ಅಂಕೋಲಾ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಅದರ ಕರಿನೆರಳು ಇನ್ನಷ್ಟು ವ್ಯಾಪಿಸುವ ಲಕ್ಷಣಗಳು ಕಂಡು ಬರುತ್ತಿದೆ. ತಾಲೂಕಿನಲ್ಲಿ ರವಿವಾರ ಮತ್ತು ಸೋಮವಾರ ಯಾವುದೇ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗದೆ ಜನತೆ ಕೊಂಚ ನೆಮ್ಮದಿಯಿರುವಂತೆ ಮಾಡಿದೆ.
ಸೋಮವಾರ ಹೊಸದಾಗಿ 19 ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಒಟ್ಟಾರೆಯಾಗಿ ಈವರೆಗೆ ತಾಲೂಕಿನಲ್ಲಿ 789 ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಅವುಗಳಲ್ಲಿ 691 ಪರೀಕ್ಷಾ ವರದಿ ಬಂದಿದೆ. ಅವುಗಳಲ್ಲಿ 21 ಪೊಸಿಟಿವ್ ಮತ್ತು 670 ನೆಗೆಟಿವ್ ವರದಿ ದಾಖಲಾಗಿದೆ. 98 ಪರೀಕ್ಷಾ ವರದಿಗಳು ಬರಬೇಕಿದ್ದು ಅವುಗಳಲ್ಲಿ ಕೆಲವು ಅಗ್ರಗೋಣ ಬೀಟ್ ಪೋಲಿಸ್‍ನ ಪ್ರಾಥಮಿಕ ಸಂಪರ್ಕಿತರು, ಶೇಡಿಕಟ್ಟಾ ಸೋಂಕಿತನ ಚಿಕಿತ್ಸೆಗೊಳಪಡಿಸಿದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರ ಗಂಟಲುದ್ರವದ ಮಾದರಿಗಳಾಗಿವೆ ಎನ್ನಲಾಗಿದ್ದು, ಆ ಎಲ್ಲಾ ಪರೀಕ್ಷಾ ವರದಿಗಳನ್ನಾಧರಿಸಿ ಮಂಗಳವಾರ ಇಲ್ಲವೇ ಬುಧವಾರ ಕೆಲ ಸೋಂಕಿನ ಪ್ರಕರಣಗಳು ಬರಬಹುದೇ ಎಂಬ ಆತಂಕದ ಚರ್ಚೆ ಅಲ್ಲಲ್ಲಿ ಕೇಳಿ ಬರುತ್ತಿದೆ.
ಅದಲು-ಬದಲು ವರದಿ: ದೇಶದಾದ್ಯಂತ ಕೆಲವೆಡೆ ಮೊದಲು ನೆಗೆಟಿವ್ ವರದಿ ಕಾಣಿಸಿಕೊಂಡು ತದನಂತರ ಪಾಸಿಟಿವ್ ಎನಿಸಿದ ಕೆಲ ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ ಇನ್ನು ಕೆಲೆವೆಡೆ ಮೊದಲು ಪಾಸಿಟಿವ್ ಎಂದು ಪತ್ತೆಯಾದ ಪ್ರಕರಣಗಳು ನಂತರ ನೆಗೆಟಿವ್ ಎಂದು ದಾಖಲಾದವುಗಳು ಇವೆ ಎನ್ನಲಾಗಿದ್ದು, ರೋಗಲಕ್ಷಣಗಳಲ್ಲಿ ವ್ಯತ್ಯಾಸ ಅಥವಾ ಶೀಘ್ರ ಚೇತರಿಕೆಯಿಂದ ಮತ್ತು ಕೆಲ ತಾಂತ್ರಿಕ ದೋಷಗಳಿಂದಲೂ ಹೀಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.