ಗೇರಸೊಪ್ಪೆ ಹಾಡಗೇರಿಯಲ್ಲಿ ವಿಷ್ಣು ಪಂಚಾಯತ ದೇವಸ್ಥಾನ ಲೋಕಾರ್ಪಣೆ‌| ಪುರಾತನ ದೇವರ ಮೂರ್ತಿಗಳಿಗೆ ಶ್ರೀ ಮಾರುತಿ ಗುರೂಜಿಯಿಂದ ಪ್ರಾಣಷ್ಠಾಪನೆ

ಹೊನ್ನಾವರ: ಮಲೆನಾಡ ತಪ್ಪಲಿನ ದಟ್ಟ ಹಸಿರು ಕಾನನದ ಅಂಚಿನಲ್ಲಿ ಯಾವ ಆಧುನಿಕ ಸ್ಪರ್ಶವೂ ಇಲ್ಲದೆ ತನ್ನ ಪಾಡಿಗೆ ತಾನು ಸಾವಿರಾರು ವರ್ಷದಿಂದ ಉಸಿರಾಡುತ್ತಿರುವ ತಾಲೂಕಿನ ಗೇರಸೊಪ್ಪೆಯ ಹಾಡಗೇರಿ ಎಂಬ ಪುಟ್ಟ ಕೇರಿಯಲ್ಲಿ ಇದೀಗ ಮಹಾವಿಷ್ಣು, ಮಹಾಗಣಪತಿ, ಸೂರ್ಯನಾರಾಯಣ, ಗೌರಿ (ಪಾರ್ವತಿ) ಮಹಾಲಿಂಗೇಶ್ವರ ದೇವರುಗಳೆಲ್ಲ ಮತ್ತೆ ‘ಪ್ರತ್ಯಕ್ಷ’ವಾಗುತ್ತಿದ್ದಾರೆ.

ಗೇರಸೊಪ್ಪೆಯ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಹಾಡಗೇರಿ ನಾಗರಿಕರೆಲ್ಲ ಸೇರಿ ಸಾವಿರಾರು ವರ್ಷಗಳ ಇತಿಹಾಸ ಇರುವ ಮೇಲ್ಕಂಡ ಎಲ್ಲ ಪರಿವಾರದ ದೇವರುಗಳಿಗೆ ರಮಣ ೀಯ ಪರ್ವತ ಸಾಲುಗಳ ನಡುವೆ ನೂತನ ದೇವಾಲಯವನ್ನು ನಿರ್ಮಿಸಿದ್ದಾರೆ.

ಮೇ 7, 8, 9, 10 ರಂದು ಹಾಡಗೇರಿಯಲ್ಲಿ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಧಾರ್ಮಿಕ ಗಾಗೂ ದತ್ತಿ ಸಂಸ್ಥೆ ಹಾಗೂ ಹಾಡಗೇರಿಯ ಶ್ರೀ ಮಹಾವಿಷ್ಣು ದೇವಾಲಯ ಸಮಿತಿಯ ಆಸ್ರಯದಲ್ಲಿ ಈ ಎಲ್ಲ ದೇವರುಗಳ ಪ್ರಾಣ ಪ್ರತಿಷ್ಠಾಪನೆ, ಅಷ್ಠಬಮಧ, ಬ್ರಹ್ಮಕಲಶೋತ್ಸವ ಮತ್ತು ನೂತನ ದೇವಾಲಯದ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಲಿದೆ.

