ಕುಮಟಾ: ಪ್ರಾಚೀನ, ಸರ್ವಶ್ರೇಷ್ಠ, ವಿಶ್ವಗುರು, ಪವಿತ್ರ ತೀರ್ಥಸ್ಥಾನವಾದ ನಮ್ಮ ಭಾರತ ದೇಶದ ಸಂಪೂರ್ಣ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದರಿಂದ ಮಾತ್ರ ಮಾತೃಭೂಮಿಯ ಬಗ್ಗೆ ಅಭಿಮಾನ, ಗೌರವ ಬರಲು ಸಾಧ್ಯ ಎಂದು ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ ಆರ್ ಭಾರತಿ ಹೇಳಿದರು. ಅವರು ತಾಲೂಕಿನ ದೀವಗಿ ಗ್ರಾ ಪಂ ವ್ಯಾಪ್ತಿಯ ದುಂಡಕುಳಿಯಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ವಾತಂತ್ರ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಭಾರತ ಮತ್ತು ಭಾರತೀಯರ ಉತ್ಥಾನ ಮತ್ತು ಪತನದ ಕಥೆಯ ಜ್ಞಾನವೇ ನಮ್ಮನ್ನು ಪುನಃ ಭಾರತದ ಅಭಿವೃದ್ಧಿ ಮತ್ತು ಉತ್ಥಾನಕ್ಕೆ ನಾಂದಿಯಾಗುತ್ತದೆ ಅಂತಲೂ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದೀವಗಿ ಗ್ರಾ ಪಂ ಮಾಜಿ ಸದಸ್ಯ ಸುರೇಶ ಎಸ್ ಭಟ್ ಮಾತನಾಡಿ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮ ಶ್ಲಾಘನೀಯ ಅಂತ ಹೇಳಿ ಶುಭ ಹಾರೈಸಿದರು. ಶಾಲಾ ಎಸ್‌ಡಿಎಮ್‌ಸಿ ಉಪಾಧ್ಯಕ್ಷೆ ಮಾದೇವಿ ಎಮ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಊರ ಮುಖಂಡ ಮಾರುತಿ ಗೌಡ, ದೀವಗಿ ನವಗ್ರಾಮದ ಯುವ ಮುಂದಾಳು ವಿನಾಯಕ ಮಂಜುನಾಥ ಅಂಬಿಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕೊರೊನಾ ಸಮಯದಲ್ಲಿ ಸೇವಾ ಸಲ್ಲಿಸಿದ ಆಶಾ ಕಾರ್ಯಕರ್ತೆ ಸುಮಿತ್ರಾ ಬಲಿಯಾ ಗೌಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಮಾತೃಭೂಮಿಗಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಹರಿಶ್ಚಂದ್ರ ಗೌಡ ಸ್ವಾಗತಿಸಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಕೆ ಡಿ ಪೈ ವಂದಿಸಿದರು. ಶಿಕ್ಷಕಿ ರಾಧಾ ಶಾನಭಾಗ, ನಿಲೇಶ ಎನ್ ಅಂಬಿಗ, ಮಮತಾ ಎಲ್ ಅಂಬಿಗ, ಶಾಂಭವಿ ಎಚ್ ಅಂಬಿಗ, ಚೈತನ್ಯ ಆರ್ ಅಂಬಿಗ, ರಮ್ಯಾ ಆರ್ ಅಂಬಿಗ ಸಹಕರಿಸಿದರು.