ಮರಳುಗಾರಿಕೆ ನಿರ್ಭಂಧದಿಂದ ಆಗುವ ಸಮಸ್ಯೆ ಕುರಿತು ಸಭೆಯ ಗಮನ ಸೆಳೆದ ಶಾಸಕಿ: ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆ.
ಅಂಕೋಲಾ: ಕರಾವಳಿ ನಿಯಂತ್ರಣ ವಲಯದಲ್ಲಿ (ಸಿ ಆರ್ ಝಡ್ ವ್ಯಾಪ್ತಿಯಲ್ಲಿ )’ಮರಳುಗಾರಿಕೆ ನಿರ್ಬಂಧಸಿ ಹಸಿರು ನಿಯಂತ್ರಣ ಮಂಡಳಿ ಇತ್ತೀಚೆಗೆ ಆದೇಶ ಹೊರಡಿಸಿದ್ದು ಈ ಕುರಿತು ಅನುಸರಿಸಬೇಕಾದ ಕ್ರಮಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಚ್. ಹಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆಯಲಾಗಿತ್ತು.
ಮೀನುಗಾರಿಕೆ ಸಚಿವ ಎಸ್. ಅಂಗಾರ, ಇಂಧನ ಸಚಿವ ಸುನೀಲಕುಮಾರ್ ಸೇರಿದಂತೆ ಇತರರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ,ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ಕೊರತೆಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ದೀರ್ಘವಾದ ಚರ್ಚೆ ನಡೆಸಿ, ಈ ಹಿಂದೆ ಜಿಲ್ಲೆಯಕಾಳಿ,ಗಂಗಾವಳಿ ಮತ್ತಿತರ ನದಿಗಳಿಂದ ಮರಳು ತೆಗೆಯಲು ಪರವಾನಿಗೆ ನೀಡಲಾಗುತ್ತಿತ್ತು. ಆದರೆ ಈಗ ಕಾನೂನಿನ ತೊಡಕಿನ ವಿಚಾರ ಮುಂದಿಟ್ಟು ಏಕಾಏಕಿ ಮರಳುಗಾರಿಕೆಗೆ ಸ್ಥಗಿತಗೊಳಿಸಲಾಗಿದೆ.
ಇದರಿಂದ ಒಮ್ಮೇಲೆ ಮರಳು ಕೊರತೆ ಉದ್ಭವಿಸಿದ್ದು ಸರ್ಕಾರದಿಂದ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ.
ಸರ್ಕಾರದಿಂದ ಮಂಜೂರಾದ ಮನೆಗಳು ಸೇರಿ ಇತರೆ ಕಟ್ಟಡಗಳ ನಿರ್ಮಾಣಕ್ಕೆ ಮರಳು ಸಿಗದ ಪರಿಸ್ಥಿತಿ ಉಂಟಾಗಿದ್ದು, ಬಡ ಜನರು ಸಂಕಷ್ಟ ಪಡುವಂತಾಗಿದೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಜನ ಜೀವನದ ಮೇಲೂ ಪರಿಣಾಮ ಬೀರುತ್ತಿದ್ದು, ಈ ಕುರಿತು ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಆಲೋಚನೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು.
ಮರಳುಗಾರಿಕೆ ಸ್ಥಗಿತಗೊಂಡ ಕಾರಣ ಜಿಲ್ಲೆಯಲ್ಲಿ ಕಾಮಗಾರಿಗಳಿಗೆ ತೊಂದರೆ ಆಗುವ ಜೊತೆಗೆ, ಕೂಲಿಕಾರರು, ಸಾರಿಗೆ ಉದ್ಯಮ ಸೇರಿದಂತೆ ಇತರ ಹಲವಾರು ಜನರ ಪ್ರತಿದಿನದ ದುಡಿಮೆಗೂ ತೊಂದರೆ ಆಗಿರುವುದನ್ನು ಶಾಸಕಿ ರೂಪಾಲಿ ನಾಯ್ಕ ಸಭೆಯ ಗಮನಕ್ಕೆ ತಂದರು ಎನ್ನಲಾಗಿದೆ. ಸಂಬಂಧಿಸಿದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಇತರರು ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