Follow Us On

WhatsApp Group
Focus News
Trending

ಸಂಪನ್ನಗೊಂಡ ದಿ.ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಯಕ್ಷರಂಗೋತ್ಸವ

ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕøತ, ತೆಂಕು ಬಡಗುತಿಟ್ಟಿನ ಅಗ್ರಮಾನ್ಯ ಭಾಗವತ ದಿ.ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಡತೋಕಾ ಕೃತಿ-ಸ್ಮøತಿ ಯಕ್ಷರಂಗೋತ್ಸವವು 2022ರ ಮೇ 28 ಮತ್ತು 29 ಹೀಗೆ ಎರಡು ದಿನ ಉತ್ತರ ಕನ್ನಡ ಜಿಲೆಲ ಹಳದೀಪುರ ಶ್ರೀಗೋಪೀನಾಥ ಸಭಾಗೃಹದಲ್ಲಿ ನಡೆಯಿತು. ಕಡತೋಕಾ ಮಂಜುನಾಥ ಭಾಗವತರು ಹುಟ್ಟುಹಾಕಿದ ಹಳದೀಪುರದ ಯಕ್ಷಲೋಕ ಸಂಸ್ಥೆಯು ಈ ಉತ್ಸವವನ್ನು ಆಯೋಜಿಸಿದ್ದು ಅವರ ಪುತ್ರ ಕಡತೋಕಾ ಗೋಪಾಲಕೃಷ್ಣ ಭಾಗವತರು ನಡೆಸುತ್ತಾ ಬಂದಿರುವ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆ ಯಕ್ಷರಂಗವು ಇದನ್ನು ಸಂಯೋಜಿಸಿತ್ತು.

ಮೊದಲ ದಿನ ಹಳದೀಪುರದ ಶ್ರೀಗೋಪೀನಾಥ ಸಭಾಗೃಹದ ಎದುರಿನ ಆಂಜನೇಯ ದೇವಾಲಯದಲ್ಲಿ ಯಕ್ಷಗಾನೀಯ ಗಣಪತಿ ಸ್ತುತಿಯೊಂದಿಗೆ ಯಕ್ಷರಂಗೋತ್ಸವವು ಪ್ರಾರಂಭವಾಯಿತು. ಗಣೇಶ ಯಾಜಿ ಇಡಗುಂಜಿಯವರು ಗಣಪತಿ ಸ್ತುತಿ ಮಾಡಿದರು ಪರಮೇಶ್ವರ ಭಮಡಾರಿ ಕರ್ಕಿ ಮದ್ದಳೆಗಾರರಾಗಿಯೂ ಕುಮಾರ ಮಯೂರ ಹೆಗಡೆ ಹರಿಕೇರಿ ಚಂಡೆವಾದಕರಾಗಿಯೂ ಸಹಕರಿಸಿದರು.
ನಂತರ ಸಭಾಭವನದಲ್ಲಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆಯವರು ದೀಪ ಬೆಳಗುವುದರ ಮೂಲಕ ಯಕ್ಷರಂಗೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಯಕ್ಷರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಡಾ.ಜಿ.ಎಲ್.ಹೆಗಡೆಯವರು ಯಕ್ಷಗಾನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ದಿವಂಗತ ಕಡತೋಕಾ ಮಂಜುನಾಥ ಭಾಗವತರು ಯಕ್ಷಗಾನಕ್ಕೆ ಮೊಟ್ಟಮೊದಲಿಗೆ ಪತ್ರಿಕೆಯನ್ನು ಪ್ರಾರಂಭಿಸಿದವರು.

ಇದೀಗ ಅದನ್ನು ಮುಂದುವರಿಸುತ್ತಿರುವ ಅವರೇ ಹುಟ್ಟುಹಾಕಿದ ಸಂಸ್ಥೆ ಅವರ ನೆನಪಿಗೆ ಈ ಯಕ್ಷರಂಗೋತ್ಸವವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಮುರಳೀಧರ ಪ್ರಭು ಅವರು ಯಕ್ಷರಂಗ ಮಾಸಪತ್ರಿಕೆಯು ಉತ್ತರ ಕನ್ನಡದ ಏಕೈಕ ಸಾಂಸ್ಕøತಿಕ ನಿಯತಕಾಲಿಕವಾಗಿರುವುದು ವಿಶೇಷ. ಯಕ್ಷಗಾನದ ಕುರಿತು ಅರಿವನ್ನು ವಿಸ್ತರಿಸುವ ಈ ಪತ್ರಿಕೆಯನ್ನು ಕೊರೋನೋತ್ತರ ಸಂದರ್ಭದಲ್ಲಿ ನಾವೆಲ್ಲ ಆರ್ಥಿಕ ಬೆಂಬಲವನ್ನು ನೀಡಿ ಬೆಂಬಲಿಸುವ ಅಗತ್ಯವಿದೆ ಎಂದು ನುಡಿದರು.

