ಕುಮಟಾ : ವಿಶ್ವ ಆರೋಗ್ಯ ಸಂಸ್ಥೆಯು 2004 ರಲ್ಲಿ ಪ್ರತಿವರ್ಷ ಜೂನ್ 14 ರಂದು ರಕ್ತದಾನ ದಿನವನ್ನಾಗಿ ಘೋಷಿಸಿತು. ಈ ದಿನದಂದು ಮಹತ್ವದ ದಾನಗಳಲ್ಲಿ ಒಂದಾದ ರಕ್ತದಾನದ ದಿನವನ್ನು ರಕ್ತದಾನದ ಮೂಲಕವೇ ಆಚರಿಸಲಾಗುತ್ತಿದೆ ಹಾಗೂ ಇದರ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇದರ ಕುರಿತು ಅರಿವು ಮೂಡಿಸುವುದು ಬಹಳ ಅಗತ್ಯವಾಗಿದೆ ಎಂಬುದಾಗಿ ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ, ರೆಡ್ ರಿಬ್ಬನ್ ಘಟಕ ಹಾಗೂ ರೆಡ್ ಕ್ರಾಸ್ ಘಟಕಗಳು, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಮತ್ತು ರೋಟರಿ ಕ್ಲಬ್ ಕುಮಟಾ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್ ಬಗ್ಗೋಣ ಕುಮಟಾ ಇಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರು ಹಾಗೂ ಬ್ಲಡ್ ಬ್ಯಾಂಕ್‌ನ ಅಧಿಕಾರಿಗಳಾದ ಡಾ. ನಮೃತಾ ಶಾನಭಾಗ ಕರೆ ನೀಡಿದರು.
ಬಳಿಕ ಮಾತನಾಡಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ ಇವರು ಪ್ರತಿವರ್ಷ ತಮ್ಮ ಮಹಾವಿದ್ಯಾಲಯದಲ್ಲಿ ಆಚರಿಸುವ ರಕ್ತದಾನದ ಮಹತ್ವ ಹಾಗೂ ಏಡ್ಸ್ ಜಾಗೃತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ರೊ. ಯೋಗೇಶ ಕೋಡ್ಕಣಿ ಹಾಗೂ ರೊ. ಫ್ರೆಂಕಿ ಫರ್ನಾಂಡಿಸ್, ಎಂಟು ಜನ ಬಿ.ಎಡ್. ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ ಇವರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ. ಜಿ. ಡಿ. ಭಟ್, ಎನ್.ಎಸ್.ಎಸ್. ಘಟಕದ ಅಧಿಕಾರಿಗಳಾದ ಶ್ರೀ. ಉಮೇಶ ನಾಯ್ಕ ಎಸ್.ಜೆ. ಹಾಗೂ ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ರೊ. ಶಿಲ್ಪಾ ದಿನರಾಜ, ಕೋಶಾಧಿಕಾರಿಗಳಾದ ರೊ. ದೀಪಾ ನಾಯಕ, ರೊ. ಡಾ. ಶ್ರೀದೇವಿ ಭಟ್, ರೊ. ಸತೀಶ ನಾಯ್ಕ, ಅಸಿಸ್ಟಂಟ್ ಗವರ್ನರ್ ರೊ. ನಾಗರಾಜ ಜೋಶಿ ಕಾರವಾರ ಇವರು ಭಾಗವಹಿಸಿದ್ದರು.