ಮಾಹಿತಿ
Trending

ಅಂಕೋಲಾ ಹಟ್ಟಿಕೇರಿ ಟೋಲ್‍ನಾಕ ಬಳಿ ಜಿಂಕೆಯ ಮೇಲೆ ನಾಯಿಗಳ ದಾಳಿ

ಪ್ರಶಾಂತ ನಾಯ್ಕ ಮತ್ತು ದಾರಿಹೋಕರ ಸಮಯ ಪ್ರಜ್ಞೆಯಿಂದ ಬದುಕಿದ ಜಿಂಕೆ.
ಜಿಂಕೆ ರಕ್ಷಣಾ ಕಾರ್ಯಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿಗಳು
.

ಅಂಕೋಲಾ : ತಾಲೂಕಿನ ಹಟ್ಟಿಕೇರಿ ಟೋಲ್‍ನಾಕ ಬಳಿ (ಗೌರಿ ಕೆರೆ ಹತ್ತಿರ) ಜಿಂಕೆಯೊಂದರ ಮೇಲೆ 2 ನಾಯಿಗಳು ದಾಳಿ ನಡೆಸುತ್ತಿದ್ದಾಗ ಸ್ಥಳೀಯ ದಾರಿಹೋಕರ ಸಮಯ ಪ್ರಜ್ಞೆಯಿಂದಾಗಿ ಜಿಂಕೆಯು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಗುಂಪಿನಿಂದ ಬೇರ್ಪಟ್ಟಂತ್ತಿದ್ದ ಜಿಂಕೆಯೊಂದು ತನ್ನ ಮೇಲೆ ದಾಳಿ ಮಾಡುತ್ತಿದ್ದ ಎರಡು ನಾಯಿಗಳಿಂದ ತಪ್ಪಿಸಿಕೊಳ್ಳಲಾಗದೆ ಪರಿತಪಿಸುತ್ತಿತ್ತು ಎನ್ನಲಾಗಿದೆ, ಅದೇ ವೇಳೆ ಅಂಕೋಲಾ ಕಡೆಯಿಂದ ಅವರ್ಸಾದ ತನ್ನ ಮಾವನ ಮನೆಗೆ ಹೊರಟ್ಟಿದ್ದ, ಪಟ್ಟಣದ ಹೆಸರಾಂತ ಪರಮೇಶ್ವರಿ ಮೊಬೈಲ್ ಸರ್ವಿಸ್ ಸೆಂಟರ್ ಮಾಲಕ ಪ್ರಶಾಂತ ಶಾಂಭಾ ನಾಯ್ಕ ಭಾವಿಕೇರಿ, ಜಿಂಕೆಯ ಮೇಲೆ ಎರಗಿ ಹೋಗುತ್ತಿದ್ದ ನಾಯಿಗಳಿಗೆ ಕಲ್ಲು ಎಸೆದು ಓಡಿಸಿದ ಪರಿಣಾಮ ಜಿಂಕೆಯು ಪ್ರಾಣಾಪಾಯದಿಂದ ಪಾರಾಯಿತು ಎನ್ನಲಾಗಿದೆ. ನಾಯಿಗಳ ಕಡಿತದಿಂದ ಜಿಂಕೆಯ ಹಿಂಭಾಗಕ್ಕೆ ಗಾಯಗಳಾಗಿದ್ದು, ರಕ್ತಸ್ರಾವದಿಂದ ಜಿಂಕೆ ಹೆದ್ದಾರಿ ಅಂಚಿನ ನೀರು ಹರಿದು ಹೋಗುವ ಪ್ರದೇಶದಲ್ಲಿ ನಿತ್ರಾಣಗೊಂಡಂತೆ ಬಿದ್ದಿರುವುದು ಕಂಡುಬಂತು. ಮತ್ತೆ ನಾಯಿಗಳು ದಾಳಿ ನಡೆಸಲು ಮುಂದಾಗಿದ್ದವಾದರೂ, ಸ್ಥಳೀಯ ಕೆಲ ದಾರಿಹೋಕರು ಅದಕ್ಕೆ ಅವಕಾಶ ನೀಡದೆ ನಾಯಿಗಳನ್ನು ಓಡಿಸಿದರು.
ಮಾಹಿತಿ ತಿಳಿದ ತಕ್ಷಣ ಅಶೋಕ ನಾಯಕ, ಗಣಪತಿ ನಾಯಕ, ಸಚಿನ, ಮಂಜು ಮತ್ತಿತ್ತರ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಆ ವೇಳೆಗಾಗಲೇ ಕೊಂಚ ಸಾವರಿಸಿಕೊಂಡಂತ್ತಿದ್ದ ಜಿಂಕೆ ಎದ್ದು ನಿಂತು ಪಕ್ಕದ ಅರಣ್ಯ ಪ್ರದೇಶದ ಪೊದೆಗಳಲ್ಲಿ ಅವಿತು ಕಣ್ಮರೆಯಾಯಿತು ಎನ್ನಲಾಗಿದ್ದು ತಡರಾತ್ರಿಯವರೆಗೂ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಂಕೆಯ ಜಾಡು ಹಿಡಿದು ರಕ್ಷಣೆ ಮಾಡಲು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button