ರೈಲ್ವೆ ಗೇಟ್ ಹತ್ತಿರ ಗಿಡದ ಪೊದೆ ಬಳಿ ಪತ್ತೆಯಾದ ಮಹಿಳೆಯ ಮೃತ ದೇಹ: ಚಲಿಸುತ್ತಿರುವ ರೈಲ್ವೆಯಿಂದ ಬಿದ್ದು ಸತ್ತಳೇ ಅಥವಾ ಬೇರೆ ಕಾರಣಗಳಿರಬಹುದೇ?
ಅಂಕೋಲಾ: ಕೊಂಕಣ ರೈಲ್ವೆ ವ್ಯಾಪ್ತಿಯ ಗೋಕರ್ಣ ನಿಲ್ದಾಣದಿಂದ ಅಂಕೋಲಾ ನಿಲ್ದಾಣದ ಮಾರ್ಗಮಧ್ಯೆ ಗಿಡದ ಪೊದೆಯ ಬಳಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾದ ಘಟನೆ ತಾಲೂಕಿನ ಸಗಡಗೇರಿ – ಉಳುವರೆ ರೈಲ್ವೆ ಗೇಟ್ ಹತ್ತಿರ ನಡೆದಿದೆ. ಮಧ್ಯವಯಸ್ಕ ಈ ಮಹಿಳೆ ಯಾರು ? ಎಲ್ಲಿಂದ ಎಲ್ಲಿಗೆ ಹೇಗೆ ಹೊರಟಿದ್ದಳು ಎಂಬಿತ್ಯಾದಿ ವಿವರ ಈ ವರೆಗೂ ತಿಳಿದು ಬಂದಿಲ್ಲ. ಕೆಲವರ ಪ್ರಕಾರ ಈ ಮಹಿಳೆ ಯಾವುದೋ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವಾಗ, ಟಾಯ್ಲೆಟ್ ರೂಂ ಎಂದು ಇಲ್ಲವೇ ಇತರೆ ಕಾರಣಗಳಿಂದ ರೈಲ್ವೆ ಬಾಗಿಲ ಬಳಿ ಬಂದು ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಬಗ್ಗೆ ಕೇಳಿ ಬಂದಿದೆ.
ಹಾಗಾದರೆ ಈ ಮಹಿಳೆ ಒಬ್ಬಂಟಿಯಾಗಿಯೇ ಪ್ರಯಾಣಿಸುತ್ತಿದ್ದಳೇ ? ಇವಳ ಜೊತೆ ಕುಟುಂಬಸ್ಥರು ಅಥವಾ ಪರಿಚಿತರು ಇಲ್ಲವೇ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರು ಇಲ್ಲವೇ ರೈಲ್ವೆ ಸಿಬ್ಬಂದಿಗಳು ಯಾರೂ ಇವಳು ರೈಲ್ವೆ ಇಂದ ಬಿದ್ದಿರುವುದನ್ನು ಗಮನಿಸಿಲ್ಲವೇ ? ಅಥವಾ ಕೆಲ ಸಮಯದ ಬಳಿಕವಾದರೂ ಆಕೆ ರೈಲ್ವೆಯಲ್ಲಿ ಇರದಿರುವುದು ಅಥವಾ ಮನೆ ತಲುಪದಿರುವ ಕುರಿತು ಯಾರ ಗಮನಕ್ಕೂ ಬಂದಿಲ್ಲವೇ ? ಈ ಕುರಿತು ಎಲ್ಲಿಯೂ ಯಾರೊಬ್ಬರೂ ವಿಚಾರಿಸಲಿಲ್ಲವೇ ಎಂಬ ಮಾರ್ಮಿಕ ಪ್ರಶ್ನೆಗಳು ಕೇಳಿ ಬಂದoತಿದೆ.
ಈ ನಡುವೆ ಮಹಿಳೆ ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಳೆ, ಯಾರಾದರೂ ಕರೆದುಕೊಂಡು ಬಂದು ರೈಲ್ವೆಯಿಂದ ನೂಕಿದರೆ ? ಅಥವಾ ಬೇರೆಲ್ಲಿಂದಲೋ ಬಂದು ಇಲ್ಲಿ ಎಸೆದು ಹೋದರೆ ಎಂಬಿತ್ಯಾದಿ ಸಂಶಯದ ಮಾತು ಅಲ್ಲಲ್ಲಿ ಕೇಳಿ ಬಂದoತಿದೆ. ಆದರೆ ಬಹುತೇಕರ ಪ್ರಕಾರ ಈ ಮಹಿಳೆ ಚಲಿಸುತ್ತಿರುವ ರೈಲ್ವೆಯಿಂದ ಆಯತಪ್ಪಿ ಬಿದ್ದಿರುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗುತ್ತಿದ್ದು ಪೋಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಸದ್ಯ ಈ ಮಹಿಳೆಯ ಮೃತ ದೇಹವನ್ನು ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶೈತ್ಯಾಗಾರದಲ್ಲಿ ಇಡುವ ವ್ಯವಸ್ಥೆ ಮಾಡಿದ್ದು, ಈ ಮಹಿಳೆ ಬಗ್ಗೆ ಯಾರಿಗಾದರೂ ಗುರುತು – ಪರಿಚಯ ಇಲ್ಲವೇ ಏನಾದರೂ ವಿಷಯ ತಿಳಿದಿದ್ದರೆ ಅಂಕೋಲಾ ಪೋಲೀಸ್ ಠಾಣೆ ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಕೋರಿಕೊಳ್ಳಲಾಗಿದೆ. ಘಟನಾ ಸ್ಥಳದಿಂದ ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ಸಹಾಯಕ ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಸಿಪಿಐ ಸಂತೋಷ ಶೆಟ್ಟಿ ತಮ್ಮ ಸಿಬ್ಬಂದಿಗಳೊoದಿಗೆ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