ಮೆಣಸಿನ ರಾಣ ಎಂದೇ ಖ್ಯಾತಳಾದ ರಾಣ ಚೆನ್ನಭೈರಾದೇವಿ ಪೂಜಿಸುತ್ತಿದ್ದ ಈ ವಿಷ್ಣು ಪಂಚಾಯತನ ದೇವರುಗಳ ಮೂರ್ತಿಗೆ ದೇವಾಲಯವಿದೆ. 1552 ರಿದ 1606ರ ನಡುವೆ ಆಳ್ವಿಕೆ ಮಾಡಿದ ಚೆನ್ನಾಭೈರಾದೇವಿಗಿಂತಲೂ ಸುಮಾರು 600 ವರ್ಷಗಳಿಗಿಂತ ಮೊದಲೇ ರಾಜಮಹಾರಾಜರಿಂದ, ಜನ ಸಾಮಾನ್ಯರಿಂದ ಪೂಜಿಸಲ್ಪಡುತ್ತಿದ್ದ ಈ ದೇವರುಗಳೆಲ್ಲ ಯಾವ್ಯಾವುದೋ ಕಾಲಕ್ಕೆ ದಬ್ಬಾಳಿಕೆಗೆ ಒಳಗಾಗಿ, ಕಳ್ಳಕಾಕರ ಹಪಾಹಪಿಗೆ ಮೂರ್ತಿಗಳೆಲ್ಲ ಭಂಗವಾಗಿ ಚೆಲ್ಲಾಪಿಲ್ಲಿಯಾಗಿ ದಟ್ಟ ಅರಣ್ಯದಲ್ಲಿ ಅನಾಥವಾಗಿ ಬಿದ್ದಿದ್ದವು.


12 ವರ್ಷಗಳ ಹಿಂದೆ ಹಾಡಗೇರಿಯ ಕುಂಬ್ರಿ ಮರಾಠಿ ಸಮುದಾಯದ ನಿವಾಸಿಗಳ ಕೋರಿಕೆಯಂತೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಅವರು ಸ್ಥಳ ಪರಿಶೀಲನೆ ಮಾಡಿ ದೇವಾಲಯ ನಿರ್ಮಾಣದ ಸಂಕಲ್ಪ ಮಾಡಿದರು. ಇದಕ್ಕೆ ಪೂರಕವಾಗಿ ಗುರೂಜಿ ಅವರು ಸ್ಥಳೀಯರನ್ನೊಳಗೊಂಡ ‘ಮಹಾವಿಷ್ಣು ದೇವಾಲಯ ಸಮಿತಿ’ ರಚಿಸಿ ದೇವಾಲಯದ ನಿರ್ಮಾಣಕ್ಕೆ ಬೇಕಾದ ಕಾಗದಪತ್ರ, ಇತ್ಯಾದಿ ಸಿದ್ಧತೆ ಮಾಡಿಕೊಂಡರು. ಗರೂಜಿಯವರು ತಮ್ಮ ಅನುಯಾಯಿಗಳ ತನು ಮನ ಧನದ ಸಹಕಾರದೊಂದಿಗೆ ಸ್ಥಳೀಯರ ಅಳಿಲು ಸೇವೆಯ ಸಹಕಾರದ ಬಲದೊಂದಿಗೆ ದೇವಾಲಯ ನಿರ್ಮಾಣಕ್ಕೆ ಮುಂದಾದರು. ಹಾಡಗೇರಿ ಜನ ಶಕ್ತಿಮೀರಿ ತಮ್ಮ ಶ್ರಮದಾನದ ಮೂಲಕ ದೇವಾಲಯದ ನಿರ್ಮಾಣಕ್ಕೆ ಬೆವರು ಚೆಲ್ಲಿದರು. ಮಳೆಗಾಲದ 6 ತಿಂಗಳು ಊರಿಗೆ ಯಾವ ಸಂಪರ್ಕವೂ ಇಲ್ಲದೇ ಬದುಕು ಸವೆಯುವ ಹಾಡಗೇರಿಯಲ್ಲಿನ ಒಂದು ಭವ್ಯ ದೇವಾಲಯ ನಿರ್ಮಿಸುವುದು ಸವಾಲಿನ ಸಂಗತಿಯಾಗಿತ್ತು. ಈಗಲೂ ಅಲ್ಲಿಗೆ ಹೋಗಲು ಕಾಡಿನ ದುರ್ಗಮ ಹಾದಿಯನ್ನೇ ಅನುಸರಿಸಬೇಕು.

