ಕಾರವಾರ: 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರಕನ್ನಡ ಜಿಲ್ಲೆ ಐದನೇ ಸ್ಥಾನ ಪಡೆದಿದೆ. ಹೌದು, ಉತ್ತರ ಕನ್ನಡ ಜಿಲ್ಲೆ ಶೇಕಡಾ 74.33 ಪ್ರತಿಶತದೊಂದಿಗೆ ಐದನೇ ಸ್ಥಾನಪಡೆದಿದೆ. ದಕ್ಷಿಣ ಕನ್ನಡ ಪ್ರಥಮ ಹಾಗು ಉಡುಪಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ. ಉತ್ತರಕನ್ನಡ 2020 ನೇ ಸಾಲಿನಲ್ಲಿ ಜಿಲ್ಲೆಯು 80.97 ಪ್ರತಿಶತ ಗಳಿಸಿತ್ತು. ಆದರೆ ಈ ಬಾರಿ 74.33% ಗೆ ಕುಸಿದಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು 5,99,794 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 4.02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಮ್ರಾನ್ ಶೇಷರಾವ್ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಮ್ರಾನ್ ಶೇಷರಾವ್ ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿ ಎನ್ನಲಾಗಿದೆ.
ವಾಣಿಜ್ಯ ವಿಭಾಗದ ಸಾಧನೆ
ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು 600 ಅಂಕಗಳಿಗೆ 596 ಅಂಕ ಗಳಿಸಿ ಟಾಪರ್ಸ್ ಆಗಿದ್ದು, ಬೆಂಗಳೂರಿನ ಜೈನ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾನವ ವಿನಯ್ ಕೇಜ್ರಿವಾಲ್, ಬೆಂಗಳೂರಿನ ಬಿಜಿಎಸ್ ಕಾಲೇಜಿನ ನೀಲು ಸಿಂಗ್, ಬೆಂಗಳೂರಿನ ಸೆಂಟ್ ಕ್ಲಾರಟ್ ಪಿಯು ಕಾಲೇಜಿನ ಆಕಾಶ್ ದಾಸ್ ಹಾಗೂ ಚಿಕ್ಕಬಳ್ಳಾಪುರ ಕಾಲೇಜಿನ ನೇಹಾ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದ ಸಾಧನೆ
ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಕಾಲೇಜಿನ ಶ್ವೇತಾ ಭೀಮಾ ಶಂಕರ್ ಭೈರಗೊಂಡ ಹಾಗೂ ಮಡಿವಾಳರಾ ಸಹನಾ 600 ಅಂಕಗಳಿಗೆ 594 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್