ಹೊನ್ನಾವರ: ಇಲ್ಲಿನ ರೇಷ್ಮೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ರೇಷ್ಮೆ ನಿರೀಕ್ಷಕ ಆರ್.ಎನ್.ನಾಯ್ಕ ಅವರನ್ನು ಶಿರಸಿಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ರೇಷ್ಮೆ ಸಹಾಯಕ ಉಪನಿರ್ದೇಶಕ ಶ್ರೀಧರ ಹೆಗಡೆ ಮಾತನಾಡಿ ರೇಷ್ಮೆ ನಿರೀಕ್ಷಕರಾಗಿ ಆರ್.ಎನ್.ನಾಯ್ಕ ಅವರು ಹೊನ್ನಾವರ ಸೇರಿದಂತೆ ಅನೇಕ ತಾಲೂಕುಗಳ ರೈತರಿಗೆ ರೇಷ್ಮೆ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುವ ಜತೆಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ರೈತರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರೈತರಿಗೆ ಉದ್ಯೋಗ ಖಾತ್ರಿ ಯೋಜನೆ, ರೇಷ್ಮೆ ಮನೆ ನಿರ್ಮಾಣ, ಸಸಿಗಳ ನಾಟಿ ಮತ್ತಿತರ ಕೆಲಸಕಾರ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಅನೇಕ ರೈತರು ರೇಷ್ಮೆ ಬೆಳೆ ಬೆಳೆಯುವುದರೊಂದಿಗೆ ಆರ್ಥಿಕವಾಗಿ ಮುಂದುವರಿಯಲು ಕಾರಣರಾದ ಆರ್.ಎನ್.ನಾಯ್ಕ ಅವರು ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭಹಾರೈಸಿದರು.
ನಿವೃತ್ತ ರೇಷ್ಮೆ ಅಧಿಕಾರಿ ಸಿ.ಎಸ್.ನಾಯ್ಕ ಕುಮಟಾ ಮಾತನಾಡಿ ರೇಷ್ಮೆ ನಿರೀಕ್ಷಕರಾದ ಆರ್.ಎನ್.ನಾಯ್ಕ ಅವರ ಸೇವಾ ಮತ್ತು ಸಹಕಾರ ಮನೋಭಾವವನ್ನು ಪ್ರಶಂಸಿದರು.
ಇಲಾಖೆಯ ಉಪನಿರ್ದೇಶಕಿ ವಿ.ವರಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರೇಷ್ಮೆ ಇಲಾಖೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆರ್.ಎನ್.ನಾಯ್ಕ ಅವರು ಶ್ರಮವಹಿಸಿದ್ದಾರೆ. ರೈತರೊಂದಿಗೆ ಬೆರೆತು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
[sliders_pack id=”1487″]ರೇಷ್ಮೆ ಬೆಳೆಗಾರರು, ರೈತರು ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ರೈತರಿಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯ ಸಿದ್ಧಾಪುರ, ಹೊನ್ನಾವರ, ಕುಮಟಾ, ಭಟ್ಕಳ, ಅಂಕೋಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದು, ಎಲ್ಲಾ ರೈತ ಬಾಂಧವರೂ ನನ್ನನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡಿದ್ದಾರೆ. ಉತ್ತಮ ಸಹಕಾರ ಮತ್ತು ಪ್ರೀತಿ ವಿಶ್ವಾಸದಿಂದ ನೋಡಿಕೊಂಡ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ.
-ಆರ್.ಎನ್.ನಾಯ್ಕ, ರೇಷ್ಮೆ ನಿರೀಕ್ಷಕ
ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ರೇಷ್ಮೆ ನಿರೀಕ್ಷಕ ಆರ್.ಎನ್.ನಾಯ್ಕ ಅವರನ್ನು ಮಾಲಾರ್ಪಣೆ ಮಾಡಿ ಶಾಲುಹೊದಿಸಿ ಸನ್ಮಾನಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. ಹಳಿಯಾಳದ ರೇಷ್ಮೆ ಇಲಾಖೆಯ ಸಿಬ್ಬಂದಿ ಕಲ್ಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೇಷ್ಮೆ ಸಿಬ್ಬಂದಿಗಳಾದ ಆರ್.ಟಿ.ನಾಯ್ಕ, ಹೊನ್ನಾವರ ರೇಷ್ಮೆ ಇಲಾಖೆಯ ಪ್ರಭಾರಿ ಎಚ್.ವಿ.ಪ್ರಭು ಹಾಗೂ ವಿವಿಧ ತಾಲೂಕಿನ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರ್.ಎನ್.ಶಾನಭಾಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲೀಲಾವತಿ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮ ಪಾಲನೆ ಮಾಡಿದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