Follow Us On

WhatsApp Group
Important
Trending

ನದಿ ಮಧ್ಯೆಕೆಟ್ಟು ನಿಂತ ಬೋಟ್ | ಪ್ರಾಣಪಾಯದಿಂದ ಪಾರಾದ ಐವರು| ಮಬ್ಬು ಕತ್ತಲಲ್ಲೂನಡೆಯಿತು ಯಶಸ್ವಿ ಕಾರ್ಯಾಚರಣೆ

ಅಂಕೋಲಾ: ತಾಂತ್ರಿಕ ಸಮಸ್ಯೆಯಿಂದಾಗಿ ಜನರನ್ನು ದಾಟಿಸುವ ಸಣ್ಣ ಬೋಟ್ ಗಂಗಾವಳಿ ನದಿ ಮಧ್ಯೆ ಸಿಲುಕಿಕೊಳ್ಳುವಂತಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಗುಳ್ಳಾಪುರ ಬಳಿ ಸಂಭವಿಸಿದೆ.

ಕಳೆದ ವರ್ಷ ಗಂಗಾವಳಿ ನದಿ ಪ್ರವಾಹದಿಂದ ಯಲ್ಲಾಪುರ ವ್ಯಾಪ್ತಿಯನ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿ, ಅಂಕೋಲಾದ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹತ್ತಾರು ಹಳ್ಳಿಗಳ ರಸ್ತೆ ಸಂಪರ್ಕ ಕಡಿತ ಗೊಂಡಿತ್ತು. ತದನಂತರ ತಾತ್ಕಾಲಿಕ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ನೀರಿನ ಹರಿವು ಕಡಿಮೆಯಾದ ನಂತರ ಸಚಿವ ಹೆಬ್ಬಾರ್ ಅವರ 20 ಲಕ್ಷ ವಿಶೇಷ ಅನುದಾನ ಬಳಸಿ ಸ್ಥಳೀಯರ ನೇತೃತ್ವದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳಲಾಗಿತ್ತು.

ಮಳೆಗಾಲ ಆರಂಭವಾಗಿ ನದಿಯಲ್ಲಿ ಮತ್ತೆ ನೀರಿನ ಹರಿವು ಜಾಸ್ತಿಯಾಗಿದ್ದು ತಾತ್ಕಾಲಿಕ ಸೇತುವೆಯ ಮೇಲೂ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಹು ದಿನಗಳಿಂದ ಉಪಯೋಗಿಸದೆ ಇದ್ದ ಸಣ್ಣ ವಾಟರ್ ಬೋಟನ್ನು ಸಜ್ಜುಗೊಳಿಸಿ ನೀರಿಗೆ ಇಳಿಯ ಬಿಡಲಾಗಿತ್ತು.

ನಿನ್ನೆಯಿಂದ ಜನರನ್ನು ಸಾಗಿಸುವ ಕಾರ್ಯ ಆರಂಭಿಸಿದ ಬೋಟ್,ದಿನ ಕಳೆಯುವಷ್ಟರಲ್ಲಿ ,ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರಿನ ರಭಸದಿಂದ ಬೋಟಿನ ಮೋಟರ್ ಗೆ ನೀರು ನುಗ್ಗಿ ತಾಂತ್ರಿಕ ಸಮಸ್ಯೆಯಿಂದ ನದಿ ಮಧ್ಯೆ ಕೆಟ್ಟು ನಿಲ್ಲುವಂತಾಗಿದೆ ಎಂಬ ಮಾತು ಕೇಳಿ ಬಂದಿದೆ.

ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಜನರನ್ನು ಸಾಗಿಸುತ್ತಿರುವಾಗ ಬೋಟಿನ ಎಂಜಿನ್ ಕೆಟ್ಟ ಪರಿಣಾಮ ನೀರಿನ ಮಧ್ಯೆ ಸಿಲುಕಿಕೊಂಡು ಹಿಂದೆ ಮುಂದೆ ಚಲಿಸಲಾಗದ ಅಸಹಾಯಕತೆ ಉಂಟಾಯಿತು.

ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಬೋಟಿನಲ್ಲಿದ್ದವರು ಜೀವವನ್ನು ಕೈಯಲ್ಲಿ ಹಿಡಿದು ಪರಿತಪಿಸುವಂತಾಗಿತ್ತು.
ಬೋಟಿನಲ್ಲಿ 5 ಜನ ಸಿಲುಕಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಟಿಯಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಿದರು.

ಸ್ಥಳೀಯರ ವಿಶೇಷ ಸಹಕಾರದಲ್ಲಿ ಮಬ್ಬುಗತ್ತಲ ನಡುವೆಯೂ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಸಂಭವನೀಯ ಜಲ ಅವಘಡ ತಪ್ಪುವ ಮೂಲಕ ಎಲ್ಲರೂ ನೆಮ್ಮದಿ ನಿಟ್ಟುಸಿರು ಬಿಡುವಂತಾಯಿತು.

ಅಂಕೋಲಾ ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ, ಯಲ್ಲಾಪುರ ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಸ್ಥಳದಲ್ಲಿ ಹಾಜರಿದ್ದು ಬೋಟಿನಲ್ಲಿದ್ದವರ ಸುರಕ್ಷತೆಗೆ ಮಾರ್ಗದರ್ಶನ ಮಾಡಿದರು. ಈ ಮೂಲಕ ಬೋಟಿನಲ್ಲಿದ್ದ ಪ್ರಶಾಂತ ಪಟಗಾರ, ರಾಜೇಶ ಸಿದ್ಧಿ, ಸುದಿಪ್ ನಾಯ್ಕ, ಮಹೇಶ ಸಿದ್ಧಿ ಮತ್ತು ಸಚಿನ್ ಸೇರಿ ಐವರು ಜೀವಪಾಯದಿಂದ ಪಾರಾಗಿ, ಸುರಕ್ಷಿತವಾಗಿ ದಡ ಸೇರಿದಂತಾಗಿದೆ.

ಎರಡು ತಾಲೂಕುಗಳ ಅಗ್ನಿಶಾಮಕ ದಳದವರು,ಪೊಲೀಸ್ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು ಸ್ಥಳೀಯ ಕೆಲವರು ಸಹ ತಮ್ಮ ಜೀವದ ಹಂಗು ತೊರೆದು ಸಂಬಂಧಿತ ಇಲಾಖೆಗಳ ಜೊತೆ ವಿಶೇಷ ಸಹಕಾರ ನೀಡಿ, ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಕ್ಕೆ ಮತ್ತು ಸಹಕರಿಸಿದ ಸರ್ವರಿಗೆ ತಾಲೂಕಾ ಆಡಳಿತದ ಪರವಾಗಿ ತಹಶೀಲ್ದಾರ ಉದಯ ಕುಂಬಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡೋಂಗ್ರಿ ಗ್ರಾಪಂ ನೂತನ ಪಿಡಿಓ ಮಂಜುನಾಥ ಟಿಸಿ ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button