ಇದೀಗ ಅಲ್ಲಿ 2 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯ ಸಿದ್ಧವಾಗಿದ್ದು ಮೇ 7 ರಿಂದ ಅದರ ಲೋಕಾರ್ಪಣೆಗಾಗಿ ಶ್ರೀ ಮಾರುತಿ ಗುರೂಜಿ ಅವರ ಮಾರ್ಗದರ್ಶನದಲ್ಲಿ, ತಾಂತ್ರಿಕರಾದ ಗಜಾನನ ಭಟ್ಟ ಹಿರೆ ಅವರ ನೇತೃತ್ವದಲ್ಲಿ ಧಾರ್ಮಿಕ ಪ್ರಕ್ರಿಯೆ ನಡೆಯುತ್ತಿದೆ.
ಗೇರಸೊಪ್ಪೆ ಚೆನ್ನಭೈರಾದೇವಿಯ ತನ್ನ ಆಡಳಿತದ ಅವಧಿ ಸಾಂಸ್ಕøತಿಕವಾಗಿ ಮಹತ್ವದ ದಾಖಲೆಯಾಗಿ ನಿಲ್ಲುತ್ತದೆ. ಆಕೆಯ ಆಸ್ಥಾನದಲ್ಲಿ ಸಂಗೀತ, ನೃತ್ಯ ಕಲೆಯನ್ನು ಆರಾಧಿಸುವವರಿಗೆ ವಿಶೇಷ ಸ್ಥಾನಮಾನ ನೀಡಿ ಆಶ್ರಯ ನೀಡಿ ಗೌರವಿಸಲಾಗಿತ್ತು. ಅದರ ಕುರುಹು ಈ ಹಾಡಗೇರಿ, ಹಾಡುಗರ ಕೇರಿ. ಇಲ್ಲಿ ರಾಣ ಚೆನ್ನಾಭೈರಾದೇವಿ ಹಾಡುಗಾರರಿಗೆ ಆಶ್ರಯ ನೀಡಿ ಪಾಲಿಸಿಕೊಂಡು ಬಂದಿದ್ದಳು.

ಈ ನಿವಾಸಿಗಳ ಆರಾಧನೆಗಾಗಿ ಊರಿನ ಮಧ್ಯ ಭಾಗದಲ್ಲಿ ಮಹಾವಿಷ್ಣು ದೇವಾಲಯದೊಂದಿಗೆ 4 ದಿಕ್ಕಿನಲ್ಲಿ ಮಹಾಗಣಪತಿ, ಸೂರ್ಯ ನಾರಾಯಣ, ಗೌರಿ(ಪಾರ್ವತಿ), ಮಹಾಲಿಂಗೇಶ್ವರ ದೇವಾಲಯಗಳು ಸ್ಥಾಪಿತವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಈಗಲೂ ಹಾಡಗೇರಿಯ 5 ಸ್ಥಳದಲ್ಲಿ ಕಾಲಗರ್ಭದೊಳಗೆ ಜೀರ್ಣವಾದ ಈ ದೇವಾಲಯಗಳ ಕುರುಹುಗಳು ಕಾಣಸಿಗುತ್ತವೆ. ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಕುರುಹಾಗಿದ್ದ ದೇವಾಲಯವನ್ನು ಪೂಜೆ ಶ್ರೀ ಮಾರುತಿ ಗುರೂಜಿ ಅವರು ಪೂಜೆ ಪುನಸ್ಕಾರಗಳಿಗೆ, ಧಾರ್ಮಿಕ ಆಚರಣೆಗಳಿಗೆ ಅನುಕೂಲವಾಗುವಂತೆ ಎಲ್ಲ ದೇವರ ಮೂರ್ತಿಗಳನ್ನೂ ಹೊಸದಾಗಿ ನಿರ್ಮಿಸಿ ಒಂದೆಡೆ ತಂದು ಭವ್ಯ ದೇವಾಲಯ ನಿರ್ಮಿಸಿದ್ದಾರೆ.

ವಿಸ್ಮಯ ನ್ಯೂಸ್ ಹೊನ್ನಾವರ

Exit mobile version