ ಮತ್ತಿತರರು ಹಿಂದುಗಳಿಗೆ ಮಾತ್ರ ಅಂಗಡಿ ಇಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸಮೀಪ ಹಿಂದುಗಳಿಗೆ ಮಾತ್ರ ಅಂಗಡಿಗಳನ್ನು ಇಡಲು ಅವಕಾಶ ಕೊಡಬೇಕೆಂದು ಹಿಂದು ಜಾಗರಣಾ ವೇದಿಕೆ ನೀಡಿದ ಮನವಿಯನ್ನು ಓದಲಾಯಿತು. ತೀವ್ರ ಚರ್ಚೆ ನಡೆದ ಬಳಿಕ, ಈ ವರ್ಷ ಈ ಹಿಂದಿನ ರೀತಿಯಲ್ಲೇ ಎಪ್ರಿಲ್ 4 ರಂದು ತಾತ್ಕಾಲಿಕ ಡೇರೆ ಅಂಗಡಿಗಳಿಗೆ ಹರಾಜು ನಡೆಸಲು ತೀರ್ಮಾನಿಸಲಾಯಿತು.

ಆದರೆ ಹರಾಜು ನಡೆಸುವ ಜಾಗದಲ್ಲಿ ಮಾಂಸಹಾರಕ್ಕೆ ಸಂಬoಧಪಟ್ಟ ಅಂಗಡಿಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಅಭಿಯಂತರ ಸದಾನಂದ ಸಾಳೆಹಿತ್ತಲ ಇದ್ದರು. ಸದಸ್ಯರಾದ ಮೇಧಾ ನಾಯ್ಕ, ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ನಾಮ ನಿರ್ದೇಶನ ಸದಸ್ಯ ಉದಯ ಪ್ರಭು, ಸುಭಾಷ ಹರಿಜನ ಉಪಸ್ಥಿತರಿದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button