ಉದ್ಘಾಟನೆಯ ನಂತರ ವಿನೂತನವಾದ ಸಂವಾದ ಕಾರ್ಯಕ್ರರ ನಡೆಯಿತು. ಯಕ್ಷಗಾನದ ಹಿಮ್ಮೇಳದ ಸ್ವರೂಪದ ಕರಿತು ನಡೆದ ಈ ಸಂವಾದದಲ್ಲಿ ಐವತ್ತಕ್ಕಿಂತ ಹೆಚ್ಚು ಜನ ಕಲಾಸಕ್ತರು ಸಕ್ರಿಯವಾಗಿ ಭಾಗವಹಿಸಿದರು. ಹಿರಿಯ ಭಾಗವತರಾದ ವಿದ್ವಾಣ್ ಗಣಪತಿ ಭಟ್, ಉಮೇಶ ಭಟ್ ಬಾಡ ಹಾಗೂ ಜೋಗೀಮನೆ ಗೋಪಾಲಕೃಷ್ಣ ಭಟ್ ಇವರುಗಳು ಯಕ್ಷಗಾನದ ವೈವಿಧ್ಯಮಯ ಮಟ್ಟುಗಳ ಸಾಂಪ್ರದಾಯಿಕ ಸ್ವರೂಪವನ್ನು ಹಾಡಿ ತೋರಿಸಿದರು ಹಾಗು ಅದರ ಕುರಿತು ಯಕ್ಷಗಾನದ ತಜ್ಞ ವಿದ್ವಾಂಸರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಹಾಗೂ ಯಕ್ಷರಂಗ ಮಾಸಪತ್ರಿಕೆಯ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಇವರು ವಿದ್ವತ್ಪೂರ್ಣವಾದ ವಿವರಣೆ ನೀಡುತ್ತ ಸಂವಾದ ನಡೆಸಿದರೆ ಸೇರಿದ ಕಲಾಸಕ್ತರು ಮತ್ತು ಹವ್ಯಾಸೀ ಕಲಾವಿದರು ಹಾಗೂ ಭಾಗವತರುಗಳು ಕುತೂಹಲಕರವಾದ ಪ್ರಶ್ನೆಗಳನ್ನು ಕೇಳುತ್ತಾ ಸಂವಾದದಲ್ಲಿ ಪಾಲ್ಗೊಂಡುದು ವಿಶೇಷವಾಗಿತ್ತು.

