ಉತ್ತರಕನ್ನಡದ ಮಾಜಿ ಸಂಸದೆ ಮತ್ತು ಜಿಲ್ಲೆಯ ಸೊಸೆ ಈಗ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ| ರಾಷ್ಟ್ರಮಟ್ಟದ ವರ್ಚಸ್ವೀ ನಾಯಕಿಗೆ ಇದೆ ಅಪಾರ ರಾಜಕೀಯ ಅನುಭವ
ಅಂಕೋಲಾ: ಕೆನರಾ ಕ್ಷೇತ್ರದ ಮಾಜಿ ಸಂಸದೆಯಾಗಿ, ರಾಜಕೀಯ ರಂಗದಲ್ಲಿ ತನ್ನದೇ ಖ್ಯಾತಿ ಪಡೆದಿರುವ ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರ – ಅಂತರಾಷ್ರೀಯ ಮಟ್ಟದ ಹಿರಿಯ ನಾಯಕಿಯಾಗಿ ಗುರುತಿಸಿಕೊಂಡಿರುವ ಮಾರ್ಗರೇಟ್ ಆಳ್ವ ಅವರನ್ನು ಉಪರಾಷ್ಟಪತಿ ಅಭ್ಯರ್ಥಿ ಎಂದು ವಿಪಕ್ಷಗಳು ಘೋಷಿಸಿವೆ.
ತಮ್ಮ ಮಾವ ಜೋಕಿಮ್ ಆಳ್ವ ಅವರ ನಂತರ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ರಂಗಕ್ಕೆ ಇಳಿದ ಮಾರ್ಗರೇಟ್ ಆಳ್ವ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಗೋವಾ, ರಾಜಸ್ಥಾನ, ಉತ್ತರಾಖಂಡ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಹಿರಿಮೆ ಈ ಮಹಿಳಾ ನಾಯಕಿಗೆ ಸಲ್ಲುತ್ತದೆ.
ಕಾನೂನು ಪದವಿಧರೆಯಾದ ಮಾರ್ಗರೇಟ್ ಆಳ್ವ ಅವರು 1974 ರಲ್ಲಿ ಮೊದಲ ಬಾರಿಗೆ ರಾಜ್ಯ ಸಭೆಗೆ ಆಯ್ಕೆಯಾಗಿ, ನಂತರ ಮೂರು ಬಾರಿ ಪುನರಾಯ್ಕೆಗೊಂಡು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವೆ, ಯುವಜನ ಮತ್ತು ಕ್ರೀಡಾ ಸಚಿವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ,ಮಾನವ ಸಂಪನ್ಮೂಲ ಖಾತೆ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದಿರಾಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು, ವರ್ಚಸ್ವೀ ನಾಯಕಿಯಾಗಿದ್ದು, ತಮ್ಮ ನೇರ ನಡೆ-ನುಡಿಗಳಿಂದ ಪ್ರಸಿದ್ಧಿಯಾಗಿದ್ದಾರೆ.
ಭಾನುವಾರ ನಡೆದ 17 ಪಕ್ಷಗಳ ಮುಖಂಡರ ಸಭೆಯಲ್ಲಿ, ಮಾರ್ಗರೇಟ್ ಆಳ್ವ ಅವರ ಹೆಸರನ್ನು ಅಂತಿಮಗೊಳಿಸಿ ಸರ್ವಪಕ್ಷದ ಮುಖಂಡರ ಪರವಾಗಿ ಶರದ್ ಪವಾರ ಘೋಷಿಸಿದರು. ಅಗಸ್ಟ 6 ರಂದು ನಡೆಯಲಿರುವ ಉಪರಾಷ್ಟ್ರತಿ ಚುನಾವಣೆಗೆ ಮಂಗಳವಾರ ಆಳ್ವ ಅವರು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿದು ಬಂದಿದೆ. ಎನ್ ಡಿ ಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಶ ಧನಕರ ಅವರು ಸ್ಪರ್ಧಿಸಲಿದ್ದು ಚುನಾವಣ ಕಣದಲ್ಲಿ ಪ್ರಭಲ ಪೈಪೋಟಿಯ ನಿರೀಕ್ಷೆ ಇದೆ.
ದೇಶದ ಮಹತ್ವಪೂರ್ಣ ಹುದ್ದೆಗಳಲ್ಲಿ ಒಂದಾದ ಉಪರಾಷ್ಟಪತಿ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಅವರನ್ನು ವಿಪಕ್ಷಗಳು ಘೋಷಣೆ ಮಾಡಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು, ಹಾಗೂ ದಕ್ಷಿಣೋತ್ತರ ಕನ್ನಡ ಜಿಲ್ಲೆ ಹಾಗೂ ಕರುನಾಡು ಸೇರಿದಂತೆ ರಾಷ್ಟ್ರದ ಹಲವೆಡೆಯ ಪ್ರಮುಖರಿಂದ ಆಳ್ವ ಅವರು ಉತ್ತಮ ಅಭ್ಯರ್ಥಿ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