ಅಂಗಡಿಯಲ್ಲಿ ಕಳ್ಳತನ: ನಗದು ಹಣ,ಬೆಳ್ಳಿಯ ದೇವರ ಮೂರ್ತಿ ಕದ್ದೊಯ್ದ ಕಳ್ಳ

ಹೊನ್ನಾವರ: ತಾಲೂಕಿನ ಹಳದಿಪುರ ಚಿಪ್ಪಿಹಕ್ಕಲ ಕ್ರಾಸ್ ಸಮೀಪದ ‘ಗೀತಾ ಕೊಲ್ಡ್ರಿಂಕ್ಸ್’ ಅಂಗಡಿಯಲ್ಲಿ ಕಳ್ಳನ ಕೈಚಳಕ ತೋರಿಸಿದ್ದು, ನಗದು ಹಣ,ಬೆಳ್ಳಿಯ ದೇವರ ಮೂರ್ತಿ ಕದ್ದೊಯ್ದ ಘಟನೆ ನಡೆದಿದೆ.

ಹಳದಿಪುರದ ಬಾಬು ಭಂಡಾರಿ ಎನ್ನುವವರಿಗೆ ಸೇರಿದ ಅಂಗಡಿಯಲ್ಲಿ ಕಳ್ಳತನವಾಗಿದೆ‌. ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಬಂದು,ಅಂಗಡಿಯ ಚಿಲಕ ಮುರಿದು ತನ್ನ ಅಟ್ಟಹಾಸ ಮೆರೆದಿದ್ದಾನೆ. ಮೊದಲು ಅಂಗಡಿಯೊಳಗೆ ಅಳವಡಿಸಿದ ಸಿಸಿ ಕ್ಯಾಮರಾ ತಿರುಗಿಸಿದ್ದಾನೆ.

ನಂತರ ತನ್ನ ಕ್ರತ್ಯವೆಸಗಲು ಮುಂದಾಗಿದ್ದಾನೆ. ಅಂಗಡಿ ಮಾಲೀಕರು ತಮ್ಮ ವ್ಯಾಪಾರ, ವಹಿವಾಟಿಗಾಗಿ ಇಟ್ಟ ನಗದು ಹಣವಿರುವ ಡಬ್ಬವನ್ನೆ ಎಗರಿಸಿ ಅದರಲ್ಲಿದ್ದ ಅಂದಾಜು 35,000 ನಗದು,ಬೆಳ್ಳಿಯ ಎರಡು ಇಂಚಿನ ಆಂಜನೇಯ ಮೂರ್ತಿ ಕದ್ದೊಯ್ದು ಹಣ ಹಾಗೂ ಬೆಳ್ಳಿಮೂರ್ತಿ ತೆಗೆದು ಡಬ್ಬವನ್ನು ಅಂಗಡಿಯ ಹೊರಗಿನ ಚರಂಡಿಯಲ್ಲಿ ಬಿಸಾಡಿದ್ದಾನೆ‌.

ಸಿಸಿ ಕ್ಯಾಮರಾದ ದ್ರಶ್ಯ ಸಿಕ್ಕಿ ಪತ್ತೆಯಾಗಬಹುದೆಂದು ಕ್ಯಾಮರಾದ ಡಿವಿಆರ್ ಅದರಲ್ಲಿದ್ದ ಸಲಕರಣೆಗಳನ್ನು ಕಿತ್ತು ಅಂಗಡಿ ಸನಿಹದ ಚರಂಡಿಗೆಸೆದಿದ್ದಾನೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ ಹೊನ್ನಾವರ

Exit mobile version