ಸಂವಾದದಲ್ಲಿ ಅತಿಥಿಗಳಾಗಿ ಸಂಗೀತಗಾರರಾದ ಪ್ರೊ.ಎಸ್.ಶಂಭು ಭಟ್ ಕಡತೋಕಾ, ಧಾರವಾಡದ ಡಾ.ಪ್ರಕಾಶ ಭಟ್, ಅರ್ಥಧಾರಿ ಜಿ.ವಿ.ಹೆಗಡೆ ಮೂರೂರು, ಹವ್ಯಾಸೀ ಕಲಾವಿದರಾದ ಉಡುಪಿ ರಘುನಾಥ ನಾಯಕ್, ಯಕ್ಷಗಾನ ಸಂಶೋಧಕರಾದ ಡಾ.ಎಸ್.ಡಿ.ಹೆಗಡೆ, ಡಾ.ಸತೀಶ ನಾಯ್ಕ, ಡಾ.ಎಚ್.ಆರ್.ಅಮರನಾಥ ಶಿರಸಿ, ನಿವೃತ್ತ ಪ್ರಾಂಶುಪಾಲರಾದ ಮುರ್ಡೇಶ್ವರದ ಎಂ.ವಿ.ಹೆಗಡೆ ಹಾಗೂ ಸಂಘಟಕ ಎಂ.ಕೆ.ಭಟ್ ಜೋಗೀಮನೆ ಮೊದಲಾದ ತಜ್ಞರು ಭಾಗವಹಿಸಿದುದು ವಿಶೇಷವಾಗಿತ್ತು. ಕಲಾಸಕ್ತರಲ್ಲಿ ಎಂ.ಆರ್.ಹೆಗಡೆ ಕಾನಗೋಡ, ಯಕ್ಷಗಾನ ಶಿಕ್ಷಕ ಶ್ರೀಧರ ಹೆಗಡೆ ನಕ್ಷೆ, ಹವ್ಯಾಸೀ ಅರ್ಥಧಾರಿಗಳಾದ ಜಿ.ಎನ್.ಹೆಗಡೆ ಕೊಂಡದಕುಳಿ, ಎಂ.ಎಂ.ಹೆಗಡೆ ಹೊನ್ನಾವರ, ಜನಾರ್ಧನ ಶೆಟ್ಟಿ ಗಾಣಗೆರೆ, ಭಾಗವತ ಗಣೇಶ ಯಾಜಿ ಇಡಗುಂಜಿ, ಭಾಗವತ ಮತ್ತು ಮದ್ದಳೆಗಾರ ಶ್ರೀಪಾದ ಭಟ್ ಕಡತೋಕಾ, ಸುರೇಶ ಹೆಗಡೆ ಹಕ್ಕಿಮನೆ, ಭಾಗವತ ಗಜಾನನ ಭಟ್ ತುಳಗೇರಿ ಶಿರಸಿ, ದೇವಕಿಕಂದ ಶಿಗಡಿ, ಹವ್ಯಾಸೀ ಕಲಾವಿದರಾದ ಕೃಷ್ಣ ಹೆಗಡೆ ಮುರ್ಡೇಶ್ವರ ಹಾಗೂ ವಿ.ಟಿ.ಭಟ್ ಕಬ್ಗಾಲು, ಶ್ರೀಪಾದ ಭಟ್ ಹಡಿನಬಾಳು, ಹಾಗೂ ಹಿರಿಯ ಸಂಘಟಕ ಶುಂಠಿ ಸತ್ಯನಾರಾಯಣ ಭಟ್ಟರು ಮೊದಲಾದವರು ಭಾಗವಹಿಸಿದ್ದರು. ಕರ್ಕಿ ಹಾಸ್ಯಗಾರ ಪರಂಪರೆಯ ವಯೋವೃದ್ಧ ವೇಷಧಾರಿ ಸತ್ಯನಾರಾಯಣ ಹಾಸ್ಯಗಾರರು ಉತ್ಸಾಹದಿಂದ ಪದ್ಯಗಳಿಗೆ ಹೆಜ್ಜಹಾಕಿದುದು ಸಂವಾದದ ಜೀವಂತಿಕೆಗೆ ಸಾಕ್ಷಿಯಾಯಿತು.

ಯಕ್ಷಗಾನ ವಿದ್ವಾಂಸರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ಅವಲೋಕನ ನುಡಿಯನ್ನು ಆಡುತ್ತಾ ಹೊಸ ರಾಗಗಳನ್ನು ಹಾಕುವಾಗ ಹಾಡು ಯಕ್ಷಗಾನವಾಗಿ ಕೇಳುವಂತೆ ಭಾಗವತರುಗಳು ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.
ಪುಸ್ತಕ ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಕ್ರಮವಾಗಿ ಯಕ್ಷರಂಗದ ಸಂಪಾದಕ ಗೋಪಾಲಕೃಷ್ಣ ಭಾಗವತರು ಯಕ್ಷಗಾನದ ಮೇಲೆ ಬಂದ ಕೆಲವು ಪುಸ್ತಕಗಳನ್ನು ಪರಿಚಯಿಸಿ ಸ್ಮರಣಿಕೆಯಾಗಿ ಭಾಗವಹಿಸಿದ ಕಲಾಸಕ್ತರಿಗೆ ನೀಡಿದುದು ಒಂದು ಹೊಸ ಬೆಳವಣಿಗೆಯಾಗಿತ್ತು.
ಮದ್ದಳೆಗಾರರಾಗಿ ಪರಮೇಶ್ವರ ಭಂಡಾರಿ ಕರ್ಕಿ, ಪಿ.ಕೆ.ಹೆಗಡೆ ಹರಿಕೇರಿ ಹಾಗೂ ಸುಬ್ರಹ್ಮಣ್ಯ ಭಟ್ ಬಾಡ ಹಾಗೂ ಚಂಡೆವಾದಕರಾಗಿ ಕುಮಾರ ಮಯೂರ ಹೆಗಡೆ ಇವರುಗಳು ಸಹಕರಿಸಿದರು.

ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆಯವರು ವಹಿಸಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಎಸ್.ಜಿ.ಭಟ್ ಕವಲಕ್ಕಿ ಅವರು ಉಪಸ್ಥಿತರಿದ್ದರು. ನ್ಯಾಯವಾದಿ ಸತೀಶ ಭಟ್ ಉಡಳಗೆರೆಯವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅಪಾರ ಪ್ರಮಾಣದಲ್ಲಿ ಯಕ್ಷಗಾನದ ಧ್ವನಿಮುದ್ರಣವನ್ನು ಸಂಗ್ರಹಿಸಿದ ರಾಮಚಂದ್ರ ಶಾನಭಾಗ ಕಡತೋಕಾ ಹಾಗೂ ಯಕ್ಷಸಿರಿ ಪ್ರಶಸ್ತಿ ಪುರಸ್ಕøತರಾದ ಸಂಘಟಕ ಎಂ.ಆರ್.ಹೆಗಡೆ ಕಾನಗೋಡು ಹಾಗೂ ಯಕ್ಷಗಾನ ಶಿಕ್ಷಕ ಗಣೇಶ ಭಂಡಾರಿ ಬೋಳಗೆರೆ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಾಯೋಜಕರಾದ ಹಳದೀಪುರದ ದಾಮೋದರ ಪೈ ಹಾಗೂ ರಂಗೋಲಿಯಲ್ಲಿ ಕಡತೋಕಾ ಭಾಗವತರ ಚಿತ್ರವನ್ನು ಬರೆದ ಕಲಾವಿದ ಗಣೇಶ ಖರೆ ಇವರುಗಳನ್ನು ಕೂಡ ಶಾಲು ಹೊದೆಸಿ ಗೌರವಿಸಲಾಯಿತು. ನಂತರ ಹಟ್ಟಿಯಂಗಡಿ ರಾಮಭಟ್ ವಿರಚಿತ ‘ಅತಿಕಾಯ ಮೋಕ್ಷ’ ತಾಳಮದ್ದಳೆ ನಡೆಯಿತು. ಅತಿಕಾಯನಾಗಿ ಡಾ.ಜಿ.ಎಲ್.ಹೆಗಡೆ, ಲಕ್ಷ್ಮಣನಾಗಿ ನಾರಾಯಣ ಯಾಜಿ ಸಾಲೆಬೈಲು ಹಾಗೂ ರಾವಣನಾಗಿ ಡಾ.ವಿನಾಯಕ ಭಟ್ ಗಾಳೀಮನೆ ಇವರು ಅರ್ಥಹೇಳಿ ತಾಳಮದ್ದಳೆಯನ್ನು ಯಶಸ್ವಿಗೊಳಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್, ಮದ್ದಳೆಗಾರರಾಗಿ ಶ್ರೀಪಾದ ಭಟ್ ಕಡತೋಕಾ ಪಿ.ಕೆ.ಹೆಗಡೆ ಹರಿಕೇರಿ ಹಾಗೂ ಚಂಡೆವಾದನದಲ್ಲಿ ಬಾಲ ಪ್ರತಿಭೆ ಕು.ಮಯೂರ ಹೆಗಡೆ ತಾಳಮದ್ದಳೆಯ ಯಶಸ್ಸಿನ ಪಾಲುದಾರರಾದರು. ಇಲ್ಲಿಗೆ ಮೊದಲ ದಿನದ ಯಕ್ಷರಂಗೋತ್ಸವವು ಸಮಾಪ್ತವಾಯಿತು.

