ಪೊಲೀಸರ ವರದಿ ನೆಗೆಟಿವ್:ದೂರವಾದ ಆತಂಕ

[sliders_pack id=”1487″]

ಅಂಕೋಲಾ : ತಾಲೂಕಿನಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ವಿವಿಧ ಅಧಿಕಾರಿಗಳ ಸಭೆ ಕರೆದು ಈವರೆಗೆ ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ಕೈಗೊಂಡ ಸೂಕ್ತ ಕ್ರಮ ಮತ್ತು ಮುಂಜಾಗ್ರತೆ ಕುರಿತು ಮಾಹಿತಿ ಪಡೆದುಕೊಂಡರು.
ಜನರ ಆರೋಗ್ಯ ಸುರಕ್ಷತೆ ದೃಷ್ಠಿಯಿಂದ ಮತ್ತಷ್ಟು ಮುಂಜಾಗ್ರತೆ ಹಾಗೂ ಕೆಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಶಿರಸಿಯ ಸೋಂಕಿತ ವ್ಯಕ್ತಿ ಕಾರವಾರದಲ್ಲಿ ನಿಧನರಾದ ಬಳಿಕ ತಲೆದೋರಿದ ಶವ ಸಂಸ್ಕಾರ ಬಿಕ್ಕಟ್ಟಿನ ವಿಷಯ ಪ್ರಸ್ತಾಪಿಸಿ ಮಾತನಾಡಿದ ರೂಪಾಲಿ ನಾಯ್ಕ ಮೃತಪಟ್ಟವರ ಬಗ್ಗೆ ಇಲ್ಲವೇ ಸೋಂಕಿತರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು, ಭಯ ಹುಟ್ಟಿಸುವುದು, ಶವ ಸಂಸ್ಕಾರ ಮಾಡಲು ತೊಂದರೆ ನೀಡುವುದು, ಕಾನೂನಿನ ಪ್ರಕಾರ ಅಪರಾಧವಾಗಿದೆ. ಮನುಷ್ಯನ ಹುಟ್ಟು ಮತ್ತು ಸಾವು ಯಾರ ಅಂಕೆಯಲ್ಲೂ ಇಲ್ಲ. ನಾವೆಲ್ಲರೂ ಕೊರೊನಾ ವಿರುದ್ಧ ಮಾನವೀಯ ನೆಲೆಯಲ್ಲಿ ಒಂದಾಗಿ ಹೋರಾಡಬೇಕಿದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಅನಿವಾರ್ಯವಾದರೆ ಜನವಸತಿ ರಹಿತ ಅರಣ್ಯ ಇಲ್ಲವೇ ಇತರೆ ಪ್ರದೇಶವನ್ನು ಶವ ಸಂಸ್ಕಾರಕ್ಕೆ ಗುರುತಿಸಿಡುವಂತೆ ಸಹಾಯಕ ಅರಣ್ಯ ಸಂರಕ್ಷಣಾಧೀಕಾರಿ ಮಂಜುನಾಥ ನಾವೆ, ವಲಯ ಸಂರಕ್ಷಣಾಧಿಕಾರಿ ವಿ.ಪಿ.ನಾಯ್ಕ ರವರಿಗೆ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಕೃಷ್ಣಾನಂದ ನಾಯ್ಕ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ ಸಾವಂತ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ ಹಾಜರಿದ್ದರು.
ಗಂಟಲು ದ್ರವ ವರದಿ : ಬುಧವಾರ ಅಂಕೋಲಾದಿಂದ ಮತ್ತೆ ಹೊಸದಾಗಿ 41 ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟಾರೆಯಾಗಿ ಈವರೆಗೆ 885 ಗಂಟಲುದ್ರವ ಪರೀಕ್ಷೆಗೆ ಕಳುಹಿಸಿದಂತಾಗಿದೆ. ನಿನ್ನೆ ಬಂದ ವರದಿಗಳಲ್ಲಿ ಈ ಹಿಂದೆ ಅಗ್ರಗೋಣ- ಶೇಡಿಕಟ್ಟಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದು ಕೊಂಚ ಸಮಾಧಾನ ತಂದಿದ್ದರೆ, ಇಂದು ಬಂದ ಹಲವು ನೆಗೆಟಿವ್ ವರದಿಗಳು ಪಿ.ಎಸ್.ಐ ಸಹಿತ ಅಂಕೋಲಾದ ಪೋಲಿಸ್ ಸಿಬ್ಬಂದಿಗಳದ್ದು ಎಂದು ತಿಳಿದುಬಂದಿದೆ. ಇವರೆಲ್ಲರೂ ಸೋಂಕಿತ ಅಗ್ರಗೋಣ ಬೀಟ್ ಪೋಲಿಸನೋರ್ವನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣಕ್ಕೆ ಕ್ವಾರೆಂಟೈನ್‍ನಲ್ಲಿದ್ದು ಗಂಟಲುದ್ರವ ಪರೀಕ್ಷೆಗೆ ಒಳಪಟ್ಟಿದ್ದರು ಎನ್ನಲಾಗಿದ್ದು, ಈಗ ಬಂದ ನೆಗೆಟಿವ್ ವರದಿ ಕೊರೊನಾ ವಾರಿಯರ್ಸ್ ಗಳ ನೆಮ್ಮದಿಗೆ ಕಾರಣವಾಗಿದೆ.
ಹಲವು ವರ್ತಕರು ಮತ್ತಿತ್ತರ ವ್ಯಾಪಾರಸ್ಥರ ಸಂಘದ ವತಿಯಿಂದ ಪಟ್ಟಣದಲ್ಲಿ ಆರಂಭಿಸಲಾದ ಮಧ್ಯಾಹ್ನದ ಲಾಕ್-ಡೌನ್ ಸ್ವಯಂಪ್ರೇರಿತವಾಗಿದ್ದು, ಆರಂಭದ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version