Follow Us On

WhatsApp Group
Focus News
Trending

55 ರಿಡ್ಲೆ ಜಾತಿಯ ಕಡಲಾಮೆ ಮರಿಗಳು ಜನನ: ಸುರಕ್ಷಿತವಾಗಿ ಸಮುದ್ರಕ್ಕೆ: ಮೀನುಗಾರರ ಅಸಮಾಧಾನಕ್ಕೆ ಕಾರಣವೇನು?

ಹೊನ್ನಾವರ: ತಾಲ್ಲೂಕಿನ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರ ರಿಡ್ಲೆ ಜಾತಿಯ ಕಡಲಾಮೆಯೊಂದು ಇಟ್ಟಿರುವ ಮೊಟ್ಟೆಗಳಿಂದ ನಿನ್ನೆ ತಡರಾತ್ರಿ 55 ಮರಿಗಳು ಜನಿಸಿವೆ. ಕಳೆದ 45 ದಿವಸಗಳ ಹಿಂದೆ ಇಲ್ಲಿನ ಕಡಲ ತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಯೊಂದು ಮೊಟ್ಟೆ ಇಟ್ಟಿರುವ ಸ್ಥಳವನ್ನು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಅರಣ್ಯ ಸಿಬ್ಬಂದಿಗಳು ಗುರುತಿಸಿ ಅದಕ್ಕೆ ಸ್ಥಳದಲ್ಲಿ ಪಂಜರ ನಿರ್ಮಿಸಿ ಸಂರಕ್ಷಣೆ ಕ್ರಮ ಕೈಗೊಂಡಿತ್ತು.

ತಡರಾತ್ರಿ ಸುಮಾರು 55 ರಿಡ್ಲೆ ಜಾತಿಯ ಕಡಲಾಮೆ ಮರಿಗಳು ಜನಿಸಿದ್ದು ಸ್ಥಳೀಯ ಅರಣ್ಯ ಸಿಬ್ಬಂದಿಗಳು ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಿದರು. ವಲಯ ಅರಣ್ಯಾಧಿಕಾರಿ ವಿಕ್ರಂ.ರವರ ಮಾರ್ಗದರ್ಶನದಲ್ಲಿ ನಿನ್ನೆ ತಡರಾತ್ರಿ ಉಪವಲಯ ಅರಣ್ಯಾಧಿಕಾರಿ ಗೌsಜಿಜಿ ಮತ್ತು ಸಿಬ್ಬಂದಿಗಳು ಕಡಲಾಮೆಮರಿಗಳನ್ನು ಸಮುದ್ರಕ್ಶೆ ಸೇರಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಡರಾತ್ರಿ ಮೊಟ್ಟೆಯೊಡೆದು ಜನಿಸುವ ಕಡಲಾಮೆ ಮರಿಗಳನ್ನು ಮರುದಿನ ಬೆಳಗ್ಗೆ ಸ್ಥಳೀಯ ಮೀನುಗಾರರು ಪೂಜೆ ಸಲ್ಲಿಸಿದ ನಂತರ ಸಮುದ್ರಕ್ಕೆ ಸೇರಿಸುವ ಪರಿಪಾಠ ಬೆಳೆದು ಬಂದಿದ್ದರೂ ಈ ಬಾರಿ ಸ್ಥಳೀಯರ ಅನುಪಸ್ಥಿತಿಯಲ್ಲಿ ಕಡಲಾಮೆ ಮರಿಗಳನ್ನು ಅರಣ್ಯ ಸಿಬ್ಬಂದಿಗಳೇ ತಡರಾತ್ರಿ ಏಕಾಏಕಿ ಸಮುದ್ರಕ್ಕೆ ಸೇರಿಸಿರುವ ಕ್ರಮವು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಈ ಭಾಗದ ಕಡಲತೀರದಲ್ಲಿ ಪ್ರತಿ ವರ್ಷವೂ ಡಿಸೆಂಬರ್ ದಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ತಮ್ಮ ಸಂತತಿ ಅಭಿವೃದ್ಧಿಗೋಸ್ಕರ ಮೊಟ್ಟೆ ಇಡುತ್ತವೆ. ಈ ಬಾರಿ 12ಕ್ಕೂ ಹೆಚ್ಚು ಕಡಲಾಮೆಗಳು ಇಲ್ಲಿನ ಕಡಲತೀರದಲ್ಲಿ ಇಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು ಅದರ ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತ ಬಂದಿದೆ.

ಕಡಲಾಮೆಗಳು ಮಹಾವಿಷ್ಣುವಿನ ಅಪರಾವತಾರ ಎನ್ನುವದು ಸ್ಥಳೀಯ ಮೀನುಗಾರರ ನಂಬಿಕೆಯಾಗಿದ್ದು ಕಡಲತೀರದಲ್ಲಿ ಮೊಟ್ಟೆ ಇಡುವ ಕಡಲಾಮೆಗಳನ್ನು ಮತ್ತು ಅವುಗಳ ಮೊಟ್ಟೆಗಳನ್ನು ಜತನದಿಂದ ಮತ್ತು ಪೂಜನೀಯ ಭಾವನೆಯಿಂದ ಸಂರಕ್ಷಣೆ ಮಾಡಿ ಮರಿಗಳನ್ನು ಪೂಜಿಸಿ ಸಮುದ್ರಕ್ಕೆ ಸೇರಿಸಿ ಸಂಭ್ರಮ ಪಡುತ್ತಾರೆ. ಆದರೆ ಈ ಬಾರಿ ಸ್ಥಳೀಯರ ಅನುಪಸ್ಥಿತಿಯಲ್ಲಿ ಮತ್ತು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೇ ಮತ್ತು ಕಡಲಾಮೆ ಮರಿಗಳ ಪೂಜೆಗೆ ಸ್ಥಳೀಯರಿಗೆ ಅವಕಾಶ ನೀಡದೇ, ತಡರಾತ್ರಿಯೇ ಅರಣ್ಯ ಸಿಬ್ಬಂದಿಗಳು ಕಡಲಾಮೆಮರಿಗಳನ್ನು ಸಮುದ್ರಕ್ಕೆ ಬಿಟ್ಟಿರುವ ಬಗ್ಗೆ ಸ್ಥಳೀಯ ಮೀನುಗಾರರ ಮುಖಂಡ ರಾಜೇಶ ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button