Follow Us On

WhatsApp Group
Important
Trending

ಗಾಳಿಯಲ್ಲಿ ಹಾರಿ ಬಂದು ಕಾಂಕ್ರೀಟ್ ರಸ್ತೆಯ ಮಧ್ಯೆ ಸಿಲುಕಿಕೊಂಡ ತೆಂಗಿನ ಮರ: ಭಕ್ತರ ಪಾಲಿಗೆ ದೈವಾನುಗ್ರಹದಿಂದಲೇ ಸಂಕಷ್ಟಗಳೆಲ್ಲವೂ ದೂರ – ದೂರ ?

ಅಂಕೋಲಾ: ಜೂನ್ ತಿಂಗಳ ಆರಂಭದಲ್ಲಿ ತಾಲೂಕಿನಲ್ಲಿ ವಾಡಿಕೆಗಿಂತ ತುಸು ಕಡಿಮೆ ಆಗಿದ್ದ ಮಳೆ, ತಿಂಗಳಾಂತ್ಯದಲ್ಲಿ ಅಬ್ಬರಿಸಿದಂತೆ ಕಂಡು ಬರುತ್ತಿದ್ದು, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದಂತಿದೆ.

ಗ್ರಾಮೀಣ ಭಾಗದ ಮುಖ್ಯ ರಸ್ತೆಗೆ ಹೊಂದಿಕೊಂಡ ಖಾಸಗಿ ಜಾಗದಲ್ಲಿದ್ದ ಅತೀ ಎತ್ತರದ ತೆಂಗಿನ ಮರವೊಂದು ಗಾಳಿ -ಮಳೆಗೆ ಸಿಲುಕಿ, ತೆಂಗಿನ ಮರದ ಮೇಲ್ಭಾಗ ತುಂಡಾಗಿ, ಗಾಳಿಯಲ್ಲಿ ಹಾರಿ ಬಂದು ಕಾಂಕ್ರೀಟ್ ರಸ್ತೆ ಮಧ್ಯೆ ಸಿಲುಕಿ ನಿಂತ ಘಟನೆ ತೆಂಕಣಕೇರಿ ಗ್ರಾಮದಲ್ಲಿ ನಡೆದಿದೆ. ಈ ಅಪರೂಪದ ಘಟನೆ ಸಂಜೆ ವೇಳೆ ನಡೆದಿದ್ದು, ಮಳೆಗಾಳಿ ಕಾರಣದಿಂದಲೂ ರಸ್ತೆ ಸಂಚಾರ ವಿರಳವಾಗಿತ್ತು.

ಅಲ್ಲದೇ ತೆಂಗಿನ ಗರಿಗಳು ವಿದ್ಯುತ್ ತಂತಿಗಳಿಗೆ ತಗುಲಿ ಕೊಂಡಿದ್ದರಿಂದ ಅಪಾಯದ ಸಾಧ್ಯತೆಗಳು ಕೇಳಿಬಂದಿದ್ದವು. ಆದರೂ ಅದೃಷ್ಯವಶಾತ್ ಯಾವುದೇ ಪ್ರಾಣ ಹಾನಿ – ನೋವುಗಳಾಗಿಲ್ಲ..ಅತಿ ಎತ್ತರದ ಹಳೆಯ ತೆಂಗಿನ ಮರ ಗಾಳಿಯ ರಭಸಕ್ಕೆ ಸಿಲುಕಿ, ಮಧ್ಯ ತುಂಡಾಗಿ ಚಂಡೆ ಸಹಿತ ಕಾಂಡ ಗಾಳಿಯಲ್ಲೇ ಹಾರಿ ಬಂದು, ನೋಡುವವರ ಕಣ್ಣಿಗೆ, ಮರವನ್ನು ಯಾರೋ ತಂದು ಕಾಂಕ್ರೀಟ್ ರಸ್ತೆಯ ಮಧ್ಯಭಾಗದಲ್ಲಿ ಇಟ್ಟು (ನೆಟ್ಟು) ಹೋದಂತೆ ಕೌತುಕ ಮೂಡಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ಗಳು,ಸ್ಥಳೀಯರ ಸಹಕಾರದಲ್ಲಿ ತುಂಡಾದ ತೆಂಗಿನ ಮರ ತೆರವು ಗೊಳಿಸಿ ಜನರ ಆತಂಕ ದೂರ ಮಾಡಿದರು. ಕಲ್ಪವೃಕ್ಷ ಎಂದು ಕರೆಯಿಸಿಕೊಳ್ಳುವ ತೆಂಗಿನ ಮರದಿಂದ ಎಲ್ಲಿಯೇ ಆದರೂ ಹಾನಿ ಆಗುವುದು ಬಹಳ ಕಡಿಮೆ. ಅಂತೆಯೇ ನಮ್ಮೂರಿನ ಆರಾಧ್ಯ ದೈವ ಶ್ರೀ ಬೊಮ್ಮಯ್ಯ ದೇವರ ಅನುಗ್ರಹದಿಂದ ನಮಗೆ ಬರುವ ತೊಂದರೆಗಳೆಲ್ಲ ಮಾಯವಾಗಿ ದೂರ ದೂರ ಆಗಿಬಿಡುತ್ತವೆ ಎನ್ನುವ ನಂಬಿಕೆ ಕೆಲ ಸ್ಥಳೀಯ ಭಕ್ತರದ್ದು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button