ಯಕ್ಷರಂಗೋತ್ಸವದ ಎರಡನೇಯ ದಿನ ಬೆಳಿಗ್ಗೆ ಯಕ್ಷಗಾನದ ಮುಮ್ಮೇಳದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಯಕ್ಷಗಾನದ ಮುಮ್ಮೇಳದ ಅಂದರೆ ಕುಣಿತ ಅಭಿನಯದ ಸ್ವರೂಪದ ಕರಿತು ನಡೆದ ಈ ಸಂವಾದದಲ್ಲಿ ಐವತ್ತಕ್ಕಿಂತ ಹೆಚ್ಚು ಜನ ಕಲಾಸಕ್ತರು ಸಕ್ರಿಯವಾಗಿ ಭಾಗವಹಿಸಿದರು. ಹಿರಿಯ ವೇಷಧಾರಿ ಕೆರೆಮನೆ ಶಿವಾನಂದ ಹೆಗಡೆಯವರು ತಮ್ಮ ಸಾರಥ್ಯದ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ಪ್ರಸ್ತುತ ಪಡಿಸುವ ಪ್ರದರ್ಶನದ ತುಣುಕುಗಳನ್ನು ಪ್ರದರ್ಶಿಸಿ ಅಲ್ಲಿ ನಿರ್ದೇಶನವು ಹೇಗೆ ಪ್ರದರ್ಶನದ ಅಚ್ಚುಕಟ್ಟುತನಕ್ಕೆ ಮತ್ತು ಕಲಾತ್ಮಕತೆಗೆ ಕಾರಣವಾಗಿದೆ ಎಂದು ವಿವರಿಸಿದರು. ಇದರ ಜೊತೆ ಯಕ್ಷಗಾನ ಪ್ರದರ್ಶನದಲ್ಲಿ ನಿರ್ದೇಶನದ ಅಗತ್ಯ, ವ್ಯಾಪ್ತಿ ಹಾಗೂ ನಿರ್ದೇಶನದ ಕೊರತೆಯ ಅನಾಹುತಗಳ ಮೇಲೆ ಯಕ್ಷಗಾನದ ತಜ್ಞ ವಿದ್ವಾಂಸರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಹಾಗೂ ಯಕ್ಷರಂಗ ಮಾಸಪತ್ರಿಕೆಯ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಇವರು ಸಂವಾದ ನಡೆಸಿದರೆ ಸೇರಿದ ಕಲಾಸಕ್ತರು ಮತ್ತು ಹವ್ಯಾಸೀ ಕಲಾವಿದರು ಹಾಗೂ ಭಾಗವತರುಗಳು ಕುತೂಹಲಕರವಾದ ಪ್ರಶ್ನೆಗಳನ್ನು ಕೇಳುತ್ತಾ ಸಂವಾದದಲ್ಲಿ ಪಾಲ್ಗೊಂಡುದು ವಿಶೇಷವಾಗಿತ್ತು. ಎರಡನೇಯ ಭಾಗವಾಗಿ ಹವ್ಯಾಸೀ ವೇಷಧಾರಿ ಕೆ.ಜಿ.ಮಂಜುನಾಥ ಪುರಪ್ಪೆಮನೆಯವರು ಕಿರೀಟದ ವೇಷದಲ್ಲಿ ಹಲವು ಪದ್ಯಗಳ ಮಾದರೀ ನೃತ್ಯಾಭಿನಯವನ್ನು ತೋರಿಸಿದರು.

ಸಂವಾದದಲ್ಲಿ ಅತಿಥಿಗಳಾಗಿ ಹಿರಿಯ ಸಂಶೋಧಕ ಡಾ.ವಿಜಯನಳಿನಿ ರಮೇಶ್, ಚಿಂತಕ ಡಾ.ಜಿ.ಎ.ಹೆಗಡೆ ಸೋಂದಾ, ಭರತನಾಟ್ಯ ವಿದ್ವಾಂಸರೂ ಹಾಗೂ ಯಕ್ಷಗಾನ ವೇಷಧಾರಿಗಳೂ ಆದ ಶಂಕರ ಭಟ್ ನಾಟ್ಯಾಚಾರ್ಯ, ಯಕ್ಷಗಾನ ವಿಮರ್ಶಕ ನಿತ್ಯಾನಂದ ಹೆಗಡೆ ಮೂರೂರು, ವೇಷಧಾರಿ ಮಹಾಬಲೇಶ್ವರ ಭಟ್ ಇಟಗಿ ಹಾಗೂ ಸಾಗರದ ರಂಗಚಿಂತಕ ದೇವೇಂದ್ರ ಬೆಳೆಯೂರು ಭಾಗವಹಿಸಿದುದು ವಿಶೇಷವಾಗಿತ್ತು. ಕಲಾಸಕ್ತರಲ್ಲಿ ಹವ್ಯಾಸೀ ವೇಷಧಾರಿ ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ, ಜಿ.ಜಿ.ಹೆಗಡೆ ಕೊಂಡದಕುಳಿ ಹಾಗೂ ಕವಯತ್ರಿ ಕಮಲಾ ಕೊಂಡದಕುಳಿ, ಅರ್ಥಧಾರಿ ಜಯರಾಮ ಭಟ್ ಗುಂಜಗೋಡು, ಎಂ.ಕೆ.ಹೆಗಡೆ ಹಳದೋಟ, ಶ್ರೀಕಾಂತ ಭಟ್ ಮುತ್ತಿಗೆ, ಕೇಶವ ಹೆಗಡೆ ನಾಗರಕುರ, ಹವ್ಯಾಸೀ ವೇಷಧಾರಿ ಮೋಹನ ನಾಯ್ಕ ಕೂಜಳ್ಳಿ, ವಿ.ಎಂ.ಹೆಗಡೆ ಶಿಂಗು ತ್ಯಾಗಲೀ ವಿ.ಜಿ.ಹೆಗಡೆ ಗುಡಗೆ, ವೇಷಧಾರಿ ಪಿ.ಡಿ.ಭಟ್ ಹೊದಕೆ ಶೀರೂರು, ತಬಲಾವಾದಕ ಎನ್.ಜಿ.ಹೆಗಡೆ ಹಡಿನಬಾಳ, ಬರಹಗಾರ ಶಂಕರಭಟ್ ಮಾಡಗೇರಿ, ಹಿರಿಯ ವೇಷಧಾರಿ ಅನಂತ ಹಾವಗೋಡಿ ಗೋಕರ್ಣ ಮೊದಲಾದವರು ಭಾಗವಹಿಸಿದ್ದರು.

ಸಂವಾದದ ಕೊನೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ಅವಲೋಕನ ನುಡಿಯನ್ನು ಆಡುತ್ತಾ ಸಂವಾದವು ಯಕ್ಷಗಾನದ ಕುರಿತು ಹೆಚ್ಚಿನ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಸಂಚಲನೆ ಮೂಡಿಸಿದೆ ಎಂದು ನುಡಿದರು.
ಎರಡನೇಯ ದಿನವೂ ಕೂಡ ಯಕ್ಷಗಾನ ಪುಸ್ತಕಗಳನ್ನು ಪರಿಚಯಿಸಿ ಸ್ಮರಣಿಕೆಯಾಗಿ ನೀಡಲಾಯಿತು. ಸಂವಾದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಗಣೇಶ ಯಾಜಿ ಇಡಗುಂಜಿ, ರಾಮರಾವ್ ಪುರಪ್ಪೆಮನೆ ಹಾಗೂ ವೇಣುಗೋಪಾಲ ಪುರಪ್ಪೆಮನೆ ಇವರು ಭಾಗÀವತರಾಗಿಯೂ ಮದ್ದಳೆಗಾರರಾಗಿ ನರಸಿಂಹ ಹೆಗಡೆ ಮೂರೂರು ಇವರೂ ಚಂಡೆವಾದಕರಾಗಿ ಗಜಾನನ ಹೆಗಡೆ ಮೂರೂರು ಇವರುಗಳೂ ಸಹಕರಿಸಿದರು. ಎರಡೂ ದಿನಗಳ ಸಂವಾದವನ್ನು ವ್ಯವಸ್ಥಿತವಾಗಿ ವಿಡಿಯೋ ದಾಖಲೀಕರಣವನ್ನು ಪಿ.ಕೆ.ಹೆಗಡೆ ಹರಿಕೇರಿಯವರು ನಿರ್ವಹಿಸಿದರು.

ಅಪರಾಹ್ನ 3 ಗಂಟೆಯಿಂದ ತಾಳಮದ್ದಳೆಯ ತಂತ್ರಗಳ ಕುರಿತು ಸಂವಾದ ಗೋಷ್ಠಿ ನಡೆಯಿತು. ಪ್ರಸಿದ್ಧ ಅರ್ಥಧಾರಿ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿಯವರು ಈ ಕುರಿತು ಮಾತನಾಡಿ ಉದಯೋನ್ಮುಖ ಅರ್ಥಧಾರಿಗಳಿಗೆ ಅರ್ಥಗಾರಿಕೆಯ ಕೌಶಲ್ಯವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದರು. ಸಂವಾದದ ವೇದಿಕೆಯಲ್ಲಿ ರಂಗಕರ್ಮಿ ದೇವೇಂದ್ರ ಬೆಳೆಯೂರರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದರು. ಕೆರೆಮನೆ ಶಿವಾನಂದ ಹೆಗಡೆ, ಕೆಪ್ಪೆಕೆರೆ ಸುಬ್ರಾಯ ಭಾಗವತ, ಜಯರಾಮ ಭಟ್ ಗುಂಜಗೋಡು, ಡಾ.ವಿಜಯನಳಿನಿ ರಮೇಶ್ ಮೊದಲಾದವರು ಪ್ರಶ್ನೆಗಳನ್ನು ಕೇಳಿ ಸಂವಾದವನ್ನು ಮುನ್ನಡೆಸಿದರು. ಎರಡೂ ದಿನಗಳ ಸಂವಾದದಲ್ಲಿ ಯಕ್ಷಗಾನ ವಿದ್ವಾಂಸರೂ ಆದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆಯವರು ಉಪಸ್ಥಿತರಿದ್ದರು.

ಸಂಜೆ 6ಗಂಟೆಗೆ ಯಕ್ಷರಂಗೋತ್ಸವದ ಸಮಾರೋಪ ಸಮಾರಂಭ ನಡೆಯಿತು ಮತ್ತು ಸಾಮಾಜಿಕ ಮುಖಂಡರಾದ ಕಡತೋಕಾ ಶಿವಾನಂದ ಹೆಗಡೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ವೇದಿಕೆಯಲ್ಲಿ ಯಕ್ಷರಂಗ ಮಾಸಪತ್ರಿಕೆಯು ಕೊಡುವ ದಿ.ವಿ.ಆರ್.ಹೆಗಡೆ ಹೆಗಡೆಮನೆ ಸಂಘಟಕ ಪ್ರಶಸ್ತಿಯನ್ನು ಸಿದ್ದಾಪುರದ ಹಿರಿಯ ನ್ಯಾಯವಾದಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಆರ್.ಎಂ.ಹೆಗಡೆ ಬಾಳೇಸರ ಇವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಬರಹಗಾರ ಮತ್ತು ಪತ್ರಕರ್ತ ಜಿ.ಜಿ.ಹೆಗಡೆ ಬಾಳಗೋಡು ಅವರು ಆರ್.ಎಂ.ಹೆಗಡೆಯವರ ಅಬಿನಂದನಾ ನುಡಿಗಳನ್ನಾಡಿ ಅವರ ಸಾಧನೆಗಳನ್ನು ವರ್ಣಿಸಿದ್ದರು.

ಪ್ರಶಸ್ತಿ ಸ್ವೀಕರಿಸಿದ ನ್ಯಾಯವಾದಿ ಆರ್.ಎಂ.ಹೆಗಡೆ ಬಾಳೆಸರ ಅವರು ತಾನು ಯಕ್ಷಗಾನ ಕಲಾಸಕ್ತನು ಮಾತ್ರವಾದರೂ ನನ್ನನ್ನು ಗುರುತಿಸಿ ಗೌರವಿಸಿದುದಕ್ಕೆ ಸಜ್ಜನಿಕೆಯಿಂದ ಧನ್ಯವಾದಗಳನ್ನು ಸಮರ್ಪಿಸಿದರು. ಅತಿಥಿಗಳಾಗಿ ಎಂ.ಜಿ.ಭಟ್ ಸುವರ್ಣಗದ್ದೆ, ಹಾಗೂ ನಾಗರಿಕ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ್, ಹಾಘೂ ಉದ್ಯಮಿ ಎನ್.ಆರ್.ಹೆಗಡೆ ರಾಘೋಣ ಅವರು ಕಾರ್ಯಕ್ರಮದ ಸಂಯೋಜನೆಯ ಹಿಂದಿರು ದೂರದರ್ಶಿತ್ವವನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಡತೋಕಾ ಶಿವಾನಂದ ಹೆಗಡೆಯವರು ಯಕ್ಷರಂಗ ಮಾಸಪತ್ರಿಕೆಯು ಜಿಲ್ಲೆಯ ಯಕ್ಷಗಾನದ ಏಕೈಕ ಪತ್ರಿಕೆಯಾಗಿದ್ದು ಇಂತಹ ರಚನಾತ್ಮಕ ಕೆಲಸಗಳನ್ನು ಮಾಡಿ ಮಾದರಿಯಾಗಿದೆ. ಇದನ್ನು ನಾವು ಗುರುತಿಸಬೇಕಾಗಿದೆ ಎಂದು ಸಂಘಟಕರನ್ನು ಪ್ರಶಂಸಿಸಿದರು. ಛಾಯಾಗ್ರಾಹಕ ಪಿ.ಕೆ.ಹೆಗಡೆ ಹರಿಕೇರಿ ಹಾಗೂ ಧ್ವನಿವರ್ಧಕ ವ್ಯವಸ್ಥಾಪಕರಾದ ಅಶೋಕ ಭಂಡಾರಿ ಹೊಳೆಗದ್ದೆ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಯಕ್ಷರಂಗದ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತರು ಇಡಿಯ ಯಕ್ಷರಂಗೋತ್ಸವದ ವಂದನಾರ್ಪಣೆಯನ್ನು ಮಾಡಿದರು.

ಕೊನೆಯಲ್ಲಿ ಪಾರ್ತಿಸುಬ್ಬ ವಿರಚಿತ ಅಂಗದ ಸಂಧಾನ ತಾಳಮದ್ದಳೆ ನಡೆಯಿತು. ಪ್ರಸಿದ್ಧ ಅರ್ಥಧಾರಿಗಳಾದ ವಾಸುದೇವ ರಂಗಾಭಟ್ಟರು ಅಂಗದನಾಗಿಯೂ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿಯವರು ಪ್ರಹಸ್ತನಾಗಿಯೂ ಹಾಗೂ ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿಯವರು ರಾವಣನಾಗಿಯೂ ಮನೋಜ್ಞವಾಗಿ ಅರ್ಥಹೇಳಿ ಜನರನ್ನು ರಂಜಿಸಿದರು. ಹಿಮ್ಮೇಳದಲ್ಲಿ ಭಾಗವತರುಗಳಾದ ಜೋಗೀಮನೆ ಗೋಪಾಲಕೃಷ್ಣ ಭಾಗವತ ಹಾಗೂ ಗಣೇಶ ಯಾಜಿ ಇಡಗುಂಜಿ ಇವರು ತಮ್ಮ ಸುಶ್ರಾವ್ಯ ಭಾಗವತಿಕೆಯಿಂದ ತಾಳಮದ್ದಳೆಗೆ ಹೊಸ ಮೆರಗನ್ನು ನೀಡಿದರು. ಮದ್ದಳೆಯಲ್ಲಿ ಶ್ರೀಪಾದ ಭಟ್ ಕಡತೋಕಾ ಹಾಗೂ ಪಿ.ಕೆ.ಹೆಗಡೆ ಹರಿಕೇರಿಯವರು ಹಾಗೂ ಚಂಡೆವಾದನದಲ್ಲಿ ನರಸಿಂಹ ಹೆಗಡೆ ಮೂರೂರು ಇವರು ಹಿಮ್ಮೇಳದ ಯಶಸ್ಸಿಗೆ ಕಾರಣರಾದರು.

ಪ್ರತಿವರ್ಷ ನಡೆಯುತ್ತಿದ್ದ ಯಕ್ಷರಂಗೋತ್ಸವವು ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ನಡೆದಿರಲಿಲ್ಲ. ಇದೀಗ ಮತ್ತೆ ಯಕ್ಷರಂಗೋತ್ಸವವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಹಳದೀಪುರದ ಸಾಂಸ್ಕøತಿಕ ಸಂಸ್ಥೆ ಯಕ್ಷಲೋಕ ಇದು ಯಶಸ್ವಿಯಾಗಿ ನಡೆಸಿದ್ದು ನೂರಾರು ಜನ ಪಾಲ್ಗೊಂಡು ಅವಿಸ್ಮರಣೀಯ ಅನುಭವವನ್ನು ಪಡೆದರು.

Back to top button